ತುಮಕೂರು: ಕೋವಿಡ್ ಸೋಂಕು ಪ್ರಕರಣ ಪ್ರಮಾಣದಲ್ಲಿ ಕೆಂಪು ವಲಯದಲ್ಲಿದ್ದ ಜಿಲ್ಲೆಯು ಕಿತ್ತಲೆ ವಲಯಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಾ ಜಿಲ್ಲೆಗಳ ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ 27,000 ಇದ್ದ ಸೋಂಕು ಪ್ರಕರಣ ಸಂಖ್ಯೆ ಪ್ರಸ್ತುತ 17,000 ಕ್ಕೆ ಇಳಿದಿದೆ ಎಂದರು.
ಜಿಲ್ಲಾಡಳಿತ ಮತ್ತು ಅಧಿಕಾರಿಗಳ ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಕೊರೊನಾ ಅಬ್ಬರ ದಿನೇ ದಿನೆ ತಗ್ಗಿ ಕಿತ್ತಲೆ ವಲಯಕ್ಕೆ ಬಂದಿರುವುದು ಒಳ್ಳೆಯ ಸೂಚನೆ ಎಂದು ತಿಳಿಸಿದರಲ್ಲದೆ ಮೇ 15 ರಿಂದ ವರದಿಯಾಗಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ಅವಲೋಕಿಸಿದಾಗ ಪಾಸಿಟಿವ್ ಪ್ರಕರಣ ಇಳಿಮುಖವಾಗುತ್ತಿವೆ. ಕಳೆದ ಮೇ 15 ರಂದು 42.29 ರಷ್ಟಿದ್ದ ಸೋಂಕಿತರ ಸಂಖ್ಯೆ ಮೇ 23ರಂದು 31.66 ಕ್ಕೆ ಇಳಿದಿದೆ ಎಂದರು.
ಗ್ರಾಮಗಳಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನ ಪ್ರಸರಣ ತಡೆಗೆ ಜಿಲ್ಲಾಡಳಿತದ ಜೊತೆಗೆ ಜನರ ಸಹಕಾರ ಅಗತ್ಯ, ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿರುವುದಿಂದ ಹಳ್ಳಿಗಳ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸುವ ನಿರ್ಧಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೂ 17 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಕೋವಿಡ್ ನಿರ್ವಹಣೆ ವಿಚಾರವಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಜಿಲ್ಲಾಡಳಿತದಿಂದ ತೆಗೆದುಕೊಂಡ ಕಠಿಣ ಕ್ರಮದಿಂದ ಸೋಂಕು ಪ್ರಸರಣ ಕಡಿಮೆಯಾಗಿರುವ ಕಾರಣ ಜಿಲ್ಲೆಯಲ್ಲಿ 82 ಆಮ್ಲಜನಕ ಹಾಸಿಗೆ ಖಾಲಿ ಉಳಿದಿವೆ. ಕ್ವಾರಿ ಮತ್ತು ಕೈಗಾರಿಕೋದ್ಯಮಿಗಳು 256 ಕಾನ್ಸಂಟ್ರೇಟರ್ ಗಳನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ತಾಲ್ಲೂಕು ಮಟ್ಟದಲ್ಲಿಯೇ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಕೊರತೆಯಿಲ್ಲ ಹಾಗೂ ಲಸಿಕಾಕರಣಕ್ಕೂ ಸಮಸ್ಯೆ ಇಲ್ಲ. ನಗರದಲ್ಲಿ ಪ್ರತಿದಿನ ಒಂದು ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ, ಗ್ರಾಮೀಣ ಭಾಗದಲ್ಲಿಯೂ ಲಸಿಕೆ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಕೋವಿಡ್ ಕೇರ್ ಸೆಂಟರ್ ಗಳ ಸೂಕ್ತ ನಿರ್ವಹಣೆಗೆಂದೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ವಚ್ಛತೆ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಕ್ರಮವಹಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 500 ಹಳ್ಳಿಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿವೆ. ಪ್ರಕರಣ ಇಲ್ಲದಿರುವ ಗ್ರಾಮಗಳಲ್ಲಿಯೂ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ. ನಗರದಿಂದ ಗ್ರಾಮಕ್ಕೆ ತೆರಳುವವರ ಮೇಲೆಯೂ ನಿಗಾ ಇಡಲಾಗಿದೆ ಎಂದರು.
ನಿತ್ಯ ಏಳು ಸಾವಿರ ಕೋವಿಡ್ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆರ್‌ಟಿಪಿಸಿಆರ್ 4500 ಹಾಗೂ 2500 ರ್ಯಾಟ್ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ರೋಟರಿ ಸಂಸ್ಥೆಯವರು ಕೋವಿಡ್ ಪರೀಕ್ಷೆ ನಡೆಸಲು ಸಂಚಾರಿ ಬಸ್ ನೀಡಿದ್ದು ಹೆಚ್ಚು ಕೋವಿಡ್ ಪರೀಕ್ಷೆ ಮಾಡಲು ಸಹಕಾರಿಯಾಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲದೆ ಸಿದ್ದಾರ್ಥ, ಶ್ರೀದೇವಿ ಮೆಡಿಕಲ್ ಕಾಲೇಜುಗಲ್ಲಿ ತಲಾ 200 ಪರೀಕ್ಷೆ ಮಾಡಲು ಸೂಚನೆ ನೀಲಾಗಿದೆ ಎಂದರು.
ಈ ತಿಂಗಳಾಂತ್ಯದೊಳಗೆ ಸೋಂಕು ಹರಡುವಿಕೆ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ವಿಶ್ವಾಸವಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 19365 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನ ಪ್ರಮಾಣವನ್ನು ಮತ್ತಷ್ಟು ಇಳಿಸಿ ಸೇಫ್ ಜೋನ್ ಗೆ ತರಲಾಗುವುದೆಂದು ವಿಶ್ವಾಸ ವ್ಯಕ್ತ ಪಡಿಸಿದರು.
ಶಿರಾ ತಾಲೂಕಿನ ಕೆಲ ಗ್ರಾಮಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದರೂ ಸಾರ್ವಜನಿಕರು ಹೊರಗೆ ತಿರುಗುತ್ತಿದ್ದಾರೆ. ಹಾಗಾಗಿ ಹೆಚ್ಚು ಪ್ರಕರಣಗಳಿರುವ ಹಳ್ಳಿಗಳನ್ನು ಈಗಾಗಲೇ ಲಾಕ್ ಮಾಡಲು ಯೋಚಿಸಲಾಗುತ್ತಿದೆ. ಇನ್ನು ಗುಬ್ಬಿ ತಾಲ್ಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದೆ ಇದ್ದರೆ ಲಾಕ್‌ಡೌನ್ ಮಾಡಲು ಚಿಂತನೆ ನಡೆಸಲಾಗಿದೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಆಮ್ಲಜನಕ ಬೆಡ್ ಕೊರತೆ ನೀಗಿಸಲು ತುಮಕೂರು, ಶಿರಾ, ತಿಪಟೂರು, ಮಧುಗಿರಿ, ಪಾವಗಡದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕುಣಿಗಲ್, ಗುಬ್ಬಿ, ಕೊರಟಗೆರೆ ತಾಲ್ಲೂಕಿನಲ್ಲಿಯೂ ದಾನಿಗಳ ನೆರವಿನಿಂದ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭವಾಗಲಿದೆ. ಜಿಲ್ಲೆಯ ಎಲ್ಲಾ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1 ಆಮ್ಲಜನಕ ಬೆಡ್ ವ್ಯವಸ್ಥೆ ಮಾಡಲಾಗುವುದೆಂದರು.
ಜಿಲ್ಲೆಯಾದ್ಯಂತ 16 ಸಾವಿರ ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಆಕ್ಸಿಜನ್ ಸಮಸ್ಯೆಯಾಗುವುದಕ್ಕೆ ಮುಂಚೆಯೇ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ, ಜನರು ಹೆದರುವ ಅಗತ್ಯವಿಲ್ಲ, ಮೂರನೇ ಅಲೆ ನಿಯಂತ್ರಣಕ್ಕೂ ಅಗತ್ಯ ಸಿದ್ಧತೆ ರೂಪಿಸಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡಲು ಅವಕಾಶ ನೀಡಿದರೆ ಇಲ್ಲಿಯೂ ವ್ಯವಸ್ಥೆ ಮಾಡಲಾಗುವುದು, ಎಬಿಆರ್‌ಕೆ ಯಡಿ ದಾಖಲಾದ ಸೋಂಕಿತರು ಯಾರು ಹಣ ನೀಡುವಂತಿಲ್ಲ, ಖಾಸಗಿ ಆಸ್ಪತ್ರೆ ಹಣಕ್ಕೆ ಬೇಡಿಕೆಯಿಟ್ಟರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರು ಮಾತು ಕೇಳುತ್ತಿಲ್ಲ, ನಿಯಮ ಪಾಲಿಸುತ್ತಿಲ್ಲ, ಹಾಗಾಗಿ ಅವಶ್ಯಕ ಇರುವ ಹಳ್ಳಿಗಳಲ್ಲಿ ಲಾಕ್ ಡೌನ್ ಮಾಡುವುದು ಸೂಕ್ತವೆಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪಾಟೀಲ್, ಉಪವಿಭಾಗಾಧಿಕಾರಿ ಅಜಯ್, ಎಸ್ ಪಿ ವಂಶಿಕೃಷ್ಣ ಇದ್ದರು.
ಬ್ಲ್ಯಾಕ್ ಫಂಗಸ್ ಸೋಂಕಿರಿಗೆ ವಿಶೇಷ ವಾರ್ಡ್
ಸರ್ಕಾರದ ಆದೇಶದಂತೆ ಜಿಲ್ಲಾಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈವರೆಗು 21 ಬ್ಲ್ಯಾಕ್ ಫಂಗಸ್ ಪ್ರಕರಣ ವರದಿಯಾಗಿವೆ. ಜಿಲ್ಲಾಸ್ಪತ್ರೆಯಲ್ಲಿ 15 ಬ್ಲ್ಯಾಕ್ ಫಂಗಸ್ ಸೋಂಕಿರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದ್ದು, ನಗರದ ಸಿದ್ಧಾರ್ಥ ಮತ್ತು ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲು ಸೂಚನೆ ನೀಡಲಾಗಿದೆ. ಈ ರೋಗ ಕಾಣಿಸಿಕೊಂಡವರಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬ್ಲ್ಯಾಕ್ ಫಂಗಸ್‌ನಿಂದ ಕುಣಿಗಲ್ ನಲ್ಲಿ ಇಬ್ಬರು, ಪಾವಗಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
Comments are closed.