ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ನಿರ್ವಹಣೆ ಪರಿಶೀಲಿಸಿದ ಸುಧಾಕರ್

115

Get real time updates directly on you device, subscribe now.

ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ನಿರ್ವಹಣೆಯ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪರಿಶೀಲನೆ ನಡೆಸಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಜಿಲ್ಲಾಧಿಕಾರಿ, ಡಿಎಚ್‌ಒ, ಡಿಎಸ್‌ ಹಾಗೂ ಸಂಬಂಧಿಸಿದ ವೈದ್ಯಾಧಿಕಾರಿಗಳಿಂದ ಕೋವಿಡ್‌-19 ಸಂಬಂಧದ ಸಂಪೂರ್ಣ ಮಾಹಿತಿ ಪಡೆದು ಬಳಿಕ ಕೆಲವು ಸೂಚನೆ ನೀಡಿದರು.
ಈ ವೇಳೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಚಿವರಿಗೆ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡಿರುವ ಸಮರ್ಪಕ ಮಾಹಿತಿ ಹೇಳಿದರು.
ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌, ಆಸ್ಪತ್ರೆಯಲ್ಲಿ ಐಸಿಯು, ಆಮ್ಲಜನಕ ಹಾಸಿಗೆಗಳಲ್ಲಿ ಎಷ್ಟು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಮಾಹಿತಿ ಫಲಕದಲ್ಲಿ ಪ್ರದರ್ಶಿಸಬೇಕು. ಟ್ರಯಾಜ್ ಗೆ ಮೊದಲ ಆದ್ಯತೆ ಕೊಡಬೇಕು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ ಟ್ರಯಾಜ್‌ ವ್ಯವಸ್ಥೆಯಾಗಬೇಕು ಎಂದು ನಿರ್ದೇಶಿಸಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಗರದಲ್ಲಿ ನರ್ಸಿಂಗ್‌ ಹಾಸ್ಟೆಲ್‌ ನಿರ್ಮಾಣ ಮಾಡಿ ಕೊಡಿ, ಇನ್ನಷ್ಟು ವೆಂಟಿಲೇಟರ್‌ ಸಂಖ್ಯೆಯನ್ನು ಹೆಚ್ಚು ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಕೆ. ಸುಧಾಕರ್‌ ಮಾಧುಸ್ವಾಮಿ ಅವರ ಮನವಿಗೆ ಸಮ್ಮತಿ ಸೂಚಿಸಿ ಬೇಡಿಕೆ ಈಡೇರಿಸುವುದಾಗಿ ಹೇಳಿದರು.
ಪರಿಶೀಲನೆಗೂ ಮುನ್ನ ಆರೋಗ್ಯ ಇಲಾಖೆಯಿಂದ ನೀಡಿದ್ದ ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಸ್ಪತ್ರೆಗೆ ವಿತರಣೆ ಮಾಡಿದರು. ಈ ವೇಳೆ ಸಂಸದ ಜಿ.ಎಸ್‌.ಬಸವರಾಜು, ಶಾಸಕರಾದ ಡಾ.ರಂಗನಾಥ್‌, ಜಿ.ಬಿ.ಜ್ಯೋತಿಗಣೇಶ್‌, ಮಸಾಲೆ ಜಯರಾಮ್‌, ಬಿ.ಸಿ.ನಾಗೇಶ್‌, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ ಬಾಬು ಇತರರಿದ್ದರು. ಬಳಿಕ ನಗರದ ರೇಣುಕಾ ವಿದ್ಯಾಪೀಠ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!