ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ: ಡೀಸಿ

82

Get real time updates directly on you device, subscribe now.

ತುಮಕೂರು: ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ 18-44 ವರ್ಷದ ಒಳಗಿನ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ ಸಲುವಾಗಿ ಮಂಚೂಣಿ ಕಾರ್ಯಕರ್ತರ ಇಲಾಖಾ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ, ಕೋವಿಡ್‌ ನಿಗ್ರಹಕ್ಕೆ ಮಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರು ನೋಡಲ್‌ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಬೇಕು. ನಿಗದಿ ಪಡಿಸಿದ ದಿನಾಂಕಗಳಂದು ಆಯಾ ಇಲಾಖೆ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕಾರ್ಯಕರ್ತರನ್ನು ಗುರುತಿಸಿ ಅನುಬಂಧ ಪತ್ರದಲ್ಲಿ ಪ್ರಮಾಣೀಕರಿಸಿ ಅವರಿಗೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಕೊರೊನಾ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾದ ಅಂಗವೈಕಲ್ಯ ಹೊಂದಿರುವ ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರಿಗೆ ಮೇ 22 ರಂದು ಕೋವಿಡ್‌ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳಬೇಕು. ಉಳಿದಂತೆ ನಿಗದಿಪಡಿಸಿದ ಮೇ 23, 24, 25 ರಂದು ಲಸಿಕೆ ಲಭ್ಯತೆ ನೋಡಿಕೊಂಡು ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಪ್ರಸ್ತುತ ಕೋವಿಡ್‌- 19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್‌ ಚಾಲಕರು, ವಿದ್ಯುತ್‌ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆಯ ಸಿಬ್ಬಂದಿ, ಬೀದಿ ಬದಿ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಚೇರಿಗಳ ಹೌಸ್‌ ಕೀಪಿಂಗ್‌ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್‌ ಇಂಡಸ್ಟ್ರಿ ಮತ್ತು ಗ್ಯಾಸ್‌ ಸರಬರಾಜು ಮಾಡುವವರು, ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿ, ಆಸ್ಪತ್ರೆಗಳಿಗೆ ಆಕ್ಸಿಜನ್‌, ಔಷಧಿಗಳು ಮತ್ತು ವೈದ್ಯಕೀಯ ಉಪಕರಣ ಸರಬರಾಜು ಮಾಡುವ ಸಿಬ್ಬಂದಿ, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು, ಭಾರತೀಯ ಆಹಾರ ನಿಗಮ ಸಿಬ್ಬಂದಿ,
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೆಲಸಗಾರರಿಗೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಹಾಗೂ ಆದ್ಯತೆ ಗುಂಪುಗಳಾದ ಕಟ್ಟಡ ಕಾರ್ಮಿಕರು, ಟೆಲಿಕಾಮ್‌ ಮತ್ತು ಇಂಟರ್ ನೆಟ್‌ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್‌ ಸಿಬ್ಬಂದಿ, ಪೆಟ್ರೋಲ್‌ ಬಂಕ್‌ ಕೆಲಸಗಾರರು, ಚಿತ್ರೋದ್ಯಮದ ಉದ್ಯಮಿ, ಕಾರ್ಯಕರ್ತರು, ಸಿಬ್ಬಂದಿ, ಅಡ್ವೊಕೇಟ್‌ಗಳು, ಹೋಟೆಲ್‌ ಮತ್ತು ಆತಿಥ್ಯ ಸೇವಾದಾರರು, ಕೆಎಂಎಫ್‌, ರೈಲ್ವೆ, ಗಾರ್ಮೆಂಟ್‌ ಕಾರ್ಖಾನೆ, ಅರಣ್ಯ ಇಲಾಖೆ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ವಧಾರ್‌ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯ ವಾಸಿಗಳು, ಹಿಂದೂಸ್ತಾನ್‌ ಏರೋನಾಟಿಕ್ಟ್ ಲಿಮಿಟೆಡ್‌ ಸಂಸ್ಥೆಯ ಸಿಬ್ಬಂದಿಗೆ ಲಸಿಕಾಕರಣ ಮುಗಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖಾವಾರು ಅಧಿಕಾರಿಗಳಿದ್ದರು.

Get real time updates directly on you device, subscribe now.

Comments are closed.

error: Content is protected !!