ತುಮಕೂರು: ಜಿಲ್ಲಾಡಳಿತ ಮತ್ತು ತುಮಕೂರು ಮಹಾನಗರ ಪಾಲಿಕೆಯಿಂದ ನಗರದ 19 ಮತ್ತು 20 ನೇ ವಾರ್ಡ್‌ನ ಎನ್.ಆರ್.ಕಾಲೋನಿ ಹಾಗೂ ಅಂಬೇಡ್ಕರ್ ನಗರದ ಕೋವಿಡ್ ಸೋಂಕಿತರಿಗೆ ಮೆಡಿಸಿನ್ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು.
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಸೋಂಕಿತರಿಗೆ ಮೆಡಿಸಿನ್ ಕಿಟ್ ನೀಡಿ ಆರೋಗ್ಯದ ಯೋಗಕ್ಷೇಮ ವಿಚಾರಿಸಿದರು ಹಾಗೂ ಮನೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಮಾತನಾಡಿ, ಮನೆಯಲ್ಲಿ ವ್ಯವಸ್ಥೆ ಇಲ್ಲದವರಿಗೆ ಕ್ಯಾತ್ಸಂದ್ರದ ಕೋವಿಡ್ ಕೇರ್ ಸೆಂಟರ್, ರೆಡ್ ಕ್ರಾಸ್ ಮತ್ತು ರೇಣುಕಾ ವಿದ್ಯಾಪೀಠದಲ್ಲಿ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸಿದ್ದು, ಇಲ್ಲಿ ದಾಖಲಾಗಬಹುದಾಗಿದೆ, ಮಹಾನಗರ ಪಾಲಿಕೆಯಿಂದ ಸೋಂಕಿತರ ಆರೋಗ್ಯ ವಿಚಾರಿಸಲು ಫಲ್ಸ್ ಆಕ್ಸಿಮೀಟರ್ ಗಳನ್ನು ಸ್ವಯಂ ಕಾರ್ಯಕರ್ತರಿಗೆ ನೀಡಿ ಕಾಲಕಾಲಕ್ಕೆ ಪರಿಶೀಲಿಸಬೇಕೆಂದು ಆಯುಕ್ತರಿಗೆ ಸೂಚಿಸಿದರು. ಯಾರು ಭಯಪಡದೆ ಸರ್ಕಾರದ ಮಾರ್ಗಸೂಚಿಯಂತೆ ನಡೆದುಕೊಂಡರೆ ನಿಮ್ಮ ಜೊತೆ ಜಿಲ್ಲಾಡಳಿತವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಸ್ಲಂ ನಿವಾಸಿಗಳು ನಮಗೆ ಕಾಲಕಾಲಕ್ಕೆ ಆರೋಗ್ಯ ಕಾರ್ಯಕರ್ತರು ಔಷಧೋಪಚಾರ ನೀಡುತ್ತಿದ್ದಾರೆ, ಆದರೆ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಮನೆಯಲ್ಲಿರುವ ನಮಗೆ ಮೈಕ್ರೋ ಫೈನಾನ್ಸ್ ಗಳಿಂದ ಹಣ ಪಾವತಿಸಲು ಹಿಂಸಿಸಲಾಗುತ್ತಿದೆ, ಸೆಕೆಂಡ್ಸ್ ಮದ್ಯ ಮಾರಾಟದಿಂದ ಪಾರು ಮಾಡುವಂತೆ ಹಾಗೂ ಆಹಾರ ಕಿಟ್ ಗಳನ್ನು ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆಹಾರ ಕಿಟ್ ವಿತರಣೆ ಬಗ್ಗೆ ನಗರ ಪಾಲಿಕೆಯೊಂದಿಗೆ ಸಮಾಲೋಚಿಸಿ ಸೂಚನೆ ನೀಡಲಾಗುವುದು, ಮೈಕ್ರೋ ಫೈನಾನ್ಸ್ ಕಂಪನಿಗಳು ಒತ್ತಾಯದಿಂದ ಹಣ ವಸೂಲಿ ಮಾಡದಂತೆ ಮನವಿ ಮಾಡಲಾಗುವುದೆಂದರು.
ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಮಾತನಾಡಿ, ಮನೆಯಲ್ಲಿ ಶುಚಿತ್ವ ಮತ್ತು ಪೌಷ್ಠಿಕ ಆಹಾರ ಸೇವಿಸಿ ದಿನಕ್ಕೆ 4 ಬಾರಿ ಪರಿಶೀಲಿಸುವುದರಿಂದ ಅನಗತ್ಯ ತೋದರೆ ತಪ್ಪಿಸಬಹುದು, ಈ ಬಗ್ಗೆ ಜಾಗೃತರಾಗುವಂತೆ ಸ್ಲಂ ನಿವಾಸಿಗಳಿಗೆ ಮನವಿ ಮಾಡಿ ಮದ್ಯದ ಹಾವಳಿ ಬಗ್ಗೆ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದೆಂದರು.
ಮಹಾಪೌರರಾದ ಬಿ.ಜಿ.ಕೃಷ್ಣಪ್ಪ ಮಾತನಾಡಿ, ನಗರ ಪಾಲಿಕೆಯಿಂದ ಆದ್ಯತೆ ಮೇರೆಗೆ 35 ವಾರ್ಡ್‌ಗಳಲ್ಲಿರುವ ಸ್ಲಂ ನಿವಾಸಿಳಿಗೆ ಮೆಡಿಸಿನ್ ಕಿಟ್ ನೀಡಲಾಗುತ್ತಿದ್ದು, ಅಶಕ್ತರು ಆರ್ಥಿಕವಾಗಿ ಹಿಂದುಳಿದಿರುವ ದುರ್ಬಲರಿಗೆ ನೀಡಲಾಗುವುದೆಂದರು.
ಹಿರಿಯ ಚಿಂತಕ ಕೆ.ದೊರೈರಾಜ್ ಮಾತನಾಡಿ, ಜಿಲ್ಲಾಡಳಿತ ಮತ್ತು ನಗರಪಾಲಿಕೆಯಿಂದ ತಕ್ಷಣಕ್ಕೆ ಈ ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ, ಕೂಡಲೇ ಸರ್ಕಾರ ಲಾಕ್ ಡೌನ್ ಭತ್ಯೆ ನೀಡಬೇಕೆಂದರು.
ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಕೊಳಗೇರಿ ಸಮಿತಿಯ ಆಗ್ರಹಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ ಮೇಯರ್, ಆಯುಕ್ತರು ಮತ್ತು ಸದಸ್ಯರು ಮೆಡಿಸಿನ್ ಕಿಟ್ ಗಳನ್ನು ಸ್ಲಂ ನಿವಾಸಿಗಳಿಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತೇವೆ, ಸುಮಾರು 1 ಸಾವಿರ ಕಿಟ್ ಗಳನ್ನು ಸ್ಲಂಗಳಲ್ಲಿರುವ ಸೋಂಕಿತರಿಗೆ ಮೊದಲ ಆದ್ಯತೆಯಲ್ಲಿ ಪಾಲಿಕೆಯ ಆರೋಗ್ಯ ಶಾಖೆ ಹಂಚಿಕೆ ಮಾಡುತ್ತಿದ್ದು, ಆಹಾರ ಕಿಟ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಿ ಹೆಚ್ ಒ ಡಾ.ನಾಗೇಂದ್ರಪ್ಪ, ನಗರಪಾಲಿಕೆ ಆಯುಕ್ತೆ ರೇಣುಕಾ, ಉಪಮಹಾಪೌರರಾದ ನಾಜೀಮಾಬಿ, ಸದಸ್ಯರಾದ ಎ.ಶ್ರೀನಿವಾಸ್, ರೂಪಶ್ರೀ ಶೆಟ್ಟಳಯ್ಯ, ಮುಖಂಡರಾದ ನರಸಿಂಹಯ್ಯ, ಅಂಜಿನ್‌ಮೂರ್ತಿ, ದೇವರಾಜಯ್ಯ, ಕೊಳಗೇರಿ ಸಮಿತಿಯ ಅರುಣ್, ತೇಜೇಶ್‌ಕುಮಾರ್, ವಿ.ಗೋಪಾಲ್ ಇದ್ದರು.
ಕೊಳಚೆ ಪ್ರದೇಶಗಳ ಜನರು ಹೆಚ್ಚು ಜಾಗೃತಿ ವಹಿಸಲಿ: ಜಿಲ್ಲಾಧಿಕಾರಿ
ಜಿಲ್ಲಾಡಳಿತದಿಂದ ಕೋವಿಡ್ ಮೆಡಿಸಿನ್ ಕಿಟ್ ವಿತರಣೆ
Get real time updates directly on you device, subscribe now.
Prev Post
Comments are closed.