ಕುಣಿಗಲ್: ತಾಲೂಕಿನಲ್ಲಿ ಸೋಂಕು ದಿಡೀರ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದಲ್ಲಿ ಜನ ಸಂದಣಿ ನಿಯಂತ್ರಿಸಲು ಪುರಸಭೆ, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು.
ಸೋಮವಾರ ಪ್ರಕಟಗೊಂಡ ಕೊವಿಡ್ ಸೋಂಕಿತರ ಪಟ್ಟಿಯಲ್ಲಿ ತಾಲೂಕಿನಲ್ಲಿ 306 ಸೋಂಕಿತರು ಪತ್ತೆಯಾಗುವ ಮೂಲಕ ಅಧಿಕ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಮೂಲಗಳ ಪ್ರಕಾರ ಈ ವರದಿಯು ಕಳೆದ ನಾಲ್ಕು ದಿನಗಳ ವರದಿ ಎನ್ನಲಾಗುತ್ತಿದೆ. ಒಟ್ಟಾರೆ ಸೋಮವಾರ ಪ್ರಕಟಗೊಂಡ ಸೋಂಕಿತರ ವರದಿಯಿಂದ ತಾಲೂಕಿನಲ್ಲಿ ಅಧಿಕೃತವಾಗಿ 4943 ಸೋಂಕಿತರಾಗಿ 3407 ಬಿಡುಗಡೆಗೊಂಡರೆ, 1501 ಸಕ್ರಿಯ ಪ್ರಕರಣಗಳಿವೆ. ಸೋಮವಾರದ ವರದಿಯಂತೆ ಪಟ್ಟಣದಲ್ಲಿ ಮೂರು ಪ್ರಕರಣ ವರದಿಯಾದರೂ ಹೆಚ್ಚಿನ ಸೋಂಕು ತಡೆಗಟ್ಟಲು ಪುರಸಭೆಯ 14, 15 ವಾರ್ಡ್ ಪ್ರದೇಶದ ಸಂತೇಮೈದಾನ ರಸ್ತೆಯಲ್ಲಿ ಸಗಟು ಮಾರಾಟ ಮಳಿಗೆಗಳು, ತರಕಾರಿ ಮಾರಾಟ ಮಳಿಗೆಗಳು ಇರುವುದರಿಂದ ಜನಸಂದಣಿ ನಿಯಂತ್ರಿಸಲಿ, ಪುರಸಭೆ ಅಧಿಕಾರಿಗಳು ಈ ರಸ್ತೆ ಸೇರುವ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದರು.
ತರಕಾರಿ, ಹೂ ಮಾರಾಟವನ್ನು ಬುಧವಾರದಿಂದಲೆ ನಿಷೇಧಿಸಿ ಆದೇಶ ಹೊರಡಿಸಿದ್ದು, ತರಕಾರಿ, ಹೂ, ಹಣ್ಣು ಮಾರಾಟಗಾರರು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಮನೆ ಮನೆ ಬಳಿ ತೆರಳಿ ಮಾರಾಟ ಮಾಡಲು ಖಡಕ್ ಸೂಚನೆ ನೀಡಿದರು.
ಸಿಪಿಐ ರಾಜು ನೇತೃತ್ವದಲ್ಲಿ ಪೊಲೀಸರು ರಸ್ತೆ ಬದಿಯಲ್ಲಿ ಹೂ, ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದವರನ್ನು ತೆರವುಗೊಳಿಸಿ ಮನೆ ಮನೆ ಬಳಿ ತೆರಳಿ ಮಾರಾಟ ಮಾಡುವಂತೆ ಸೂಚನೆ ನೀಡಿ ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಅರವತ್ತಕ್ಕು ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದರು. ವಾಹನ ಬಿಡಿಸಲು ಠಾಣೆ ಬಳಿ ಬಂದವರಿಗೆ ಪೊಲೀಸ್ ಅಧಿಕಾರಿಗಳು ಕೊವಿಡ್ ನಿಯಂತ್ರಣಕ್ಕೆ ದಯಮಾಡಿ ಸಹಕಾರ ನೀಡುವಂತೆ, ಇಲಾಖೆಯೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದು ಸೋಂಕಿನ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮ ಜಾರಿಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಜನಸಂದಣಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ
Get real time updates directly on you device, subscribe now.
Prev Post
Comments are closed.