ಲಾಕ್ ಡೌನ್‌ ಹೊಡೆತದಿಂದ ಅಪಾರ ನಷ್ಟ- ಬೇಸತ್ತು ಬೆಳೆ ನಾಶ ಮಾಡಿದ ರೈತ

ಚೆಂದದ ಚೆಂಡು ಹೂವನ್ನು ಕೇಳೋರೇ ಇಲ್ಲ..

495

Get real time updates directly on you device, subscribe now.

ಗುಬ್ಬಿ: ಕಳೆದ ವರ್ಷ ಕೊರೊನಾ ಲಾಕ್ ಡೌನ್‌ ಸಂದರ್ಭದಲ್ಲಿ ಸುಮಾರು ಮೂರುವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಜಾತಿಯ ಚೆಂಡು ಹೂ ಮಾರಾಟವಾಗದೆ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದ ಪಟ್ಟಣದ ಹೊರ ವಲಯದ ಪ್ರಗತಿ ಪರ ರೈತ ಜಿ.ಸಿ.ರಾಮಚಂದ್ರುಗೆ ಈ ಭಾರಿಯೂ ಕೊರೊನಾ ಲಾಕ್ ಡೌನ್‌ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.
ಈ ಬಾರಿಯಾದರೂ ಚೆನ್ನಾಗಿ ಹೂ ಬೆಳೆದು ಹೆಚ್ಚಿನ ಹಣ ಸಂಪಾದಿಸಬಹುದೆಂಬ ಉದ್ದೇಶದಿಂದ ಸುಮಾರು ಐದು ಲಕ್ಷ ರೂ. ಖರ್ಚು ಮಾಡಿ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿರುವ ಚೆಂಡು ಹೂ ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಮತ್ತೆ ಲಾಕ್ ಡೌನ್‌ ಜಾರಿಯಾಗಿದ್ದು, ಬೆಳೆದು ನಿಂತಿರುವ ಹೂವನ್ನು ಕೊಯ್ಲು ಮಾಡಲಾಗದೆ ಮತ್ತಷ್ಟು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿತ್ತು. ನಾಲ್ಕು ಎಕರೆ ಪ್ರದೇಶದಲ್ಲಿ ತೇರಿನಂತೆ ಸಿಂಗಾರಗೊಂಡಿದ್ದ ಚೆಂಡು ಹೂ ಕೊಳ್ಳುವವರಿಲ್ಲದೆ ಬೇಸತ್ತು ಟ್ರಾಕ್ಟರ್ ನಲ್ಲಿ ಹೂ ಸಮೇತ ಉಳುಮೆ ಮಾಡಿರುವ ಘಟನೆ ನಡೆದಿದೆ.
ಪ್ರತಿವರ್ಷವೂ ಇದೇ ಪರಿಸ್ಥಿತಿ ಎದುರಾದರೆ ರೈತರು ಜೀವನ ಸಾಗಿಸುವುದು ಹೇಗೆ ಎನ್ನುವ ಪ್ರಶ್ನೆ ರೈತ ರಾಮಚಂದ್ರು ಅವರನ್ನು ಕಾಡುತ್ತಿದೆ. ಕಳೆದ ಬಾರಿ ಸರ್ಕಾರ ಹೂ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ನೆರವು ನೀಡುವ ಯೋಜನೆ ಜಾರಿಗೊಳಿಸಿತ್ತಾದರೂ ಈವರೆಗೂ ನಷ್ಟದ ಪರಿಹಾರದ ಹಣ ರೈತರ ಕೈ ಸೇರಿಲ್ಲ ಎನ್ನುತ್ತಾರೆ ರೈತ ರಾಮಚಂದ್ರು.
ಕಳೆದ ಬಾರಿ ಲಕ್ಷಾಂತರ ರೂ. ನಷ್ಟ ಅನುಭವಿಸಿ ಬೇಸತ್ತ ರೈತ ಈ ಬಾರಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದರು, ಆದರೆ ಈ ಬಾರಿ ಹೂ ಕಟಾವಿಗೆ ಬರುವಷ್ಟರಲ್ಲಿ ಮತ್ತೆ ಲಾಕ್ ಡೌನ್‌ ಜಾರಿಯಾಗಿ ಬೆಳೆದು ನಿಂತಿದ್ದ ಹೂವನ್ನು ಕೇಳುವವರಿಲ್ಲದೆ ದಿನ ನಿತ್ಯ ಚಂಡು ಹೂವಿನ ತೋಟ ನೋಡಿ ಬೇಸತ್ತು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ಮಣ್ಣು ಪಾಲು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಳುಗಳು ಸಿಗದೆ ಕಷ್ಟಪಟ್ಟು ಭೂಮಿ ಉಳುಮೆ ಮಾಡಿಸಿ ಕಳೆ ತೆಗೆಸಿ ಲಕ್ಷಾಂತರ ರೂ. ಖರ್ಚು ಮಾಡಿ ಗೊಬ್ಬರ, ರಾಸಾಯನಿಕ ಸಿಂಪಡಣೆ ಮತ್ತು ಚೆಂಡು ಹೂವಿನ ಸಸಿಗಳನ್ನು ಖರೀದಿಸಿ ನಾಟಿ ಮಾಡಿಸಿದ್ದು ಇದೀಗ ಹೂಗಳು ಕೊಯ್ಲಿಗೆ ಬಂದಿದ್ದು ಲಾಕ್ ಡೌನ್ ನಿಂದಾಗಿ ಹೂ ಕಟಾವು ಮಾಡಿ ಎಲ್ಲಿ ಮಾರಾಟ ಮಾಡುವುದು, ಯಾರು ಕೊಳ್ಳುತ್ತಾರೆ ಎಂಬ ಚಿಂತೆ ಕಾಡಲಾರಂಭಿಸಿತ್ತು, ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 2 ರೂ. ಗೆ ಒಂದು ಕೆಜಿಯಂತೆ ಕೇಳುತ್ತಾರೆ, ಹೂ ಕೀಳಲು ಆಳುಗಳ ಖರ್ಚು, ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾರಿಗೆ ವೆಚ್ಚ ಲೆಕ್ಕ ಹಾಕಿದರೆ ಹೂ ಕೀಳುವುದೆ ಬೇಡ ಎಂದು ಬೇಸತ್ತು ಉತ್ತಮವಾಗಿ ಬೆಳೆದು ನಿಂತಿದ್ದ ಚೆಂಡು ಹೂವಿನ ತೋಟವನ್ನು ಸಂಪೂರ್ಣವಾಗಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿದ್ದಾರೆ, ಇದರಿಂದ ಚೆಂಡು ಹೂ ಬೆಳೆಯಲು ಖರ್ಚು ಮಾಡಿದ್ದ ಐದು ಲಕ್ಷ ರೂ. ಮಣ್ಣು ಪಾಲಾಗಿದೆ. ಸರ್ಕಾರ ಈ ಭಾರಿಯಾದರೂ ತೀವ್ರ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡುತ್ತದೆಯೆ ಎಂಬುದನ್ನು ಕಾದುನೋಡಬೇಕಾಗಿದೆ ಎನ್ನುತ್ತಾರೆ ನೊಂದ ರೈತ ರಾಮಚಂದ್ರು.
ಲಾಕ್‌ ಡೌನ್‌ ನಿಂದಾಗಿ ಮದುವೆ, ಜಾತ್ರೆ ಸೇರಿದಂತೆ ಇತರೆ ಶುಭಾ ಕಾರ್ಯ ನಿಂತು ಹೋಗಿದ್ದು ಹೊರ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗದೆ ಕಷ್ಟಪಟ್ಟು ಬೆಳೆದ ಚೆಂಡು ಹೂವನ್ನು ನೋಡಿಕೊಂಡು ಬದುಕು ಸಾಗಿಸುವಂತಾಗಿತ್ತು. ಬೇಸತ್ತು ಚೆಂಡು ಹೂವಿನ ಬೆಳೆಯನ್ನು ಉಳುಮೆ ಮಾಡಿಸಬೇಕಾಯಿತು ಎನ್ನುತ್ತಾರೆ ನೊಂದ ರೈತ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ರೈತರು ಬೆಳೆದ ಉತ್ಪನ್ನ ಹಾಳಾಗದಂತೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿ ರೈತರ ಸಂಕಷ್ಟಕ್ಕೆ ಸಹಕರಿಸಬೇಕೆಂದು ರೈತ ರಾಮಚಂದ್ರು ಮನವಿ ಮಾಡಿಕೊಂಡಿದ್ದಾರೆ.
ಬೆಳೆದು ನಿಂತಿರುವ ಚೆಂಡು ಹೂಗಳನ್ನು ಕಟಾವು ಮಾಡಿ ಮಾರಾಟ ಮಾಡೋಣ ಎಂದರೆ ಮಾರುಕಟ್ಟೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಅಲ್ಲದೆ ಕೆಜಿ ಚೆಂಡು ಹೂಗೆ ಕೇವಲ 2 ರೂ. ನಂತೆ ಕೇಳುತ್ತಾರೆ, ಆಳುಗಳ ಸಹಾಯದಿಂದ ಹೂ ಕಟಾವು ಮಾಡಿಸಿ ಮಾರುಕಟ್ಟೆಗೆ ಸಾಗಿಸಲು ಸಾವಿರಾರು ರೂ. ಖರ್ಚಾಗುತ್ತದೆ, ಇದರಿಂದ ತುಂಬಾ ನಷ್ಟ ಉಂಟಾಗಿದೆ. ಮಾರುಕಟ್ಟೆಗಳಲ್ಲಿ ಉತ್ತಮ ಬೆಲೆ ದೊರೆತರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ, ಆದರೆ ಕೊರೊನಾ ಲಾಕ್ ಡೌನ್‌ ಕಳೆದ ವರ್ಷದಂತೆ ಈ ಬಾರಿಯೂ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

Get real time updates directly on you device, subscribe now.

Comments are closed.

error: Content is protected !!