ಮಧುಗಿರಿಯಲ್ಲಿ ಮಳೆಯ ಆರ್ಭಟ- ಅಂಗಡಿಗಳಿಗೆ ನುಗ್ಗಿದ ನೀರು

ಮನೆಗಳಿಗೆ ಬಂತು ಚರಂಡಿ ನೀರು- ಜನರ ಪರದಾಟ

486

Get real time updates directly on you device, subscribe now.

ಮಧುಗಿರಿ: ಬುಧವಾರ ಬೆಳಗಿನ ಜಾವದಲ್ಲಿ ಗುಡುಗು ಸಿಡಿಲು ಮಿಂಚಿನ ಆರ್ಭಟದೊಂದಿಗೆ ಮಧುಗಿರಿಯಲ್ಲಿ ಸುರಿದ ಮಳೆಗೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹದಿಮೂರನೆ ವಾರ್ಡ್‌ನಲ್ಲಿರುವ ಬಹುತೇಕ ಮನೆಗಳಿಗೆ ಮಳೆ ನೀರಿನ ಜೊತೆ ಚರಂಡಿ ನೀರು ಸೇರಿ ನುಗ್ಗಿರುವ ಘಟನೆ ನಡೆದಿದೆ.
ಪುರಸಭಾ ಸದಸ್ಯ ನರಸಿಂಹಮೂರ್ತಿ ಅವರ ಮನೆಗೂ ನೀರು ನುಗ್ಗಿದ್ದು ಇವರ ಅಕ್ಕ ಪಕ್ಕದ ಮತ್ತು ಎದುರಿನ ಮನೆಗಳಲ್ಲಿ ಇಂತಹ ಅನುಭವವಾಗಿದೆ, ಈ ವಾರ್ಡ್‌ನಲ್ಲಿ ರಘು ಹೋಟೆಲ್‌ ಸಮೀಪ ನಿರ್ಮಿಸಿರುವ ಡಕ್ನ ಒಳಭಾಗದಲ್ಲಿ ಕಾಂಕ್ರಿಟ್‌ ಹಾಕಿ ಎಷ್ಟೋ ದಿನಗಳಾಗಿದ್ದರೂ ನೀರು ಸರಾಗವಾಗಿ ಹರಿಯುವಂತೆ ಮಾಡದ ಕಾಮಗಾರಿಯೇ ಈ ಅವಘಡಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಇಲ್ಲಿನ ನಾಗರಿಕರು.
ಇನ್ನೂ ಬೂರ್ಕನಹಟ್ಟಿ ಯಲ್ಲಿರುವ ಬಹುತೇಕ ಮನೆಗಳ ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊಂಡು ದುರ್ವಾಸನೆ ಹೆಚ್ಚಾಗಿ ಸಂಪುಗಳ ಸ್ವಚ್ಛ ಮಾಡಿಕೊಳ್ಳುವುದರಲ್ಲಿ ಸಾಕು ಸಾಕಾಯಿತು ಗೃಹಿಣಿಯರ ಪಾಡು.
ಇನ್ನೂ ಟೌನ್ ಹಾಲ್‌ ರಸ್ತೆಯ ಪೆಟೋಲ್‌ ಬಂಕ್‌ ಸಮೀಪ ಇರುವ ಪುರಸಭೆಯ ವಾಣಿಜ್ಯ ಮಳಿಗೆಗಳಿಗೆ ಚರಂಡಿ ನೀರು ನುಗ್ಗಿದೆ, ಪೋಸ್ಟ್ ಆಫೀಸ್ ನಿಂದ ಬರುವ ರಾಯಗಾಲುವೆ ನೀರು ಸರಾಗವಾಗಿ ಹರಿಯದ ಕಾರಣ ರಾಯಗಾಲುವೆ ತುಂಬಾ ಕಸಕಡ್ಡಿ ತುಂಬಿ ನೀರು ನುಗ್ಗಲು ಕಾರಣವೆನ್ನಲಾಗಿದೆ. ಈ ನೀರು ಕೆ.ಆರ್‌.ಬಡಾವಣೆಯ ತಗ್ಗು ಪ್ರದೇಶಗಳಿಗೂ ಹರಿದು ಜಲಾವೃತಗೊಂಡಿವೆ.
ಇನ್ನೂ ಹೈಸ್ಕೂಲ್‌ ವೃತ್ತದ ಬಳಿ ಇರುವ ತೆರೆದ ಚರಂಡಿಗೆ ಕಿಡಿಗೇಡಿಗಳು ಮದ್ಯದ ಬಾಟಲ್ ಗಳನ್ನು ಎಸೆದು ಅಲ್ಲೂ ನೀರು ಸರಾಗವಾಗಿ ಹರಿಯದಂತೆ ಮಾಡಿದ ಫಲ ರಸ್ತೆ ತುಂಬ ನೀರು ಹರಿದಿದೆ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್‌ ಹಿಂಭಾಗದ ಮನೆಗಳಲ್ಲೂ ಸಹ ಮಳೆ ನೀರು ನುಗ್ಗಿದೆ.

ಮಳೆ ವಿವರ: ಮಧುಗಿರಿ- 45 ಮಿ.ಮೀ, ಮಿಡಿಗೇಶಿ- 5 ಮಿ.ಮೀ, ಕೊಡಿಗೇನಹಳ್ಳಿ- 9.5 ಮಿ.ಮೀ, ಬಡವನಹಳ್ಳಿ- 25 ಮಿ.ಮೀ, ಬ್ಯಾಲ್ಯ- 1.8 ಮಿ.ಮೀ, ಐಡಿ ಹಳ್ಳಿ- 25.3 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ ಎಂದು ಮಳೆ ಮಾಪನ ಕೇಂದ್ರಗಳಿಂದ ವರದಿಯಾಗಿದೆ.

ಆಗ್ರಹ: ಕೊಡಿಗೇನಹಳ್ಳಿ ಹೋಬಳಿಯ ಮುತ್ಯಾಲಮ್ಮನಹಳ್ಳಿ ರಸ್ತೆಯಲ್ಲಿ ಮಳೆ ನೀರಿನಿಂದ ಸುಮಾರು ಮೂರು ಅಡಿಗಳಷ್ಟು ತುಂಬಿದ ರಸ್ತೆಯಲ್ಲಿ ಸಾರ್ವಜನಿಕರಿಗೆ ಓಡಾಡಲು ಕಷ್ಟವಾಗಿದೆ, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!