ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಿಸಿ- ಅಧಿಕಾರಿಗಳಿಗೆ ಸಚಿವರ ಸೂಚನೆ

ಹಳ್ಳಿಗಾಡಿನ ಅಮಾಯಕರ ಪ್ರಾಣ ರಕ್ಷಿಸಿ: ಜೆಸಿಎಂ

439

Get real time updates directly on you device, subscribe now.

ತುರುವೇಕೆರೆ: ಅಧಿಕಾರಿಗಳೇ… ಕೊರೊನಾ ಸೋಂಕು ಹೆಚ್ಚಳವಾಗದಂತೆ ನಿಗಾ ವಹಿಸಿ ಹಳ್ಳಿಗಾಡಿನ ಅಮಾಯಕ ಜನರ ಪ್ರಾಣ ರಕ್ಷಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಕೋವಿಡ್‌ ನಿಯಂತ್ರಣ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೊರೊನಾ ಸೋಂಕು ಹಳ್ಳಿಗಾಡಿನಲ್ಲಿ ಹೆಚ್ಚಾಗುತ್ತಿರುವುದು ಆತಂಕದ ವಿಚಾರ, ಈಗಾಗಲೇ ಕೆಲವು ಗ್ರಾಮ ಪಂಚಾಯಿತಿಗಳನ್ನು ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ, ಹಾಟ್ ಸ್ಪಾಟ್‌ ಪ್ರದೇಶಗಳಲ್ಲಿ ಹೋಮ್‌ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಸಕಾಲಕ್ಕೆ ಪೂರಕ ಔಷಧಿ ಸರಬರಾಜು ಮಾಡಬೇಕು, ಅಗತ್ಯ ಕಂಡುಬಂದರೆ ವೈದ್ಯರೊಬ್ಬರನ್ನು ಕಳಿಸಿಕೊಟ್ಟು ಹೋಮ್‌ ಐಸೋಲೇಷನ್ ನಲ್ಲಿ ಇರುವವರ ಆರೋಗ್ಯದ ಬಗ್ಗೆ ವಿಚಾರಿಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾಗೆ ಸೂಚನೆ ನೀಡಿದರು.
ತಾಲೂಕಿನ ಕೊರೊನಾ ಸೋಂಕಿತರ ಮಾಹಿತಿಯನ್ನು ತಹಶೀಲ್ದಾರ್‌ ನಯೀಮುನ್ನಿಸ್ಸಾ ಸಚಿವರಿಗೆ ನೀಡಲು ಮುಂದಾದರು. ಆ ವೇಳೆ ದಾಖಲೆಗಳಲ್ಲಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಸರಾಸರಿ ಕೋವಿಡ್‌ ಶೇ. 50 ರಷ್ಟಿದೆ ಎಂಬುದನ್ನು ತೋರಿಸುತ್ತದೆ. ಅಂಕಿ ಅಂಶಗಳನ್ನು ಪರಿಶೀಲಿಸಿ ಸಭೆಗೆ ನೀಡಿ, ನಿಮ್ಮ ಕಾರ್ಯವೈಖರಿ ತೃಪ್ತಿ ತರುತ್ತಿಲ್ಲ, ಆರ್ ಟಿ ಪಿ ಸಿ ಆರ್‌ ಹಾಗೂ ರ್ಯಾಟ್‌ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದವರ ನಿಖರವಾದ ಮಾಹಿತಿ ನೀಡುವಂತೆ ಡಾ.ಸುಪ್ರಿಯಾ ಹಾಗೂ ತಹಶೀಲ್ದಾರ್‌ ನಯೀಮುನ್ನಿಸ್ಸಾಗೆ ಸಚಿವರು ತಾಕೀತು ಮಾಡಿದರು.
ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್‌ ಸಹಿತ ಬೆಡ್‌, 5 ಐಸಿಯು ಬೆಡ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಮತ್ತೆ 10 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು, ತಾಲೂಕಿನಲ್ಲಿ ಬೆಡ್ ನ ಕೊರತೆ, ಆಕ್ಸಿಜನ್‌ ಕೊರತೆ ಕಂಡು ಬಂದಿಲ್ಲ, ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಹಿತ ಬೆಡ್‌ ಕೇವಲ 36 ಇರುವುದಾಗಿ ಆಡಳಿತ ವೈದ್ಯಾಧಿಕಾರಿ ಹೇಳುತ್ತಾರೆ, ಇದು ತರವಲ್ಲ, ಶೀಘ್ರ 50 ಬೆಡ್ ಗಳ ಸಂಪೂರ್ಣ ವ್ಯವಸ್ಥೆ ಮಾಡಬೇಕು, ಹೆರಿಗೆ ವಾರ್ಡ್‌ನ್ನು ಬೇರೆಡೆಗೆ ಸ್ಥಳಾಂತರಿಸಿ, ಆಸ್ಪತ್ರೆಗೆ ಬೇಕಾದ ಅಗತ್ಯ ಸಿಬ್ಬಂದಿ ಕಳುಹಿಸಿ ಕೊಡಿ, ನೇರ ನೇಮಕ ಮಾಡಿಕೊಳ್ಳಲಾಗುವುದು, ಪೊಲೀಸ್‌ ಸಹಕಾರದೊಂದಿಗೆ ಕೋವಿಡ್‌ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್ ಗೆ ದಾಖಲಿಸಿ ಎಂದು ತಿಳಿಸಿದರು.
ತುರುವೇಕೆರೆಯಲ್ಲಿ ಬೆಳಗ್ಗೆ 10 ರ ನಂತರವೂ ದ್ವಿಚಕ್ರ ವಾಹನಗಳು ಎಗ್ಗಿಲ್ಲದೆ ಪಟ್ಟಣದಲ್ಲಿ ಸಾಗುತ್ತಿವೆ, ಲಾಕ್ ಡೌನ್‌ ಸಮರ್ಪಕವಾಗಿ ಜಾರಿಗೆ ತರುವಲ್ಲಿ ಪೊಲೀಸರು ವಿಫಲರಾಗಿದ್ದಾರೆ, ನಾನು ತುರುವೇಕೆರೆಯತ್ತ ಪ್ರಯಾಣಿಸುವ ವೇಳೆ ಸುಮಾರು ನೂರಾರು ದ್ವಿಚಕ್ರ ವಾಹನಗಳು ಎದುರಾದವು, ಜನತೆ ಲಾಕ್ ಡೌನ್‌ ಇದೆ ಎಂಬುದನ್ನು ಮರೆತಿದ್ದಾರೆ, ಇದು ಪೊಲೀಸ್‌ ನಿಷ್ಟ್ರಿಯತೆಗೆ ಹಿಡಿದ ಕನ್ನಡಿ ಎಂದು ಸಿಪಿಐ ನವೀನ್‌ ವಿರುದ್ಧ ಸಚಿವ ಮಾಧುಸ್ವಾಮಿ ಹರಿಹಾಯ್ದರು.
ನಿರ್ದಾಕ್ಷಿಣ್ಯವಾಗಿ ವಾಹನ ಓಡಾಟ ನಿರ್ಬಂಧಿಸಿ ಎಂದು ತಾಕೀತು ಮಾಡಿದ ಬೆನ್ನಲ್ಲೆ ಸಭೆಯಲ್ಲಿ ಹಾಜರಿದ್ದ ಶಾಸಕ ಮಸಾಲ ಜಯರಾಮ್‌ ಸಿಪಿಐ ನವೀನ್‌ ಅವರ ಕಾರ್ಯ ವೈಖರಿಯ ಬಗ್ಗೆ ಸಚಿವರ ಎದುರೇ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಕೂಡ ನಡೆಯಿತು.
ಸಭೆಯಲ್ಲಿ ಶಾಸಕ ಮಸಾಲ ಜಯರಾಮ್‌, ತಹಶೀಲ್ದಾರ್‌ ನಯೀಮುನ್ನಿಸ್ಸಾ, ಡಿವೈಎಸ್‌ಪಿ ರಮೇಶ್, ಡಾ.ಸುಪ್ರಿಯಾ, ಡಾ.ಶ್ರೀಧರ್‌, ಸಿಪಿಐ ನವೀನ್‌, ಇಓ ಜಯಕುಮಾರ್‌ , ಮುಖ್ಯಾಧಿಕಾರಿ ಮಂಜುಳಾದೇವಿ ಇದ್ದರು.

Get real time updates directly on you device, subscribe now.

Comments are closed.

error: Content is protected !!