ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆ ತೀವ್ರವಾಗಿದ್ದು, ಹಾಲಪ್ಪ ಪ್ರತಿಷ್ಠಾನ, ರೆಡ್ ಕ್ರಾಸ್ ಸೊಸೈಟಿ, ಸತ್ಯಸಾಯಿಗಂಗಾ ಟ್ರಸ್ಟ್, ಆದರ್ಶ ಫೌಂಡೇಷನ್, ಸಿದ್ದಾರ್ಥ ಶಿಕ್ಷಣ ಸಂಸ್ಥೆ, ರೋಟರಿ ಸಂಸ್ಥೆ, ಕುವೆಂಪು ವೇದಿಕೆ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ನಗರದ ಬೆಳಗುಂಬ ರೆಡ್ ಕ್ರಾಸ್ ಕಟ್ಟಡದಲ್ಲಿ ಆರಂಭಗೊಂಡಿರುವ 50 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಇದೇ ರೀತಿ ಹೆಚ್ಚು ಕೋವಿಡ್ ಕೇರ್ ಕೇಂದ್ರ ಸ್ಥಾಪನೆಯಾದರೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ, ತಡವಾಗಿ ಆಸ್ಪತ್ರೆಗೆ ದಾಖಲು ಆಗುತ್ತಿರುವುದರಿಂದ ಕೋವಿಡ್ ಸಾವು ಹೆಚ್ಚಾಗುತ್ತಿದೆ. ರೋಗದ ಲಕ್ಷಣ ಕಂಡು ಬಂದರೆ ಪ್ರಾಥಮಿಕ ಹಂತದಲ್ಲೆ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾಗಿ, ಚಿಕಿತ್ಸೆ ಪಡೆದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಇಲ್ಲಿಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯಲು ಸಕಲ ವ್ಯವಸ್ಥೆಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಈಗಾಗಲೇ ಸುಮಾರು 30 ಆಕ್ಸಿಜನ್ ಬೆಡ್ ಗಳು ಸೋಂಕಿತರಿಗೆ ಉಪಯೋಗವಾಗುತ್ತಿವೆ. ಇನ್ನೂ 50 ಆಕ್ಸಿಜನ್ ಬೆಡ್ ಗಳು ಹೆಚ್ಚುವರಿಯಾಗಿ ಮಾಡಿದರೆ ಸೋಂಕಿತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಪಿಪಿಇ ಕಿಟ್‌ಗಳು, ಕಾನ್ಸಂಟ್ರೇಟ್ ಸೇರಿದಂತೆ ಹಲವು ವೈದ್ಯಕೀಯ ಪರಿಕರಗಳನ್ನು ಸಚಿವರು ವೀಕ್ಷಿಸಿದರು, ನಂತರ ವೈದ್ಯಕೀಯ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಅಡುಗೆ ಮತ್ತು ಸ್ವಚ್ಛತಾ ಕಾರ್ಯ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು. ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾಸ್ಪತ್ರೆ ಮತ್ತು ರೆಡ್ ಕ್ರಾಸ್ ಕಟ್ಟಡದಲ್ಲಿ ಆರಂಭಗೊಂಡಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸಂಟ್ರೇಟ್ ಕಿಟ್ ಗಳನ್ನು ಸಚಿವ ಜೆ.ಸಿ.ಮಾಧುಸ್ವಾಮಿ ವಿತರಿಸಿದರು.
ಈ ಕೋವಿಡ್ ಕೇರ್ ಸೆಂಟರ್ ಗೆ ಸೋಂಕಿತರು ದಾಖಲಾದರೆ ಪೌಷ್ಠಿಕ ಆಹಾರ, ಔಷಧೋಪಚಾರ, ಸೋಂಕಿತರಿಗೆ ಆತ್ಮಸ್ಥೈರ್ಯ, ಆತ್ಮವಿಶ್ವಾಸ ತುಂಬುವಂತಹ ಸಿಬ್ಬಂದಿಯನ್ನೊಳಗೊಂಡ ಉತ್ತಮ ಆರೈಕೆ ಕೇಂದ್ರವಾಗಿ ಆರಂಭಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ ಮಾತನಾಡಿ, ಕೋವಿಡ್ ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಇಲ್ಲಿ ದಿನ 24 ಗಂಟೆಗಳ ಕಾಲ ದೊರಕಲಿದೆ. ಈಗಾಗಲೇ ಮೂವರು ವೈದ್ಯರು, ಪ್ಯಾರಾ ಮೆಡಿಕಲ್ ನರ್ಸ್‌ಗಳು ಚಿಕಿತ್ಸೆ ನೀಡುವರು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಪೌಷ್ಠಿಕಯುಕ್ತ ಊಟ, ಸಂಜೆ ಲಘು ಉಪಾಹಾರ, ರಾತ್ರಿ ಪೌಷ್ಠಿಕ ಆಹಾರ ಉಚಿತವಾಗಿ ದೊರೆಯಲಿದೆ. ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ ಕೂಡ ಈ ಆರೈಕೆ ಕೇಂದ್ರದಲ್ಲಿ ಇರಲಿದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ ಮಾತನಾಡಿ, ಇಲ್ಲಿ ಸೋಂಕಿತರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ಚಿಕಿತ್ಸೆಯೂ ದೊರೆಯಲಿದೆ. ಸೋಂಕಿತರಿಗೆ ಆಕ್ಸಿಜನ್ ಅವಶ್ಯಕತೆ ಇದ್ದಲ್ಲಿ ಪ್ರಾಥಮಿಕವಾಗಿ ಆಕ್ಸಿಜನ್ ನೀಡಿ ಸೋಂಕಿನ ತೀವ್ರತೆ ಹೆಚ್ಚಾದರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು, ಇಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ 20 ಆಕ್ಸಿಜನ್ ಕಾನ್ಸಂಟ್ರೇಟ್‌ಗಳನ್ನು ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರು ಕೋವಿಡ್ ಆರೈಕೆ ಕೇಂದ್ರದ ಸಿಬ್ಬಂದಿಗೆ ಸೋಂಕಿತರನ್ನು ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ವಾಕ್ ಶ್ರವಣದೋಷವುಳ್ಳ ಮಕ್ಕಳ ವಸತಿಯುತ ಉಚಿತ ಪಾಠಶಾಲೆಯ ವ್ಯವಸ್ಥಾಪಕ ಕೃಷ್ಣಯ್ಯ, ರೆಡ್ ಕ್ರಾಸ್ ಶಾಲೆ ಅಭಿವೃದ್ಧಿ ಕಮಿಟಿಯ ಚಂದ್ರಣ್ಣ, ಶೇಖರ್, ಸುಭಾಷಿಣಿ, ಬಸವರಾಜ್, ಸಾಯಿಗಂಗಾ ಟ್ರಸ್ಟ್ ಅಧ್ಯಕ್ಷ ಡಾ.ವಿಜಯರಾಘವೇಂದ್ರ, ತುಮಕೂರು ಸೆಂಟ್ರಲ್ ರೋಟರಿ ನಿರ್ದೇಶಕ ಶಿವಕುಮಾರ್ ಬಿಳಿಗೆರೆ, ರೆಡ್ ಕ್ರಾಸ್ ಕೌಶಲ್ಯಾಭಿವೃದ್ಧಿ ಕಮಿಟಿಯ ಚೇತನ್, ಡಾ.ಅಮೂಲ್ಯ, ಡಾ.ಅಕ್ಷಯ್, ಡಾ.ಅಭಿಶ್ನ ಸೇರಿದಂತೆ ಹಲವರು ಹಾಜರಿದ್ದರು.
ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಲಿ: ಮಾಧುಸ್ವಾಮಿ
ಕೋವಿಡ್ ಕೇರ್ ಕೇಂದ್ರದಿಂದ ಚಿಕಿತ್ಸೆಗೆ ಅನುಕೂಲ
Get real time updates directly on you device, subscribe now.
Prev Post
Comments are closed.