ಕೊರೊನಾದಿಂದ ಸತ್ತವರ ಲೆಕ್ಕ ಪರಿಶೋಧನೆ ಆಗಲಿ: ಟಿ.ಬಿ.ಜಯಚಂದ್ರ ಆಗ್ರಹ

ಮತ್ತೊಂದು ಚಾಮರಾಜನಗರ ಆಯ್ತಾ ಶಿರಾ?

71

Get real time updates directly on you device, subscribe now.

ಶಿರಾ: ಆಕ್ಸಿಜನ್‌ ಕೊರತೆಯಿಂದಾಗಿ ಶಿರಾ ಕೂಡಾ ಮತ್ತೊಂದು ಚಾಮರಾಜನಗರವಾಗುತ್ತಿದೆಯೇ ಎನ್ನುವ ಅನುಮಾನವನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪುಣ್ಯ ಸ್ಮರಣೆ ಪ್ರಯುಕ್ತ ಶುಕ್ರವಾರ ತಾಲ್ಲೂಕು ಆಡಳಿತಕ್ಕೆ ಎರಡು ಆ್ಯಂಬುಲೆನ್ಸ್ ಮತ್ತು ಆಕ್ಸಿಜನ್‌ ವ್ಯವಸ್ಥೆಗೆ ಚೆಕ್‌ ಹಸ್ತಾಂತರ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ನಂತರವೂ ಸರ್ಕಾರಗಳು ಎಚ್ಚರಿಕೆ ತಪ್ಪಿದವೇ ಎನ್ನುವ ಅನುಮಾನ ಮೂಡಿಸಿದೆ, ಇದರ ಪರಿಣಾಮ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದೆ.
ಶಿರಾ ತಾಲ್ಲೂಕಿನಲ್ಲಿ ಕಳೆದೆರಡು ತಿಂಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 8,806 ಸೋಂಕಿತರು ಕಂಡು ಬಂದಿದ್ದಾರೆ, ಅದರೊಟ್ಟಿಗೆ ಸರ್ಕಾರಿ ಅಂಕಿ ಅಂಶದ ಪ್ರಕಾರ 51 ಜನರು ಸಾವಿಗೀಡಾಗಿದ್ದಾರೆ, ಆದರೆ ನನ್ನ ಅನುಭವಕ್ಕೆ ಬಂದಂತೆ, ಕಾರ್ಯಕರ್ತರ ಅಭಿಪ್ರಾಯ ಹಾಗೂ ಜನರ ಮಾತಿನಂತೆ ಹೇಳುವುದಾದರೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದೆ, ಸರ್ಕಾರ ಕೋವಿಡ್‌ ಮತ್ತು ನಾನ್‌ ಕೋವಿಡ್‌ ಸಾವು ಎಂದು ಪ್ರತ್ಯೇಕಿಸುತ್ತಿದೆ, ಆದರೆ ಸಾವಿಗೀಡಾದವರೆಲ್ಲರಿಗೂ ಕೊರೊನಾ ಪಾಸಿಟೀವ್‌ ಬಂದಿದೆ ಎನ್ನುವುದನ್ನು ಗಮನಿಸಬೇಕಿದೆ ಎಂದು ನುಡಿದರು.
ನನ್ನ ಅವಧಿಯಲ್ಲಿ ನಿರ್ಮಾಣಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿ ಬದಲಾಗಿದ್ದರೆ, ವಸತಿ ಶಾಲೆಗಳು ಮತ್ತು ಹಾಸ್ಟೆಲ್ ಗಳು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಬದಲಾಯಿಸುವ ಮೂಲಕ ಜನರ ಸೌಲಭ್ಯಕ್ಕೆ ಒದಗಿವೆ. ಆದರೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಿಗದಿಪಡಿಸಿದ ವೈದ್ಯರು ಮತ್ತು ಸಿಬ್ಬಂದಿ ನೇಮಿಸಲಾಗಿಲ್ಲ. ಫಿಸಿಶಿಯನ್‌ ಮತ್ತು ಅನೆಸ್ತಿಟಿಕ್‌ ವೈದ್ಯರ ಕೊರತೆ ಇದೆ. ರಾತ್ರಿ ಹತ್ತು ಗಂಟೆ ನಂತರ ಆಕ್ಸಿಜನ್‌ ಕೇಳಿ ಬರುವ ಪೇಶೆಂಟ್ ಗಳು ಬೆಳಗ್ಗೆ ಆಗುವ ಒಳಗಾಗಿ ಹೆಣವಾಗುವ ಪರಿಸ್ಥಿತಿ ಎದುರಾಗಿದೆ.

ಶಿರಾ ಮತ್ತೊಂದು ಚಾಮರಾಜನಗರ?
ರೋಗಿಯಿಂದ ರೋಗಿಗೆ ಆಕ್ಸಿಜನ್‌ ಅವಶ್ಯಕತೆ ಬದಲಾಗುತ್ತದೆ. 10ಲೀ ಆಕ್ಸಿಜನ್‌ ಬೇಕಾಗಿರುವವರಿಗೆ ನಾಮ್ಕೆವಾಸ್ತೆ ಎನ್ನುವಂತೆ 2ಲೀ ಅಕ್ಸಿಜನ್‌ ನೀಡಲಾಗುತ್ತಿದೆ. ಆಕ್ಸಿಜನ್‌ ಕೊರತೆಯಿಂದ ಸಾವಿಗೀಡಾದ ರೋಗಿಯ ಸಾವನ್ನು ಕೊಲೆ ಎಂದೇ ಪರಿಗಣಿಸಬೇಕಾಗುತ್ತದೆ. ಚಾಮರಾಜನಗರದಲ್ಲೂ ಹೀಗೇ ಆಗಿತ್ತು, ಮಂತ್ರಿಗಳು 3 ಸಾವು ಎಂದಿದ್ದರು, ನ್ಯಾಯಾಧೀಶರ ತನಿಖೆ ನಂತರ ಸತ್ತದ್ದು 28 ಜನ ಎಂಬುದು ಬಯಲಾಯಿತು, ಅದೇ ರೀತಿ ಶಿರಾದಲ್ಲೂ ಆಕ್ಸಿಜನ್‌ ಕೊರತೆಯಿಂದ ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ಶಿರಾಕ್ಕೂ ಚಾಮರಾಜನಗರಕ್ಕೂ ಏನು ವ್ಯತ್ಯಾಸವಿಲ್ಲ, ಶಿರಾ ಮತ್ತೊಂದು ಚಾಮರಾಜನಗರ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೋಗಿಗಳಿಗೆ ಅಗತ್ಯ ಇರುವ ಆಕ್ಸಿಜನ್‌ ಕೊಡುವುದು ಸ್ಥಳೀಯ ಶಾಸಕ, ಸಂಸದ ಮತ್ತು ಮಂತ್ರಿಗಳ ಕೆಲಸ, ಮಂತ್ರಿಗಳೇ ಆಕ್ಸಿಜನ್‌ ಕೊಡಲು ಮುಖ್ಯಮಂತ್ರಿಯನ್ನು ಕೇಳಿ ಎಂದ ಉದಾಹರಣೆ ಇರುವಾಗ, ಇವರಿಂದ ಬದ್ಧತೆಯನ್ನು ನಿರೀಕ್ಷಿಸಲು ಸಾಧ್ಯವೇ? ಚಾಮರಾಜನಗರದಲ್ಲಿ ಸತ್ತವರಿಗೆ ಪರಿಹಾರ ಕೊಡುವಂತೆ ನ್ಯಾಯಾಲಯ ನಿರ್ದೇಶಿಸಿದೆ, ಒಂದು ಸಿಲಿಂಡರ್‌ ಖಾಲಿ ಆದ ನಂತರ ಅದನ್ನು ಬದಲಾಯಿಸುವ ಮಧ್ಯದ ಅವಧಿಯಲ್ಲೂ ರೋಗಿ ಸಾವಿಗೀಡಾಗುವ ಸಂಭವನೀಯತೆ ಇದೆ, ಆದ್ದರಿಂದ ಶಿರಾದಲ್ಲಿ ಸತ್ತ ಕುಟುಂಬಗಳಿಗೂ ಸರ್ಕಾರ ಸರಿಯಾದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಾವಿನ ಲೆಕ್ಕಪರಿಶೋಧನೆ ಆಗಲಿ
ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರವೇ ಹೋದರೂ 51 ಜನ ಕೋವಿಡ್ ನಿಂದ ಮತ್ತು ಕೋವಿಡ್‌ ಜೊತೆಯಲ್ಲಿ ಇತರೆ ಕಾರಣಗಳಿಗೆ ಸತ್ತವರು 80ಕ್ಕೂ ಹೆಚ್ಚಿದ್ದಾರೆ. ಇದರೊಟ್ಟಿಗೆ ಶಿರಾದಿಂದ ಹೊರಗೆ ಚಿಕಿತ್ಸೆಗಾಗಿ ತೆರಳಿ ಸತ್ತವರು, ಚಿಕಿತ್ಸೆ ಸಿಕ್ಕದೆ ಮನೆ ಸಮೀಪವೇ ಸತ್ತವರು ಎಂದೆಲ್ಲಾ ಲೆಕ್ಕ ಪರಿಗಣಿಸಿದರೆ, ಸಾವಿನ ಸಂಖ್ಯೆ 300ಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೊರೊನಾ ಸಾವಿನ ಆಡಿಟ್‌ ಆಗಬೇಕಿದೆ ಎಂದು ಜಯಚಂದ್ರ ಅಭಿಪ್ರಾಯಪಟ್ಟರು.

ಕೊರೊನಾ ವಾರಿಯರ್ಸ್‌ಗೆ ಸಲಾಂ
ಸರ್ಕಾರದ ಅಸಹಾಯಕತೆ, ಔಷಧ, ಮೂಲಭೂತ ಸೌಕರ್ಯಗಳ ಕೊರತೆಗಳ ನಡುವೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ, ನೂರಾರು ಸಾವಿರಾರು ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರು, ಅವರೊಟ್ಟಿಗೆ ಶ್ರಮಿಸುತ್ತಿರುವ ದಾದಿಯರು, ಆಶಾ ಕಾರ್ಯಕರ್ತೆಯರು, ವ್ಯವಸ್ಥೆ ಕಾಪಾಡುತ್ತಿರುವ ಪೊಲೀಸರು ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಸ್‌ಗೆ ತಾವು ಸಲಾಂ ಸಲ್ಲಿಸುವುದಾಗಿ ಟಿಬಿಜೆ ತಿಳಿಸಿದರು.
ಸಂಜಯ ಜಯಚಂದ್ರ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌, ಬರಗೂರು ನಟರಾಜು, ಗುಳಿಗೇನಹಳ್ಳಿ ನಾಗರಾಜು, ಅಜಯ ಕುಮಾರ್‌, ಶೇಷಾನಾಯ್ಕ, ಶಶಿಧರ ಗೌಡ, ಹಾರೋಗೆರೆ ಮಹೇಶ್‌, ದೊಡ್ಡಗೂಳ ರಾಜಣ್ಣ, ಬರಗೂರು ಶ್ರೀನಿವಾಸ್‌ ಮತ್ತಿತರರು ಇದ್ದರು.

ಆಡಳಿತ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕೊರೊನಾ ಕಾರಣ ಆಸ್ಪತ್ರೆಗೆ ದಾಖಲಾಗಿ, ಸಾಯುವ ಮುನ್ನ ತಮ್ಮ ಫೇಸ್ ಬುಕ್ ನಲ್ಲಿ ಇಲ್ಲಿ ಚಿಕಿತ್ಸೆ ಸರಿ ಇಲ್ಲ. ಇಲ್ಲಿ ಎಲ್ಲರನ್ನೂ ಸಾಯಿಸಲಾಗುತ್ತಿದೆ, ರಾತ್ರಿಯಿಂದ ಕೇಳುತ್ತಿದ್ದರೂ ನನ್ನ ತಮ್ಮನಿಗೆ ಆಕ್ಸಿಜನ್‌ ನೀಡಲಾಗುತ್ತಿಲ್ಲ. ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇದನ್ನು ಕಗ್ಗೊಲೆ ಎನ್ನಬಾರದಾ? ಇದಕ್ಕೆ ಜವಾಬ್ದಾರಿ ಯಾರು? ಇದನ್ನು ಮರಣ ಹೇಳಿಕೆ ಎಂದು ಪರಿಗಣಿಸಿ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಚಂದ್ರ ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!