ತುಮಕೂರು: ಭಾರತವನ್ನು ಪ್ರಪಂಚದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ರೂಪಿಸಬೇಕೆಂಬ ಕನಸು ಕಂಡವರು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶವನ್ನು ವೈಜ್ಞಾನಿಕವಾಗಿ ಕಟ್ಟುವ ಮಹದಾಸೆ ಅವರದಾಗಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 31ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅವರ ಆದರ್ಶಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲಿಸುವ ಮೂಲಕ ಅವರ ಭವ್ಯ ಭಾರತದ ಕನಸನ್ನು ನನಸು ಮಾಡಬೇಕಾಗಿದೆ ಎಂದರು.
ಭಾರತದ ಯುವ ಜನತೆಯ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಾವಿನ ನಂತರ ಅವರ ಪತ್ನಿ ಸೋನಿಯಾಗಾಂಧಿ ಅವರು ಸತತ 18 ವರ್ಷ ಕಾಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಯುಪಿಎ 1 ಮತ್ತು ಯುಪಿಎ 2ರ ಅಧಿಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ದೇಶದ ಉನ್ನತ್ತಿಗಾಗಿ ದುಡಿದರು, ಇಂದು ಸಹ ಎಐಸಿಸಿಯ ಹಂಗಾಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುವ ಮೂಲಕ ದೇಶದ ಬಗ್ಗೆ ವಿಶ್ವವೇ ಪ್ರಶಂಸೆ ವ್ಯಕ್ತಪಡಿಸುವ ರೀತಿಯಲ್ಲಿ ಆಡಳಿತ ನಡೆಸಿದರು. ಇಂದು ಬಿಜೆಪಿ ಮುಖಂಡರೇ ಮೌನಿ ಪ್ರಧಾನಿ ಎಂದು ಟೀಕೆಗೆ ಒಳಗಾಗಿದ್ದ ಮನಮೋಹನ್ ಸಿಂಗ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕೊರೊನಾ ಮಹಾಮಾರಿಯಿಂದ ಜನ ಜೀವನದ ಮೇಲಾಗಿರುವ ದುಷ್ಪರಿಣಾಮ ನಿಭಾಯಿಸುವಲ್ಲಿ ಕೇಂದ್ರದ ನರೇಂದ್ರಮೋದಿ ಮತ್ತು ರಾಜ್ಯದ ಬಿ ಎಸ್ ವೈ ನೇತೃತ್ವದ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿವೆ, ಕೊರೊನ ವಿರುದ್ಧ ಹೋರಾಡುತ್ತಿರುವ ವೈದ್ಯರು, ಅವರ ಸಿಬ್ಬಂದಿಗಳು, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿಯೂ ಸಹ ಸರಕಾರಗಳು ಸೋತಿರುವುದನ್ನು ಜನಸಾಮಾನ್ಯರೆ ಇಂದು ಬೀದಿಯಲ್ಲಿ ನಿಂತು ಹೇಳುವಂತಾಗಿದೆ. ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ಜೇವಾಲ ಅವರು ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರ ಜೊತೆಗೆ, ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳ ಜೊತೆ ಜೂಮ್ ಮೀಟಿಂಗ್ ನಡೆಸಿ, ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅವರ ಸಲಹೆಯಂತೆ ನಾವು ನಮ್ಮ ಕೈಲಾದಷ್ಟು ಜನರಿಗೆ ದಿನಸಿ ಕಿಟ್, ಔಷಧಿಯ ಕಿಟ್ ಹಾಗೂ ಅಗತ್ಯ ಸಲಕರಣೆ ನೀಡುವ ಮೂಲಕ ಜನಸಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುವ ಸಂದರ್ಭದಲ್ಲಿ ತಾವು ಕೂಡ ಸೋಂಕಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ, ಭಂಡ ಧೈರ್ಯ ತೋರದೆ, ಸರಕಾರದ ನಿಯಮಗಳ ಅನ್ವಯ ಎಲ್ಲಾ ರೀತಿ ಮುನ್ನಚ್ಚರಿಕೆ ವಹಿಸಿಕೊಂಡು ಜನರ ಅಗತ್ಯಗಳಿಗೆ ಸ್ಪಂದಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಅಬ್ದುಲ್ ರಹೀಂ ಮತ್ತು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾಯದರ್ಶಿ ವಿ.ಎಸ್.ಸೈಯದ್ ದಾದಾಪೀರ್ ಅವರು ತುಮಕೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ತೆರೆದಿರುವ ಕೋವಿಡ್ ಸಹಾಯವಾಣಿಯಿಂದ ಇದುವರೆಗೆ ಕೈಗೊಂಡಿರುವ ಕಾರ್ಯಕ್ರಮಗಳ ವಿವರವನ್ನು ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಿ, ಸಹಾಯವಾಣಿಗೆ ಸ್ಪಂದಿಸಿ, ಬೆಡ್ ವ್ಯವಸ್ಥೆ ಮಾಡಿದ ಸಿದ್ದಾರ್ಥ ಸಂಸ್ಥೆಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ವಹಿಸಿದ್ದರು. ಇದೇ ವೇಳೆ ಮಾಜಿ ಶಾಸಕರಾದ ಎಸ್.ಷಫಿಅಹಮದ್, ಡಾ.ರಫೀಕ್ ಅಹಮದ್, ಮುಖಂಡರಾದ ಹೆಚ್.ಸಿ.ಹನುಮಂತಯ್ಯ, ಚಂದ್ರಶೇಖರಗೌಡ, ರೇವಣ್ಣಸಿದ್ದಯ್ಯ, ಸಂಜೀವ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್ ಪಾಷ, ಪಾಲಿಕೆ ಸದಸ್ಯರಾದ ಟಿ.ಎಂ.ಮಹೇಶ್, ಓಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕದ ನಾಗಮಣಿ, ಎಸ್‌ಸಿ ಘಟಕದ ಗೂಳರಿವೆ ನಾಗರಾಜು, ವಕ್ತಾರರಾದ ಸುಜಾತ ಹಾಗೂ ಜಿಲ್ಲಾಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.