ನಿರ್ಲಕ್ಷ್ಯ ವಹಿಸಿದ್ರೆ ರಾಜ್ಯವೇ ನಾಶವಾಗುತ್ತೆ ಎಚ್ಚರ: ಜಪಾನಂದಜಿ

ಹಳ್ಳಿಗಳಲ್ಲಿ ಕೊರೊನಾ ತಡೆಗೆ ಕ್ರಮ ವಹಿಸಲಿ

95

Get real time updates directly on you device, subscribe now.

ತುಮಕೂರು: ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು 2ನೇ ಅಲೆ ಈಗ ಗ್ರಾಮೀಣ ಭಾಗಕ್ಕೆ ಹೆಚ್ಚಾಗಿ ಹಬ್ಬಿರುವುದು ಕಳವಳ ಮೂಡಿಸಿದೆ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಜಪಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡಿ ಜಾಗೃತಿ ಮೂಡಿಸದಿದ್ದರೆ ಇಡಿ ರಾಜ್ಯ ನಾಶದ ಹಂಚಿಗೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಜನರು ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಸೋಂಕಿತರು ಸೂಕ್ತ ಕಾಲದಲ್ಲಿ ಸರಿಯಾದ ಚಿಕಿತ್ಸೆ ಪಡೆಯುತ್ತಿಲ್ಲ, ಇದು ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಸರ್ಕಾರ ಈ ಬಗ್ಗೆ ಗಮನಹರಿಸಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಸಂಬಂಧಿಸಿದ ಔಷಧಿ, ಮಾತ್ರೆಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು, ರೋಟರಿ, ಲಯನ್ಸ್ ಸೇರಿದಂತೆ ಎಲ್ಲಾ ರೀತಿಯ ಸಂಘ, ಸಂಸ್ಥೆಗಳು, ಸಂಘಟನೆಗಳ ಸಹಕಾರ ಪಡೆದರೆ ಮತ್ತು ಇದಕ್ಕೆ ಪೂರಕವಾಗಿ ಸಾರ್ವಜನಿಕರು ಸ್ಪಂದಿಸಿದರೆ ಕೋವಿಡ್‌ ಗೆಲ್ಲಲು ಸಾಧ್ಯ ಎಂದರು.
ಬೆಂಗಳೂರಿನ ಇನ್ಫೋಸಿಸ್‌ ಫೌಂಡೇಷನ್‌ ಸಹಕಾರದೊಂದಿಗೆ ಶ್ರೀರಾಮಕೃಷ್ಣ ಸೇವಾಶ್ರಮ ನೇತೃತ್ವದಲ್ಲಿ ಕೋವಿಡ್‌-19 ಎರಡನೆ ಅಲೆ ನಿಯಂತ್ರಣ ಯೋಜನೆ ರೂಪಿಸಿದ್ದು, ಏ.18 ರಿಂದ ಮಾರ್ಚ್‌ 19 ರ ವರೆಗೆ ಮಧ್ಯಂತರ ವರದಿ ತಯಾರಿಸಿದ್ದು, ಸೋಂಕು ಹರಡುವುದನ್ನು ತಡೆಯಲು ಅಗತ್ಯ ಮಾರ್ಗೋಪಾಯ ಜಾರಿಗೊಳಿಸಲು ಮುಂದಾಗಿದೆ ಎಂದರು.
ನಮ್ಮ ಆಶ್ರಮದ ವತಿಯಿಂದ ಪಾವಗಡ ತಾಲೂಕಿನ ಅಗತ್ಯವಿರುವ ಕಡೆ ಸೋಂಕು ನಿವಾರಕ ಔಷಧಿ ಸಿಂಪಡಿಸುವಿಕೆ, ಮಧ್ಯಾಹ್ನದ ಭೋಜನ ವಿತರಿಸುವ ಕಾರ್ಯಕ್ರಮ, ದವಸ ಧಾನ್ಯಗಳ ಕಿಟ್‌ ವಿತರಣೆ, ಆಮ್ಲಜನಕ ಸಿಲಿಂಡರ್ ಗಳ ಕೊಡುಗೆ, ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರಿಗೆ ಉಚಿತವಾಗಿ ಔಷಧಿ ವಿತರಣೆ, ಬರಪರಿಹಾರ ಯೋಜನೆಯಡಿ ಜಾನುವಾರು ಮೇವು ವಿತರಣೆ, ಅಗ್ನಿಶಾಮಕ ಠಾಣೆಗೆ ಶಾಶ್ವತ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

Get real time updates directly on you device, subscribe now.

Comments are closed.

error: Content is protected !!