ಬ್ರಾಹ್ಮಣ ಕುಟುಂಬದ ಮೃತ ದೇಹಕ್ಕೆ ಅಲ್ಪಸಂಖ್ಯಾತರಿಂದ ಶವ ಸಂಸ್ಕಾರ

ಮಾನವೀಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ

247

Get real time updates directly on you device, subscribe now.

ತಿಪಟೂರು: ಇತ್ತೀಚೆಗೆ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವಿನ ಅಂತರ ಹೆಚ್ಚಾಗುತ್ತಿರುವ ನಡುವೆಯೂ ಕೆಲವೊಂದು ಮಾನವೀಯ ಕಾರ್ಯಗಳು ಮತ್ತೆ ಮತ್ತೆ ಸೌಹಾರ್ದತೆ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಿವೆ. ಕೊರೊನಾ ವೈರಸ್‌ ಆವರಿಸಿಕೊಂಡ ಬಳಿಕ ಹಿಂದುಗಳ ಅಂತ್ಯ ಕ್ರಿಯೆಯಲ್ಲಿ ಮುಸಲ್ಮಾನರು ಭಾಗಿಯಾಗುತ್ತಿರುವುದು ದೇಶದ ಅಭ್ಯುದಯದ ಸಂಕೇತವೇ ಸರಿ ಎಂದು ಹೇಳಬಹುದಾಗಿದೆ.
ಜಾತಿ, ಧರ್ಮ ಯಾವುದೂ ಲೆಕ್ಕವಿಲ್ಲದಾಗೆ ಸಾಕಷ್ಟು ಜೀವಗಳನ್ನು ಕ್ರೂರಿ ಕೊರೊನಾ ಬಲಿ ತೆಗೆದುಕೊಳ್ಳುತ್ತಿದೆ, ಬಡವ, ಸಿರಿವಂತ, ಹಿಂದೂ, ಮುಸ್ಲಿಂ, ಕ್ರೈಸ್ತ ಇದು ಯಾವುದು ಲೆಕ್ಕಕ್ಕೆ ಬರೋದಿಲ್ಲ, ಎಂಥೆಂತವರೋ ಮಣ್ಣಲ್ಲಿ ಮಣ್ಣಾಗಿದ್ದಾರೆ, ಕೆಲ ಕುಟುಂಬಸ್ಥರಿಗೆ ಶವ ಸಂಸ್ಕಾರವಲ್ಲ, ಮೃತ ದೇಹ ನೋಡುವ ಭಾಗ್ಯವೇ ದೊರೆಯದೆ ಕಣ್ಣೀರಲ್ಲಿ ಕೈ ತೊಳೆದಿದ್ದಾರೆ.
ಇಂತಹದೊಂದು ಸಂದರ್ಭದಲ್ಲಿ ಮಾನವೀಯತೆಯೇ ದೊಡ್ಡದು ಎಂದು ತೋರಿಸಿಕೊಟ್ಟಿದ್ದಾರೆ ಈ ಮಂದಿ.
ತಾಲ್ಲೂಕಿನ ಆದಿನಾಯಕನಹಳ್ಳಿ ನಿವೃತ್ತ ಸೈನಿಕ (ಸುಬೇದಾರ್‌) ಕುಟುಂಬದ ಕೃಷ್ಣಪ್ರಸಾದ್‌ ಅವರ ಮೊದಲನೇ ಪುತ್ರ ಬಲರಾಮ್‌ ಪ್ರಸಾದ್‌ ಬೆಂಗಳೂರಿನಲ್ಲಿ ವಾಸವಿದ್ದರು, ಕೊರೊನಾ 2 ನೇ ತೀವ್ರತೆ ಪಡೆದುಕೊಂಡ ನಂತರ ಸ್ವಗ್ರಾಮಕ್ಕೆ ಮರಳಿದರು.
ಕೆಲ ದಿನಗಳ ನಂತರ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿತ್ತಾದರೂ ತೀವ್ರ ಉಸಿರಾಟದ ತೊಂದರೆಯಿಂದ ಕ್ರೂರಿ ಕೊರೊನಾ ಬಲಿ ಪಡೆದುಕೊಂಡಿತು.
ಆ ಸಂದರ್ಭದಲ್ಲಿ ಕುಟುಂಬದವರು, ಒಡಹುಟ್ಟಿದವರ್ಯಾರು ಅಂತ್ಯಸಂಸ್ಕಾರ ಪೂರೈಸಲಾಗದ ಪರಿಸ್ಥಿತಿಯಲ್ಲಿದ್ದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಂ ಬಂಧುಗಳು ಪವಿತ್ರ ಹಬ್ಬ ರಂಜಾನ್‌ ಲೆಕ್ಕಿಸದೆ ವಿಪ್ರ ಧರ್ಮದ ಅನುಸಾರವಾಗಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು.
ಈ ಮಹತ್ಕಾರ್ಯದಲ್ಲಿ ಮದೀನಾ ಮಸೀದಿಯ ಅಧ್ಯಕ್ಷ ಮಹಮದ್‌ ದಸ್ತಗೀರ್‌, ಉಪಾಧ್ಯಕ್ಷ ಸೈಫುಲ್ಲಾ, ಮಹಮ್ಮದ್‌ ಇಸಾಕ್‌, ಸಿದ್ದಿಕ್‌, ಮಹಮದ್‌ಹುಸೇನ್‌, ಆತೀಕ್‌ಪಾಷ, ಮೋಸಿನ್‌, ಸದ್ದಾಂ, ಸುಭಾನ್‌, ಶಾಹಿದ್‌, ಇಬ್ರಾಹಿಂ ಮತ್ತು ಯಾಸೀನ್‌ ಪಾಲ್ಗೊಂಡಿದ್ದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

Get real time updates directly on you device, subscribe now.

Comments are closed.

error: Content is protected !!