ಸಿಬ್ಬಂದಿ ಕೊರತೆ ನಡುವೆ ಕೊವಿಡ್‌ ನಿಯಂತ್ರಿಸಲು ಹರಸಾಹಸ

ಕೊರೊನಾ ತಡೆಯುವುದೇ ಪುರಸಭೆಗೆ ಸವಾಲು

155

Get real time updates directly on you device, subscribe now.

ಕುಣಿಗಲ್‌: ಪುರಸಭೆ ವ್ಯಾಪ್ತಿಯಲ್ಲಿ ಕೊವಿಡ್‌ ನಿಯಂತ್ರಣಕ್ಕೆ ಹಲವಾರು ಕಠಿಣ ಕ್ರಮಗಳ ನಡುವೆಯೂ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ, ಸರ್ಕಾರದ ಮಾರ್ಗಸೂಚಿಯಂತೆ ಇರುವ ಅಲ್ಪ ಸಿಬ್ಬಂದಿ ಮೂಲಕವೆ ಪುರಸಭೆ ಸೋಂಕು ನಿಯಂತ್ರಿಸಲು ಹರಸಾಹಸ ಪಡುತ್ತಿದೆ.
ಪುರಸಭೆಯ 23 ವಾರ್ಡ್‌ಗಳಲ್ಲಿ ಅಂದಾಜು 38 ಸಾವಿರಕ್ಕೂ ಹೆಚ್ಚು ಜನರಿದ್ದಾರೆ, ಕೆಲವಾರು ವಾರ್ಡ್‌ಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಪುರಸಭೆಯಿಂದ ಮುಖ್ಯಾಧಿಕಾರಿ ರವಿಕುಮಾರ್‌, ಅಧ್ಯಕ್ಷ ನಾಗೇಂದ್ರ ನೇತೃತ್ವದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. 17ನೇ ತಾರೀಕಿನ ವರದಿಯೂ ಸೇರಿದಂತೆ 198 ಸೋಂಕು ಪ್ರಕರಣಗಳಿದ್ದು, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಕ್ರೂಢೀಕರಿಸಿ ಅವರ ಬಗ್ಗೆ ನಿಗಾವಹಿಸುವುದೆ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಪುರಸಭೆಯಲ್ಲಿ ಮುಖ್ಯಾಧಿಕಾರಿ ಸೇರಿದಂತೆ 28 ಮಂದಿ ಸಿಬ್ಬಂದಿ ಇದ್ದಾರೆ. ದೈನಂದಿನ ಕಸವಿಲೆವಾರಿ, ನೀರು ಪೂರೈಕೆ ಕೆಲಸದ ಜೊತೆ ಮನೆಯಲ್ಲಿರುವ ಕೊವಿಡ್‌ ಸೋಂಕಿತರಿಗೆ ಧೈರ್ಯ ತುಂಬುವುದು ಸೇರಿದಂತೆ ಅವರ ಸಂಪರ್ಕಿತರ ಆರೋಗ್ಯ ನಿಗಾವಹಿಸಿ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರ ಜೊತೆಯಲ್ಲಿ ಸೋಂಕಿತರ ಪತ್ತೆಯಾದ ವಾರ್ಡ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ಸೋಂಕು ನಿಯಂತ್ರಣದ ಜೊತೆಯಲ್ಲಿ ಆಯಾ ವಾರ್ಡ್‌ಗಳಲ್ಲಿ ವಾರ್ಡ್‌ ಸಮಿತಿ ರಚಿಸಿ ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಮನೆಯಲ್ಲಿದ್ದು ಚಿಕಿತ್ಸೆ ಪಡೆಯುವ ಸೋಂಕಿತರ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಎರಡು ವಾಹನ ವ್ಯವಸ್ಥೆಗೊಳಿಸಿ ಇದನ್ನು ಪ್ರತ್ಯೇಕವಾಗಿ ನಿರ್ವಹಿಸಲು ಕ್ರಮ ವಹಿಸಿದ್ದಾರೆ.
ಮನೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಲ್ಲಿ ಗಂಭೀರಗೊಂಡವರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷರು ವ್ಯವಸ್ಥೆಗೊಳಿಸಿರುವ ಆ್ಯಂಬುಲೆನ್ಸ್ ಮೂಲಕ ಕೊವಿಡ್‌ ಕೇರ್‌ ಸೆಂಟರ್, ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಗುತ್ತಿದ್ದು ಸೋಮವಾರ ಮೂರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ರಜೆ ದಿನಗಳಲ್ಲೂ ಸಿಬ್ಬಂದಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಂಡು ಪಟ್ಟಣದ ನಾಗರಿಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಿದ್ದಾರೆ.
ಸೋಂಕಿತರು ಇರುವ ವಾರ್ಡ್‌ಗಳಲ್ಲಿ ಅಗ್ನಿಶಾಮಕ ಇಲಾಖೆ ಸಹಕಾರದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ ಸೋಂಕು ನಿಯಂತ್ರಣ ಮಾಡಲು ಶ್ರಮಿಸಲಾಗುತ್ತಿದೆ. ಸೋಂಕಿತರ ಮನೆಗೆ ಮೆಡಿಕಲ್‌ ಕಿಟ್‌ ತಲುಪಿಸುವ ಜೊತೆ ಅವರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.
ಮುಖ್ಯಾಧಿಕಾರಿ ರವಿಕುಮಾರ್‌ ಮಾತನಾಡಿ, ಸಾರ್ವಜನಿಕರು ಸರ್ಕಾರ ಸೂಚಿಸುವ ನಿಯಮಾವಳಿ ಪಾಲನೆ ಮಾಡಬೇಕು, ಮಳಿಗೆ ಮಾಲೀಕರು ಸಹ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಿ ವಹಿವಾಟು ನಡೆಸಿ ಸೋಂಕು ನಿಯಂತ್ರಿಸಲು ಪುರಸಭೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!