ಕೊವಿಡ್‌ ತಡೆಗೆ ಜಿಲ್ಲಾಡಳಿತಕ್ಕೆ ಪರಿಕರಗಳ ವಿತರಣೆ

567

Get real time updates directly on you device, subscribe now.

ತುಮಕೂರು: ಕೋವಿಡ್‌- 19 ಸೋಂಕು ತಡೆಗಟ್ಟುವ ಸಲುವಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ನಗರದ ಜೆ.ಸಿ.ರಸ್ತೆಯಲ್ಲಿರುವ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಸುಮಾರು 6 ಲಕ್ಷ ರೂ. 200 ಪಲ್ಸ್ ಆಕ್ಸಿಮೀಟರ್, 25 ಸಾವಿರ 3ಪ್ಲೇ ಸರ್ಜಿಕಲ್‌ ಮಾಸ್ಕ್ ಮತ್ತು 100 ಬಾಟಲ್‌ ಹ್ಯಾಂಡ್‌ ಸ್ಯಾನಿಟೈಸರ್ ಗಳನ್ನು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಸಂಸದ ಜಿ.ಎಸ್‌. ಬಸವರಾಜ್‌, ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕೊರೋನ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್‌ ಮತ್ತು ಪಲ್ಸ್ ಆಕ್ಸಿ ಮೀಟರ್‌ಗಳ ಅವಶ್ಯಕತೆ ಇದೆ ಎಂದು ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಎಸ್‌.ಮಂಜುನಾಥ್‌ ಬಾವಿಕಟ್ಟೆ ಮತ್ತು ಉಪಾಧ್ಯಕ್ಷರಾದ ಹೆಚ್‌.ಆರ್‌.ನಾಗೇಶ್‌ ಅವರಲ್ಲಿ ಕೇಳಿಕೊಂಡಾಗ ಅವರು ಸಹಮತ ವ್ಯಕ್ತಪಡಿಸಿ ಇಂದು ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ಜಿಲ್ಲಾಡಳಿತದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
30 ಲಕ್ಷ ಜನಸಂಖ್ಯೆಯಿರುವ ದೊಡ್ಡ ಜಿಲ್ಲೆಯಾಗಿರುವ ತುಮಕೂರಿಗೆ ಇನ್ನೂ ಹಲವಾರು ಸೌಹಾರ್ದ ಪತ್ತಿನ ಸಹಕಾರಿ ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಸಹಾಯ ಮಾಡುವ ಮೂಲಕ ಕೊರೋನ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದು ತಿಳಿಸಿದರು.
ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳ ಕೆಲವು ಹಳ್ಳಿಗಳನ್ನು ಹಾಟ್ ಸ್ಪಾಟ್‌ ಎಂದು ಘೋಷಿಸಲಾಗಿದ್ದು, ಆಶಾ ಕಾರ್ಯಕರ್ತೆಯರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಪಾಳಯದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಔಷಧಿಗಳನ್ನು ನೀಡುವ ಮೂಲಕ ಕೊರೋನ ನಿಯಂತ್ರಣಕ್ಕೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಸಂಸದ ಜಿ.ಎಸ್‌.ಬಸವರಾಜ್‌ ಮಾತನಾಡಿ, ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುತ್ತಿದ್ದರೆ ಕೊರೊನ ನಿಯಂತ್ರಣ ಸಾಧ್ಯವಿಲ್ಲ ಹಾಗಾಗಿ ನಾಗರಿಕರ ರಕ್ಷಣೆಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನಿಂದಾದ ಸಹಾಯ ಮಾಡಬೇಕು. ಆಗ ಮಾತ್ರವೇ ಎಲ್ಲರ ರಕ್ಷಣೆ ಮತ್ತು ಏಳಿಗೆ ಸಾಧ್ಯ ಎನ್ನುವುದನ್ನು ಮರೆಯಬಾರದು ಎಂದರು.
ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಉಪಾಧ್ಯಕ್ಷರಾದ ಹೆಚ್‌.ಆರ್‌. ನಾಗೇಶ್‌ ಮಾತನಾಡಿ, ಕೊರೋನ ನಿಯಂತ್ರಣಕ್ಕಾಗಿ ನಮ್ಮ ಸಹಕಾರಿಯಿಂದ ಅಧ್ಯಕ್ಷರು ಮತ್ತು ನಿರ್ದೇಶಕರು ತೀರ್ಮಾನ ತೆಗೆದುಕೊಂಡು ಸುಮಾರು 6ಲಕ್ಷಕ್ಕೂ ಹೆಚ್ಚು ಮೊತ್ತದ ಉತ್ತಮ ಗುಣಮಟ್ಟದ 25 ಸಾವಿರ 3ಪ್ಲೇ ಸರ್ಜಿಕಲ್‌ ಮಾಸ್ಕ್, 200 ಪಲ್ಸ್ ಆಕ್ಸಿಮೀಟರ್‌ ಮತ್ತು 100 ಬಾಟಲ್‌ ಹ್ಯಾಂಡ್‌ ಸ್ಯಾನಿಟೈಸರ್ ಗಳನ್ನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಸಂಸದರಾದ ಜಿ.ಎಸ್‌.ಬಸವರಾಜ್‌ ಅವರ ಮೂಲಕ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಅವರಿಗೆ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದರು.
ಕೊರೋನ ನಿಯಂತ್ರಣಕ್ಕೆ ಬರುವವರೆಗೂ ಯಾರೂ ಮನೆಯಿಂದ ಹೊರಗೆ ಬರಬೇಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌, ಮಹಾನಗರಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ, ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷರಾದ ಬಿ.ಎಸ್‌. ಮಂಜುನಾಥ್‌ ಬಾವಿಕಟ್ಟೆ, ಉಪಾಧ್ಯಕ್ಷರಾದ ಹೆಚ್‌.ಆರ್‌.ನಾಗೇಶ್‌, ನಿರ್ದೇಶಕರಾದ ಟಿ.ಎಸ್‌. ನಳಿನಾ, ಟಿ.ಶಾಂತಕುಮಾರಿ, ಹೆಚ್‌.ಎನ್‌.ಶಿವಕುಮಾರ್‌, ಟಿ.ಬಿ. ಮೃತ್ಯುಂಜಯ, ಟಿ.ಎಸ್‌. ಚಿದಾನಂದ್‌, ಓ.ಕೆ.ಅರುಣ್‌ಕುಮಾರ್‌, ಟಿ.ಎಸ್‌. ಲೋಕೇಶ್‌ಕುಮಾರ್‌, ಪ್ರಭಾಕರ್‌, ಟಿ.ಎಸ್‌.ಪೃಥ್ವಿಪ್ರಸಾದ್‌, ಕೆ.ಎಸ್‌. ಸುರೇಶ್‌, ವಿಶೇಷ ಆಹ್ವಾನಿತರಾಗಿ ಡಾ.ಡಿ.ಎಸ್‌.ಸುರೇಶ್‌, ಹೆಚ್‌.ಎಸ್‌.ಸಿದ್ಧರಾಜು, ಟಿ.ಎಸ್‌. ಜಗದೀಶ್‌, ಸಹಕಾರಿಯ ಸಿಇಒ ಕೆ.ಎಸ್‌. ಮಂಜುನಾಥ್‌ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!