ತುಮಕೂರು: ಕೋವಿಡ್ ಸೋಂಕಿತರಾಗಿ ಸಿದ್ಧಗಂಗಾ ಕೋವಿಡ್ ಕೇರ್ ಸೆಂಟರ್ ಹಾಗೂ ಸಿದ್ಧಗಂಗಾ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವರನ್ನ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಹಣ್ಣುಹಂಪಲು ವಿತರಿಸಿದರು.
ಬಸವ ಜಯಂತಿ ಹಿನ್ನಲೆಯಲ್ಲಿ ಸಿದ್ಧಗಂಗಾ ಮಠದ ಯಾತ್ರಿ ನಿವಾಸದಲ್ಲಿ ತೆರೆದಿರುವ 80 ಹಾಸಿಗೆಗಳ್ಳ ಕೋವಿಡ್ ಸೆಂಟರ್ ಗೆ ಬೆಳಗ್ಗೆ 11 ಗಂಟೆಗೆ ಭೇಟಿ ನೀಡಿದ ಅವರು, ಕೆಲ ಕಾಲ ಸಿಬ್ಬಂದಿ ಜೊತೆಗೆ ಮಾತನಾಡಿ ಧೈರ್ಯ ತುಂಬಿದಿದರು, ನಂತರ ನಿವಾಸದ ಆವರಣದಲ್ಲಿ ಸಾಮಾಜಿಕ ಅಂತರದಲ್ಲಿ ಕುಳಿತಿದ್ದ ಕೋವಿಡ್ ಸೋಂಕಿತರಿಗೆ ಹಣ್ಣುಹಂಪಲು ವಿತರಿಸಿ ಕೋವಿಡ್ ನಿಂದ ಚೇತರಿಸಿಕೊಳ್ಳುವಂತೆ ಕರೆ ನೀಡಿ ಪ್ರತಿಯೊಬ್ಬರ ಆರೋಗ್ಯ ಸ್ಥಿತಿಯನ್ನ ಸಿದ್ಧಗಂಗಾ ಆಸ್ಪತ್ರೆ ವೈದ್ಯರಿಂದ ಪಡೆದುಕೊಂಡರು.
ಪಿಪಿಇ ಕಿಟ್ ಧರಿಸಿದ ಶ್ರೀಗಳು :ಮಧ್ಯಾಹ್ನ 3 ಗಂಟೆಗೆ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ಧಲಿಂಗ ಶ್ರೀಗಳು ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯ ಕೋವಿಡ್ ಐಸಿಯು ಹಾಗೂ ಕೋವಿಡ್ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 150 ಕ್ಕೂ ಹೆಚ್ಚು ರೋಗಿಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕೋವಿಡ್ ಕೇರ್ ಐಸಿಯುವಿನಲ್ಲಿದ್ದ ಸೋಂಕಿತರಿಗೆ ಪ್ರಾಣಾಯಾಮ, ಧ್ಯಾನ ಮಾಡುವಂತೆ ಸಲಹೆ ನೀಡಿದ ಶ್ರೀಗಳು ಪ್ರತಿಯೊಬ್ಬ ಸೋಂಕಿತರ ಪ್ರತಿಯೊಂದು ಆರೋಗ್ಯ ಸ್ಥಿತಿಯನ್ನ ಆಸ್ಪತ್ರೆ ಎಂಡಿ ಡಾ.ಎಸ್.ಪರಮೇಶ್ ರಿಂದ ಪಡೆದರು. ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳುತ್ತಿರುವ ರೋಗಿಗಳಿಗೆ ಆಶೀರ್ವಾದ ಮಾಡಿದ ಶ್ರೀಗಳು ಇತರರಿಗೂ ಕೋವಿಡ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಾರ್ಗದರ್ಶನ ಮಾಡಿದರು.
ಆಸ್ಪತ್ರೆಯ ಕೇರ್ ಸೆಂಟರ್ ನಲ್ಲಿದ್ದ ಸೋಂಕಿತೆಯೊಬ್ಬರು ಸ್ವಾಮೀಜಿ ಇಂತಹ ರೋಗ ಬರದಂತೆ ಇರಲು ಏನು ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ಮುಗುಳ್ನಗುತ್ತಲೇ ಉತ್ತರಿಸಿದ ಶ್ರೀಗಳು ಮನುಷ್ಯನಿಗೆ ಖಾಯಿಲೆ ಬರದೆ ಇರಬೇಕು ಎಂದರೆ ಹೇಗೆ, ಯಾವುದೇ ಖಾಯಿಲೆ ಬಂದರೂ ಅದನ್ನು ಎದುರಿಸುವ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಇಂತಹ ಯಾವುದೇ ಖಾಯಿಲೆ ಬಂದರೂ ಅದು ಪ್ರಥಮ ಚಿಕಿತ್ಸೆಯಾಗಿ ಕಾರ್ಯ ನಿರ್ವಹಿಸುತ್ತದೆ, ದೇವರಲ್ಲಿ ಶ್ರದ್ಧೆ, ವಿಶ್ವಾಸ, ಕಾಯಕದಲ್ಲಿ ಶುದ್ದಿ ಇಟ್ಟುಕೊಂಡು ಬಂದ ಎಲ್ಲಾ ಪಿಡುಗಗಳನ್ನ ಎದುರಿಸುವ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು ಎಂದರು.
ವೈದ್ಯರೊಂದಿಗೆ ಮಾತುಕತೆ ನಡೆಸಿ ನಂತರ ಕೋವಿಡ್ ಚಿಕಿತ್ಸೆ, ಆಕ್ಸಿಜನ್ ಲಭ್ಯತೆ ಹಾಗೂ ಆಸ್ಪತ್ರೆಯ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಶ್ರೀಗಳ ಭೇಟಿ ವೇಳೆ ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಎಸ್. ಪರಮೇಶ್, ಹಿರಿಯ ಫಿಸಿಷಿಯನ್ ಡಾ.ಶಾಲಿನಿ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಸಿಇಓ ಡಾ.ಸಂಜೀವ್ ಕುಮಾರ್ ಇದ್ದರು.
Comments are closed.