ಜಿಲ್ಲೆಗೆ 6 ಆಕ್ಸಿಜನ್‌ ಉತ್ಪಾದನಾ ಘಟಕ ನೀಡಲಾಗುವುದು: ಡಾ.ಕೆ.ಸುಧಾಕರ್

ಇದೇ ವರ್ಷದಲ್ಲಿ ಎಲ್ಲರಿಗೂ ಲಸಿಕೆ ಕೊಡ್ತೇವೆ

394

Get real time updates directly on you device, subscribe now.

ತುಮಕೂರು: ರಾಜ್ಯದ ಎಲ್ಲರಿಗೂ 2021ರ ವರ್ಷದ ಅಂತ್ಯದೊಳಗೆ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.
ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕೋವಿಡ್‌- 19 ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಕೋವಿನ್‌ ಪೋರ್ಟಲ್‌ನಲ್ಲಿ ಯಾರು ಎಲ್ಲಿಯಾದರೂ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದಾದ ವ್ಯವಸ್ಥೆಯಿರುವುದರಿಂದ ಬೆಂಗಳೂರಿಗರು ಅಕ್ಕಪಕ್ಕದ ನೆರೆಯ ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಲು ಆಯಾ ಜಿಲ್ಲೆಯ ಜನರು ಜಿಲ್ಲೆಯಲ್ಲಿ ಮಾತ್ರ ಲಸಿಕೆ ಪಡೆಯುವಂತೆ ಮಾಡುವ ಸಲುವಾಗಿ ರಾಜ್ಯಮಟ್ಟದ ಪೋರ್ಟಲ್‌ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 2015 ವೈದ್ಯರ ನೇಮಕಾತಿ ಆದೇಶ ಆಗಿದ್ದು, ನೇಮಕಾತಿ ಆದೇಶ ನೀಡಲಾಗುತ್ತಿದೆ, ತುಮಕೂರು ಜಿಲ್ಲೆಯಲ್ಲಿಯೂ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ವೈದ್ಯರು ನೇಮಕಗೊಳ್ಳಲಿದ್ದಾರೆ, ಸೋಮವಾರದಿಂದ ಬುಧವಾರದೊಳಗೆ ನೇಮಕಗೊಂಡ ವೈದ್ಯರು ಸೇವೆಗೆ ಹಾಜರಾಗಲಿದ್ದಾರೆ, ಇದರಿಂದ ವೈದ್ಯರ ಕೊರತೆ ಸಮಸ್ಯೆ ಬಗೆಹರಿಯಲಿದೆ, ಇದರ ಜೊತೆಗೆ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಿಂದ ಜಿಲ್ಲೆಗೆ 6 ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ನೀಡಲಾಗುವುದು, ಈಗಾಗಲೇ ಜಿಲ್ಲಾಸ್ಪತ್ರೆಗೆ 25 ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗಿದ್ದು, ಕೋವಿಡ್‌ ಔಷಧಗಳನ್ನು ಅಗತ್ಯಕ್ಕಿಂತಲೂ ಹೆಚ್ಚುವರಿಯಾಗಿ ಪೂರೈಕೆ ಮಾಡಲಾಗುವುದು, ಸೋಂಕು ದೃಢಪಟ್ಟ ಸೋಂಕಿತನಿಗೆ 4-5 ಗಂಟೆಯೊಳಗೆ ಕೋವಿಡ್‌ ಮೆಡಿಕಲ್‌ ಕಿಟ್‌ ತಲುಪಿಸಬೇಕು, ಪ್ರತಿ ತಾಲೂಕಿನಲ್ಲಿಯೂ ಶಾಸಕರು, ಅಧಿಕಾರಿಗಳು ಕ್ರಿಯಾಶೀಲರಾಗಿ ಪರಿಣಾಮಕಾರಿಯಾಗಿ ಸೋಂಕಿತರಿಗೆ ಮೊದಲನೆ ದಿನದಿಂದಲೇ ಆರೈಕೆ ಮಾಡಲು ಪ್ರಾರಂಭಿಸಬೇಕು, ಇದರಿಂದ ಸೋಂಕಿತರಿಗೆ ಗಂಭೀರ ಸಮಸ್ಯೆ ಉಂಟಾಗಲ್ಲ, ಸೋಂಕಿತರಿಗೆ ತಡವಾಗಿ ಚಿಕಿತ್ಸೆ ನೀಡಿದರೆ ಗಂಭೀರ ಸ್ಥಿತಿಗೆ ತಲುಪುತ್ತಾರೆ, ಹಾಗಾಗಿ ಪ್ರಾರಂಭದಿಂದಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ ನಿಗ್ರಹವಾಗುತ್ತಿದೆ, ಆರಂಭದಲ್ಲಿ ತುಮಕೂರಿನ ಬಗ್ಗೆ ಆತಂಕ ಇತ್ತು, ಈಗ ಆತಂಕ ಕಡಿಮೆಯಾಗಿದೆ, ಸಮಾಧಾನ ಸ್ಥಿತಿಯೆಡೆಗೆ ಜಿಲ್ಲೆ ಬರುತ್ತಿದೆ ಎಂದರು.
ಮೂರನೇ ಅಲೆ ಕಡಿವಾಣಕ್ಕೆ ಆರೋಗ್ಯ ಇಲಾಖೆ ಮೂಲಭೂತ ಸೌಕರ್ಯ ಹೆಚ್ಚು ಮಾಡಿಕೊಂಡು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗುತ್ತಿದೆ, ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ, ಖಾಸಗಿ ಆ್ಯಂಬುಲೆನ್ಸ್ ಗಳಿಗೂ ದರ ನಿಗದಿ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶ್ರೀದೇವಿ ಮತ್ತು ಸಿದ್ಧಾರ್ಥ ಮೆಡಿಕಲ್‌ ಕಾಲೇಜು ಸೇರಿದಂತೆ ಎರಡೂ ಕಾಲೇಜುಗಳು ಕನಿಷ್ಟ 500 ಆಮ್ಲಜನಕ ಹಾಸಿಗೆಗಳನ್ನು ಹೆಚ್ಚು ಮಾಡಬೇಕು, ಅಂತಿಮ ವರ್ಷ ನರ್ಸಿಂಗ್‌ ವಿದ್ಯಾರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರದ ಆದೇಶದಂತೆ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಶೇ.75 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಬಿಇಎಲ್‌, ರೋಟರಿ, ವಿಪ್ರೋ ಸಂಸ್ಥೆಯವರು ಆಮ್ಲಜನಕ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ, ಹಾಗಾಗಿ ಎಲ್ಲಾ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸ್ವಯಂ ಆಮ್ಲಜನಕ ಉತ್ಪಾದನೆ ಮಾಡಿಕೊಳ್ಳಲು ಅವಕಾಶವಿದೆ, ಆದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗು ಇನ್ನೂ 50 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಡಬೇಕು, ಅಲ್ಲದೆ ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರಿಗೆ 50-100 ಹಾಸಿಗೆಗಳ ಸಮುದಾಯ ಆಸ್ಪತ್ರೆ ಕೊಡಬೇಕು, ಇದರಿಂದ ಮುಂಬರುವ ಕೋವಿಡ್‌ ಅಲೆಯಲ್ಲಿ ಪ್ರತಿ ತಾಲೂಕಿನಲ್ಲಿಯೂ 100 ಹಾಸಿಗೆಗಳ ವ್ಯವಸ್ಥೆಯಾಗಲಿದ್ದು, ಜಿಲ್ಲೆಯಲ್ಲಿ ಕೋವಿಡ್‌ ನಿಗ್ರಹವನ್ನು ಸಮರ್ಪಕವಾಗಿ ಮಾಡಬಹುದು ಎಂದು ಸಚಿವರಿಗೆ ಮನವಿ ಮಾಡಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್‌ ವಾರಗಟ್ಟಲೆ ಕೆಲಸ ಮಾಡುತ್ತಿಲ್ಲ ಎಂಬ ಸಬೂಬು ಕೊಡಬಾರದು, ಸರ್ಕಾರಿ ಆಸ್ಪತ್ರೆಗಳಲ್ಲಿಯೆ ಸಿಟಿ ಸ್ಕ್ಯಾನ್‌ ಇಟ್ಟುಕೊಂಡು ಖಾಸಗಿ ಆಸ್ಪತ್ರೆಗೆ ರೆಫರ್‌ ಮಾಡಬಾರದು, ಸಮರ್ಪಕವಾಗಿ ಸಿಟಿ ಸ್ಕ್ಯಾನ್‌ ಮಾಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ ಬಾಬುಗೆ ಸೂಚಿಸಿದರು.
ಜನರಲ್‌ ಬೆಡ್‌ ಮೇಲೆ ಚಿಕಿತ್ಸೆ ನೀಡಿ ಐಸಿಯು ಬೆಡ್‌ ಚಿಕಿತ್ಸೆಯ ಬಿಲ್‌ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಕೈಗಾರಿಕೋದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು 50 ಸಾವಿರ ಮಾಸ್ಕ್ ಮತ್ತು 5 ಸಾವಿರ ಸ್ಯಾನಿಟೈಸರ್, 500- 600 ಪಲ್ಸ್ ಆಕ್ಸಿಮೀಟರ್‌ ದಾನ ನೀಡಿದ್ದು, ಗ್ರಾಮ ಮಟ್ಟದಲ್ಲಿ ಆಶಾ- ಅಂಗನವಾಡಿ ಕಾರ್ಯಕರ್ತೆಯರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಬಳಿಕ ಜಿಲ್ಲೆಯಲ್ಲಿ ಕೈಗೊಂಡಿರುವ ನಿಯಂತ್ರಣಾ ಕ್ರಮಗಳ ಕುರಿತು ಪರಿಶೀಲಿಸಿದ ಸಚಿವ ಡಾ.ಕೆ.ಸುಧಾಕರ್‌, ಸಿಟಿ ಸ್ಕ್ಯಾನ್‌ ಗೆ ಸರ್ಕಾರ ನಿಗಧಿಪಡಿಸಿರುವ ದರವನ್ನು ಮಾತ್ರವೇ ಪಡೆಯಬೇಕು, ಸೋಂಕಿತರಿಗೆ ಔಷಧಗಳ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ಚಿಕಿತ್ಸಾ ಸೌಲಭ್ಯ ಸಾಕಷ್ಟಿದೆ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸೋಂಕಿತರಿಗೆ ಕೊರತೆಯಾಗದಂತೆ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 678 ಆಮ್ಲಜನಕ ಹಾಸಿಗೆ, 87 ವೆಂಟಿಲೇಟರ್‌ಗಳಿದ್ದು ಈ ಪೈಕಿ 8 ಆಮ್ಲಜನಕ ಹಾಸಿಗೆ ಮತ್ತು 13 ವೆಂಟಿಲೇಟರ್‌ಗಳು ಖಾಲಿಯಿವೆ. ಅದರಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ 581 ಆಮ್ಲಜನಕ ಹಾಸಿಗೆ, 48 ವೆಂಟಿಲೇಟರ್ ಗಳಿದ್ದು ಈ ಪೈಕಿ 89 ಆಮ್ಲಜನಕ ಹಾಸಿಗೆ ಮತ್ತು 10 ವೆಂಟಿಲೇಟರ್ ಗಳು ಖಾಲಿಯಿವೆ. ಜಿಲ್ಲೆಯಲ್ಲಿ ಈವರೆಗೆ ಸರ್ಕಾರಿ ಮತ್ತು ಖಾಸಗಿ ಸೇರಿ 6,59,533 ಆರ್ ಟಿ ಪಿ ಸಿ ಆರ್‌ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, 62,306 ಜನರಿಗೆ ಸೋಂಕು ದೃಢವಾಗಿದೆ. 2,13,253 ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗಿದ್ದು, 21,634 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿಯೂ ಕೋವಿಡ್‌-19 ಸೋಂಕಿನ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, ಗ್ರಾಮ ಪಂಚಾಯತಿ ಕಾರ್ಯಪಡೆ ಸೋಂಕಿತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ, ಸೋಂಕು ದೃಢಪಟ್ಟ ಗ್ರಾಮಗಳಿಗೆ ಸ್ಯಾನಿಟೈಸರ್‌ ಮಾಡಿಸಲಾಗುತ್ತಿದೆ. ಕೋವಿಡ್‌ ಕೇರ್‌ ಸೆಂಟರ್‌ ತೆರೆದು ಸೋಂಕಿತರನ್ನು ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಸದ ಜಿ.ಎಸ್‌.ಬಸವರಾಜು, ಶಾಸಕರಾದ ಡಾ.ರಂಗನಾಥ್‌, ಜಿ.ಬಿ.ಜ್ಯೋತಿಗಣೇಶ್, ಡಾ.ರಾಜೇಶ್‌ ಗೌಡ, ಬಿ.ಸಿ.ನಾಗೇಶ್‌, ಮಸಾಲೆ ಜಯರಾಮ್‌, ಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಇದ್ದರು.

Get real time updates directly on you device, subscribe now.

Comments are closed.

error: Content is protected !!