ಮಧುಗಿರಿ: ಕೊರೊನಾ ನಿರ್ವಹಣೆಗಾಗಿ ತಾಲೂಕು ಆಡಳಿತಕ್ಕೆ 2 ಆ್ಯಂಬುಲೆನ್ಸ್ ನೀಡಿದ್ದು, ಕೊರೊನಾ ತಗ್ಗುವವರೆಗೂ ಇವು ಸಾರ್ವಜನಿಕರ ಬಳಕೆಗೆ ಸಂಚರಿಸಲಿವೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಡಿ.ಕೈಮರದ ತಮ್ಮ ಸ್ವಗೃಹದಲ್ಲಿ 2 ಆ್ಯಂಬುಲೆನ್ಸ್ ನ ಕೀಲಿ ಕೈಯನ್ನು ಉಪವಿಭಾಗಾಧಿಕಾರಿ ಕೈಗಿತ್ತು ಮಾತನಾಡಿ, ಈ ಕೊರೊನಾದಿಂದ ನಮ್ಮ ಬಂಧುಗಳನ್ನು ಕಳೆದುಕೊಂಡಿರುವುದು ದುರಂತವೇ ಸರಿ, ಇದನ್ನು ಸರಿಯಾದ ಸಮಯದಲ್ಲಿ ಗುರ್ತಿಸಿ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು, ಅದು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದರಿಂದ ಸಾಧ್ಯ, ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಕೋವಿಡ್ ಸೆಂಟರ್ ಗೆ ದಾಖಲಾಗಿ ಅಗತ್ಯ ಚಿಕಿತ್ಸೆ ಪಡೆಯಬೇಕು, ಈಗಾಗಲೇ ತಾಲೂಕಿನಲ್ಲಿ ಹೋಬಳಿಗೊಂದು ಕೋವಿಡ್ ಸೇವಾ ಕೇಂದ್ರ ಆರಂಭವಾಗಿದ್ದು, ಸ್ಥಳೀಯ ಸೋಂಕಿತರನ್ನು ಅಲ್ಲೇ ದಾಖಲು ಮಾಡಿಕೊಂಡು ಸೂಕ್ತ ಆರೈಕೆ ಮಾಡಲಾಗುವುದು, ಅಂತಹ ಸೋಂಕಿತರು ನಿಷ್ಠೆಯಿಂದ ಸೇವಾ ಕೇಂದ್ರದಲ್ಲಿದ್ದು ರೋಗದಿಂದ ಗುಣಮುಖರಾಗಬೇಕು ಎಂದರು.
ಸ್ವಂತ ಖರ್ಚಿನಲ್ಲೇ ಆ್ಯಂಬುಲೆನ್ಸ್: ತಾಲೂಕಿನ ಸಾರ್ವಜನಿಕರ ಬಳಕೆಗಾಗಿ ತಾಲೂಕು ಜೆಡಿಎಸ್ ವತಿಯಿಂದ 2 ಆ್ಯಂಬುಲೆನ್ಸ್ ನೀಡಿದ್ದು, ಸಂಚಾರದ ನಿರ್ವಹಣೆಯನ್ನೂ ನಾನೇ ಭರಿಸುತ್ತಿದ್ದೇನೆ, ಇವು ಕೊರೊನಾ ತಗ್ಗುವವರೆಗೂ ಬಳಕೆಯಾಗಲಿದೆ, ಮತ್ತೆ ಶಾಶ್ವತವಾಗಿ 1 ನೂತನ ಆ್ಯಂಬುಲೆನ್ಸ್ ಕೂಡ ಸಾರ್ವಜನಿಕ ಆಸ್ಪತ್ರೆಗೆ ಸದ್ಯದಲ್ಲೇ ನೀಡುತ್ತಿದ್ದೇನೆ, ಇಂದು ತಾಲೂಕು ಕೊರೊನಾ ವಾರಿಯರ್ಸ್‌ಗಳಿಗಾಗಿ 200 ಲೀಟರ್ ಸ್ಯಾನಿಟೈಸರ್, 100 ಪಿಪಿಇ ಕಿಟ್, 10 ಸಾವಿರ ಆ್ಯಂಬುಲೆನ್ಸ್, ಕೋವಿಡ್ ಸೆಂಟರ್ ಗಾಗಿ 250 ಬೆಡ್ ಶೀಟ್ ನೀಡಿದ್ದು ಉಳಿದ ಬೇಡಿಕೆಯನ್ನೂ ಸಹ ಭರಿಸಲು ಸಿದ್ಧನಿದ್ದೇನೆ, ಸರ್ಕಾರದ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿ ಅರಿತುಕೊಂಡು ಕೊರೊನಾ ನಿಯಮ ಪಾಲಿಸಬೇಕು, ಆಗ ಮಾತ್ರ ಎಲ್ಲರೂ ಸೇರಿ ಈ ಕೊರೊನಾ ಕಟ್ಟಿಹಾಬಹುದಾಗಿದೆ, ಹೋಂ ಐಸೋಲೇಷನ್ ನಿಂದ ಸೋಂಕು ತಡೆಯಲು ಸಾಧ್ಯವಾಗದ ಕಾರಣ ಹೋಬಳಿಗೊಂದು ಕೊರೊನಾ ಸೇವಾ ಕೇಂದ್ರ ಆರಂಭಿಸಿದ್ದು, ಜನತೆಗೆ ಅನುಕೂಲವಾಗಲಿದೆ ಎಂದರು.
ತಾಲೂಕು ಆಡಳಿತದ ತಂಡ ಸಮರ್ಥ: ತಾಲೂಕು ಆಡಳಿತವು ಕೊರೊನಾ ನಿಯಂತ್ರಣದಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಸಹ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕಿದೆ, ಉಳಿದ ತಾಲೂಕಿಗೆ ಹೋಲಿಸಿದರೆ ಮಧುಗಿರಿಯಲ್ಲಿ ಕೊರೊನಾ ನಿರ್ವಹಣೆಯು ಸಮರ್ಥವಾಗಿ ನಡೆಯುತ್ತಿದೆ, ಅದಕ್ಕಾಗಿ ಎಲ್ಲಾ ಅಧಿಕಾರಿ ಮಿತ್ರರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಎಸಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ರಾಮಕೃಷ್ಣ, ತಹಶೀಲ್ದಾರ್ ವೈ.ರವಿ, ತಾಪಂ ಇಓ ದೊಡ್ಡಸಿದ್ದಯ್ಯ, ಟಿಹೆಚ್‌ಓ ಡಾ.ರಮೇಶ್‌ಬಾಬು, ವೈದ್ಯಾಧಿಕಾರಿ ಡಾ.ಗಂಗಾಧರ್, ಸಿಡಿಪಿಓ ಅನಿತಾ, ಸಿಪಿಐ ಸರ್ದಾರ್, ಮುಖ್ಯಾಧಿಕಾರಿ ಅಮರನಾರಾಯಣ್, ಸದಸ್ಯರಾದ ಜಗಣ್ಣ, ಚಂದ್ರಶೇಖರ್ ಬಾಬು, ಗಂಗರಾಜು, ನಾರಾಯಣ್, ನರಸಿಂಹಮೂರ್ತಿ, ಅಭಿಯಂತರಾದ ರಾಮದಾಸು, ಸುರೇಶ್ ರೆಡ್ಡಿ, ಕೃಷ್ಣಮೂರ್ತಿ, ಪಿಎಸೈ ನಾಗರಾಜು, ಜೆಡಿಎಸ್ ಹೋಬಳಿ ಅಧ್ಯಕ್ಷ ಬಸವರಾಜು, ಮುಖಂಡರಾದ ತುಂಗೋಟಿ ರಾಮಣ್ಣ, ಬಾವಿಮನೆ ಕಾಂತಣ್ಣ, ವಿಶ್ವನಾಥ್, ನಾಗಭೂಷಣ್, ತಿಮ್ಮಯ್ಯ, ಗೋಪಾಲ್, ಗ್ರಾಪಂ ಸದಸ್ಯರಾದ ಮಂಜುನಾಥ್, ವಿಜಯಪ್ರಕಾಶ್, ರಂಗನಾಥ್, ಶ್ರೀಧರ್, ಮುಖಂಡರಾದ ಹನುಮಂತೇಗೌಡ, ಗೋವಿಂದರಾಜು ಆರ್.ಟಿ.ಪ್ರಭು, ಡಿ.ವಿ.ಹಳ್ಳಿ ರಾಮು, ರಂಗನಾಥ್ ಗೌಡ ಇತರರು ಇದ್ದರು.
Comments are closed.