ತುಮಕೂರು: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ನಿರಂತರ ಸಹಕಾರ ನೀಡುವ ಮೂಲಕ ರಾಜ್ಯಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದೆ ಎಂದು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಲಭ್ಯವಿದ್ದ 26 ಸಾವಿರ ವೆಂಟಿಲೇಟರ್ ಬೆಡ್ ಗಳನ್ನು 80 ಸಾವಿರಕ್ಕೆ ಹೆಚ್ಚಿಸಲಾಗಿದೆ, ದೇಶಾದ್ಯಂತ ಆಕ್ಸಿಜನ್ ಕೊರತೆ ನೀಗಿಸಲು ತುರ್ತು ಕ್ರಮ ಕೈಗೊಂಡು ದೇಶಾದ್ಯಂತ ಲಭ್ಯವಾಗುವಂತೆ ಏರ್ ಕ್ರಾಫ್ಟ್, ರೈಲ್ವೆ ಹಾಗೂ ಹಡಗುಗಳ ಮೂಲಕ ಆಕ್ಸಿಜನ್ ಸರಬರಾಜು ಮಾಡಿದೆ, ಅಲ್ಲದೆ ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದನೆ ಮಾಡಲು ಹೊಸ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿರುವುದು, ರಾಜ್ಯದಲ್ಲಿ ಸುಮಾರು 32 ಹೊಸ ಘಟಕ ಪ್ರಾರಂಭವಾಗುತ್ತಿರುವುದು ವಿಶೇಷ ಎಂದರು.
ಕೊರೊನ ವಿರುದ್ಧ ಹೋರಾಟಕ್ಕೆ ಪಿಎಂ ಕೇರ್ ಫಂಡ್ ಮೂಲಕ 322.5 ಕೋಟಿ ರೂ. ವೆಚ್ಚದಲ್ಲಿ 1.5 ಲಕ್ಷ ಆಕ್ಸಿಕೇರ್ ಸಿಸ್ಟಮ್ ಖರೀದಿಸಲಾಗುತ್ತಿದೆ, ಭಾರತೀಯ ರೈಲ್ವೆ 4,400 ಕೋವಿಡ್ ಕೇರ್ ಕೇಂದ್ರಗಳಲ್ಲಿ 70 ಸಾವಿರ ಐಸೋಲೇಷನ್ ಬೆಡ್ ಗಳ ವ್ಯವಸ್ಥೆ ಮಾಡಿದೆ, ರೈಲ್ವೆಯ ಐಸೋಲೇಷನ್ ಕೋಚ್ ಗಳಲ್ಲಿ 70 ಸಾವಿರ ಬೆಡ್ ಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಅಗತ್ಯವಿರುವ ಕಡೆ ರೈಲ್ವೆ ಮಾರ್ಗದ ಮೂಲಕ ತೆಗೆದುಕೊಂಡು ಹೋಗಲು ಅವಕಾಶವಿದೆ ಎಂದು ತಿಳಿಸಿದರು.
ಇನ್ನು ರಾಜ್ಯ ಸರ್ಕಾರವೂ ಕೋವಿಡ್ ನಿರ್ವಹಣೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಏಪ್ರಿಲ್ 24 ರಿಂದ ರಾಜ್ಯಾದ್ಯಂತ ಕಠಿಣ ನಿರ್ಬಂಧ ಹೇರುವ ಮೂಲಕ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದೆ. ರಾಜ್ಯದಲ್ಲಿ ಮೇ 5 ರಿಂದ ಗರಿಷ್ಠ 50 ಸಾವಿರಕ್ಕೂ ಮೇಲ್ಪಟ್ಟು ಕೋವಿಡ್ ಪ್ರಕರಣ ವರದಿಯಾಗುತ್ತಿದ್ದವು, ಈಗ 39,900ಕ್ಕೆ ಇಳಿದಿದೆ. ಪ್ರಾರಂಭದಲ್ಲಿ ಏರುಗತಿಯಲ್ಲಿದ್ದ ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು, ಬೀದರ್ ಮತ್ತು ಕಲಬುರ್ಗಿಯಲ್ಲಿ ಕ್ರಮೇಣ ಪಾಸಿಟಿವ್ ದರ ಕಡಿಮೆಯಾಗುತ್ತಿದೆ ಎಂದರು.
ಜಿಲ್ಲೆಗಳಲ್ಲಿರುವ ಆಮ್ಲಜನಕ ಬೇಡಿಕೆಯ ಒತ್ತಡ ನಿವಾರಿಸಲು 10 ಸಾವಿರದವರೆಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಪಡೆಯಲು ತೀರ್ಮಾನಿಸಲಾಗಿದೆ, ಕಳೆದ 15- 20 ದಿನಗಲ್ಲಿ 730 ಆಮ್ಲಜನಕ ಸಿಲಿಂಡರ್ ಗಳನ್ನು ತರಿಸಿದ್ದೇವೆ, 380 ಸಿಲಿಂಡರ್ ಗಳನ್ನು ಕೇಂದ್ರ ಸರ್ಕಾರ ಒದಗಿಸಿದ್ದು, 350 ಸಿಲಿಂಡರ್ ಗಳನ್ನು ವಿದೇಶಗಳಿಂದ ಪಡೆಯಲಾಗಿದೆ, ಈ ಸಿಲಿಂಡರ್ ಗಳನ್ನು ಅಗತ್ಯವಿರುವ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಮೂರು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಈಗಾಗಲೇ ರಾಜ್ಯದೆಲ್ಲೆಡೆ ಹಂಚಿಕೆ ಮಾಡಲಾಗಿದೆ, ಸರ್ಕಾರ ಹಾಗೂ ವಿವಿಧ ಕಂಪನಿಗಳ ಸಿ ಎಸ್ ಆರ್ ಫಂಡ್ ನೆರವಿನೊಂದಿಗೆ ಇನ್ನೂ ಏಳು ಸಾವಿರ ಕಾನ್ಸಂಟ್ರೇಟರ್ ಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ಮೂಲಕ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಸೇವಾ ಕಾರ್ಯ ಕೈಗೊಂಡಿದೆ. ರಾಜ್ಯಾದ್ಯಂತ 250 ಸಹಾಯ ಕೇಂದ್ರಗಳ ಮೂಲಕ ವಿಶೇಷ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 2,48,211 ಮಾಸ್ಕ್ ಗಳನ್ನು ವಿತರಿಸಲಾಗಿದೆ. 78,532 ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. 19,464 ಪಡಿತರ ಕಿಟ್ ಗಳನ್ನು, 3,394 ಸೋಂಕಿತರಿಗೆ ಆಕ್ಸಿಜನ್ ನೆರವು, 4,325 ರೆಮ್‌ಡಿಸಿವಿರ್ ಇಂಜೆಕ್ಷನ್ ಸಹಾಯ, 1927 ವೆಂಟಿಲೇಟರ್ ಗಳ ಸಹಾಯ, 34 ಆ್ಯಂಬುಲೆನ್ಸ್ ಗಳ ನೆರವು, 76 ಕೇಂದ್ರಗಳಲ್ಲಿ ಸುಮಾರು 5,218 ಯೂನಿಟ್ ರಕ್ತ ಸಂಗ್ರಹ, 23 ಐಸೋಲೇಷನ್ ಆರೈಕೆ ಕೇಂದ್ರಗಳು ಟೆಲಿಫೋನ್ ಮೂಲಕ 250 ಕೇಂದ್ರಗಳಲ್ಲಿ ವೈದ್ಯಕೀಯ ಸಹಾಯ, 35 ಕೇಂದ್ರಗಳಲ್ಲಿ ಶವ ಸಂಸ್ಕಾರ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ಕೈಗೊಂಡಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೊಪ್ಪಳ್ ನಾಗರಾಜ್, ಶಿವಕುಮಾರ್ ಇದ್ದರು.
ಸರ್ಕಾರದಿಂದ ಕೋವಿಡ್ ನಿರ್ವಹಣೆಗೆ ಅಗತ್ಯ ಕ್ರಮ: ಜಿ ಎಸ್ ಬಿ
Get real time updates directly on you device, subscribe now.
Comments are closed.