ಲಾಕ್ ಡೌನ್ ನಿಯಮ ಉಲ್ಲಂಸಿದರೆ ಕಠಿಣ ಕ್ರಮ

467

Get real time updates directly on you device, subscribe now.

ತುರುವೇಕೆರೆ: ಪಟ್ಟಣ ವ್ಯಾಪ್ತಿಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ದ್ವಿಚಕ್ರ ವಾಹನಗಳಿಗೆ ಕಡಿವಾಣ ಹಾಕುವ ಸಲುವಾಗಿ ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ಖಾಕಿ ಪಡೆ ಪಟ್ಟಣದ ಪ್ರಮುಖ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿತು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಟ್ಟಣದಲ್ಲಿ ನಡೆದ ಕೋವಿಡ್ ನಿಯಂತ್ರಣ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಪೊಲೀಸ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಲಾಕ್ ಡೌನ್ ಜಾರಿ ಇರುವ ವೇಳೆ ನಿರಾತಂಕವಾಗಿ ಅಡ್ಡಾಡುತ್ತಿರುವ ದ್ವಿಚಕ್ರ ವಾಹನಗಳ ಬಗ್ಗೆ ಆಕ್ಷೇಪವೆತ್ತಿದ್ದರು. ಸಬೂಬು ಕೇಳದೆ ನಿರ್ದಾಕ್ಷಿಣ ಕ್ರಮಕ್ಕೆ ಡಿವೈಎಸ್ಪಿ ರಮೇಶ್ ಗೆ ಮುಂದಾಗುವಂತೆ ಸಚಿವರು ಸೂಚನೆ ನೀಡಿದ್ದರು.
ಸಚಿವರ ಸೂಚನೆಯ ಮೇರೆಗೆ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ವಾಹನಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಬಿಗಿ ಕ್ರಮಕ್ಕೆ ಮುಂದಾಗಿತ್ತು, ಕಳೆದೆರಡು ದಿನಗಳಿಂದ ಬೆಳಗ್ಗೆ 10 ರ ನಂತರ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲು ಖುದ್ದು ಸಿಪಿಐ ನವೀನ್ ಫೀಲ್ಡಿಗಿಳಿದಿದ್ದರು. ಈ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಅನಗತ್ಯ ಓಡಾಟ ನಡೆಸುತ್ತಿದ್ದ ವಾಹನಗಳ ಸಂಚಾರಕ್ಕೆ ತುಸು ಬ್ರೇಕ್ ಬಿದ್ದಂತಾಗಿದೆ, ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಿರುವ ಕ್ರಮಕ್ಕೆ ಬೆಚ್ಚಿಬಿದ್ದ ನಾಗರಿಕರು ಅನಗತ್ಯವಾಗಿ ಓಡಾಡಲು ಹಿಂದೇಟು ಹಾಕುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ರಮೇಶ್ ಈಗಾಗಲೇ ಕಳೆದರೆಡು ದಿನಗಳಿಂದ ತುರುವೇಕೆರೆ ಠಾಣಾ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಒಟ್ಟು 239 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಟೀ ಶಾಪ್ ತೆರೆದು ಜನರ ಗುಂಪು ಗೂಡುವಿಕೆಗೆ ಕಾರಣರಾಗಿದ್ದು ಮಾತ್ರವಲ್ಲದೆ, ಗುಟ್ಕಾ, ಪಾನ್ ಪರಾಗ್ ಮಾರಾಟ ಮಾಡುತ್ತಿದ್ದ 10 ಮಂದಿ ವಿರುದ್ಧ ಡಿಎಂ ಆಕ್ಟ್ ಅಡಿಯಲ್ಲಿ ಸಿಪಿಐ ನವೀನ್ ಪ್ರಕರಣ ದಾಖಲಿಸಿದ್ದಾರೆ, ಸಾರ್ವಜನಿಕರು ಅನಗತ್ಯ ಓಡಾಟ ನಿಲ್ಲಿಸಬೇಕು, ಆದಷ್ಟು ಮನೆಯಲ್ಲಿಯೇ ಉಳಿದು ಕೊರೊನಾ ಸೋಂಕಿನ ಪ್ರಮಾಣ ತಗ್ಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು ಲಾಕ್ ಡೌನ್ ನಿಯಮ ಉಲ್ಲಂಸುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮಕ್ಕೆ ಇಲಾಖೆ ಮುಂದಾಗಲಿದೆ ಎಂದರು. ಪಟ್ಟಣದ ಎಲ್ಲಾ ಪ್ರವೇಶ ದ್ವಾರಗಳಲ್ಲಿಯೂ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು. ಕಾರ್ಯಾಚರಣೆ ವೇಳೆ ಸಿಪಿಐ ನವೀನ್, ಎಎಸ್ಐ ವೆಂಕಟೇಶ್, ಪೇದೆಗಳಾದ ನವೀನ್, ಸತೀಶ್, ರಮೇಶ್, ಸೋಮಣ್ಣ ಇದ್ದರು.

Get real time updates directly on you device, subscribe now.

Comments are closed.

error: Content is protected !!