ಕೊರೊನಾ ಕಾಟದ ನಡುವೆಯೂ ರೈತನಿಂದ ಲಂಚ ಪಡೆದ ಭೂಪ

ಎಸಿಬಿ ಖೆಡ್ಡಾಕ್ಕೆ ಬಿದ್ದ ಬೆಸ್ಕಾಂ ಶಾಖಾಧಿಕಾರಿ ರಫಿ

291

Get real time updates directly on you device, subscribe now.


ಕೊರಟಗೆರೆ: ಕೊರೊನಾ ರೋಗದ ಲಾಕ್ ಡೌನ್‌ ಹೊಡೆತಕ್ಕೆ ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯವಿಲ್ಲದೆ ಬೆಳೆ ಸಂಪೂರ್ಣ ಭೂಮಿಯ ಪಾಲಾಗಿವೆ, ಆದರೆ ಬೆಸ್ಕಾಂ ಶಾಖಾಧಿಕಾರಿ ರೈತನ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಟಿಸಿ ರಿಪೇರಿಗಾಗಿ 10 ಸಾವಿರ ಲಂಚ ಕೇಳಿದ್ದಾನೆ, ಅಲ್ಲದೆ ರೈತನಿಂದ ಲಂಚದ ಹಣ ಪಡೆಯುವಾಗ ತುಮಕೂರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಕೊರಟಗೆರೆ ತಾಲೂಕು ತೀತಾ ಬೆಸ್ಕಾಂ ಶಾಖೆಯ ಶಾಖಾಧಿಕಾರಿ ಮಹಮ್ಮದ್‌ ರಫಿ ಎಂಬಾತ ಸೋಮವಾರ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾನೆ.
ಕೆಂಗಯ್ಯನಪಾಳ್ಯದ ರೈತ ರಾಘವೇಂದ್ರ ಎಂಬುವರಿಂದ ಕೊರಟಗೆರೆ ಬೆಸ್ಕಾಂ ಕಚೇರಿ ಆವರಣದಲ್ಲಿ 10 ಸಾವಿರ ಲಂಚ ಪಡೆಯುವಾಗ ತುಮಕೂರು ಭ್ರಷ್ಟಚಾರ ನಿಗ್ರಹ ಇಲಾಖೆಯ ಡಿವೈಎಸ್ಪಿ ಮಲ್ಲಿಕಾರ್ಜುನ್‌ ಚುಕ್ಕಿ ಮತ್ತು ಇನ್ಸ್ಪೆಕ್ಟರ್‌ ವಿಜಯಲಕ್ಷ್ಮೀ ನೇತೃತ್ವದ ಅಧಿಕಾರಿಗಳ ತಂಡ ದಿಡೀರ್‌ ದಾಳಿ ನಡೆಸಿ ಆರೋಪಿಯನ್ನು 10 ಸಾವಿರ ಲಂಚದ ಹಣದ ಸಮೇತ ಬಂಧಿಸಿದ್ದಾರೆ.
ಕೆಂಗಯ್ಯನಪಾಳ್ಯದ ರೈತ ರಾಘವೇಂದ್ರ ಮಾತನಾಡಿ ತೀತಾ ಬೆಸ್ಕಾಂ ಶಾಖೆಯ ಶಾಖಾಧಿಕಾರಿ ಮಹಮ್ಮದ್‌ ರಫಿಗೆ ಕಳೆದ ಆರು ತಿಂಗಳ ಹಿಂದೆ ವಿದ್ಯುತ್‌ ಕಂಬ ಮತ್ತು ಟಿಸಿಗೆ ಈಗಾಗಲೇ 1 ಲಕ್ಷ 50 ಸಾವಿರ ಹಣ ನೀಡಿ ವಿದ್ಯುತ್‌ ಸಂಪರ್ಕ ಪಡೆದಿದ್ದೇನೆ. ಈಗ ನಮ್ಮ ಟಿಸಿ ಸುಟ್ಟು ಹೋಗಿದೆ, ರಿಪೇರಿಗೆ ಮನವಿ ಮಾಡಿದರೆ ಮತ್ತೆ 10 ಸಾವಿರ ಲಂಚದ ಬೇಡಿಕೆ ಇಟ್ಟರು. ಅದಕ್ಕಾಗಿ ಸ್ನೇಹಿತರ ಸಹಾಯದಿಂದ ತುಮಕೂರು ಎಸಿಬಿ ಕಚೇರಿಗೆ ದೂರು ನೀಡಿ ಹಿಡಿಸಿದ್ದೇನೆ ಎಂದು ಹೇಳಿದರು.
ತುಮಕೂರು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್‌ ಚುಕ್ಕಿ ಮಾತನಾಡಿ ಕೆಂಗಯ್ಯನಪಾಳ್ಯದ ರೈತ ರಾಘವೇಂದ್ರ ಲಂಚದ ಬೇಡಿಕೆ ಮಾಡುತ್ತಿರುವ ಅಧಿಕಾರಿಯ ವಿರುದ್ಧ ತುಮಕೂರು ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ರೈತನ ದೂರಿನ ಅನ್ವಯ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕೊರಟಗೆರೆ ಬೆಸ್ಕಾಂ ಕಚೇರಿ ಆವರಣದಲ್ಲಿ ರೈತನಿಂದ 10 ಸಾವಿರ ಲಂಚ ಪಡೆಯುವಾಗ ತೀತಾ ಶಾಖಾಧಿಕಾರಿ ಮಹಮ್ಮದ್‌ ರಫಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಡಿಯೋ ವೈರಲ್
ಇನ್ನು ಅಧಿಕಾರಿ ಮತ್ತು ರೈತ ನಡೆಸಿರುವ ಆಡಿಯೊ ಸಂಭಾಷಣೆ ಕೂಡ ವೈರಲ್‌ ಆಗಿದೆ, ಅಧಿಕಾರಿ ರಫಿ ರೈತ ರಾಘವೇಂದ್ರ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ ಹಣ ಕೊಡಬೇಕು ಎಂಬೆಲ್ಲಾ ಮಾತುಗಳ ಆಡಿಯೋ ಸಂಭಾಷಣೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Get real time updates directly on you device, subscribe now.

Comments are closed.

error: Content is protected !!