ಕೊರೊನಾ ನಿಯಂತ್ರಣ ನಿರ್ಲಕ್ಷ್ಯ- ಪಿಡಿಒಗಳಿಗೆ ಡಾ.ರಂಗನಾಥ್ ಎಚ್ಚರಿಕೆ

ಸರಿಯಾಗಿ ಕೆಲಸ ಮಾಡಿ, ಇಲ್ಲ ಜಾಗ ಖಾಲಿ ಮಾಡಿ

209

Get real time updates directly on you device, subscribe now.

ಕುಣಿಗಲ್: ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಪಿಡಿಒಗಳು ಸಮರ್ಪಕ ಕೆಲಸ ಮಾಡದೆ ಇದ್ದಲ್ಲಿ ತಾಲೂಕಿನಿಂದ ಹೊರಡಿ ಎಂದು ಶಾಸಕ ಡಾ.ರಂಗನಾಥ ಎಚ್ಚರಿಸಿದರು.
ಮಂಗಳವಾರ ತಾಪಂ ಸಭಾಂಗಣದಲ್ಲಿ ಕೊವಿಡ್ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕೊವಿಡ್ ಸೋಂಕು ಹೆಚ್ಚಾಗುತ್ತಿದೆ, ದಿನಕ್ಕೆ ಎರಡುನೂರು ಪ್ರಕರಣ ಪತ್ತೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಇದರ ನಿಯಂತ್ರಣಕ್ಕೆ ಸ್ಥಳದಲ್ಲಿದ್ದು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕಿದೆ. ಸೋಂಕಿತರ ತಪಾಸಣೆ, ಕೊವಿಡ್ ಸೆಂಟರ್ ಗೆ ಕಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿಲ್ಲ, ಹೊರಗಿನಿಂದ ಬಂದವರೆ ಹೆಚ್ಚು ಸೋಂಕು ಹರುಡುತ್ತಿದ್ದು ಇವರ ಬಗ್ಗೆ ನಿಗಾ ವಹಿಸುತ್ತಿಲ್ಲ, ತಾಲೂಕು ಆರೋಗ್ಯಾಧಿಕಾರಿಗಳ ಸಹಕಾರದಲ್ಲಿ ಸೋಂಕು ಹೆಚ್ಚಿರುವೆಡೆ ತಪಾಸಣೆ ಕ್ಯಾಂಪ್ ಹಮ್ಮಿಕೊಂಡು ತಪಾಸಣೆ ಮಾಡಿಸಿ ಸೋಂಕಿತರನ್ನು ಕೊವಿಡ್ ಸೆಂಟರ್ ಗೆ ಕಳಿಸುವ ವ್ಯವಸ್ಥೆ ಮಾಡಬೇಕು, ಸೋಂಕಿತರ ಮನೆಗೆ ತೆರಳಿ ಅವರಲ್ಲಿ ಧೈರ್ಯ ಮೂಡಿಸಿ ಸಮಸ್ಯೆ ಆಲಿಸಬೇಕು, ಅವರಿಗೆ ಪಡಿತರ ತಲುಪಿಸುವ ಕೆಲಸ ಮಾಡಬೇಕು ಎಂದರು.
ಸೋಂಕಿತರ ನಿಖರ ದಾಖಲೆ ನಿರ್ವಹಣೆ ಜೊತೆ ಮೃತಪಟ್ಟವರ ಮಾಹಿತಿ ನಿರ್ವಹಣೆ ಮಾಡಬೇಕು, ನಿಯಮಾವಳಿ ಉಲ್ಲಂಘಿಸುವವರ ಮೇಲೆ ಪ್ರಕರಣ ದಾಖಲು ಮಾಡಿ ಕಠಿಣ ಕ್ರಮಕೈಗೊಂಡು ಲಾಕ್ಡೌನ್ ಅವಧಿ ಮುಗಿಯುವುದರೊಳಗೆ ಸೋಂಕು ಶೂನ್ಯ ಪ್ರಮಾಣಕ್ಕೆ ಇಳಿಸಲು ಶ್ರಮಿಸಬೇಕು, ಎಲ್ಲಾ ಪಿಡಿಒಗಳು ಸಹಕಾರ ನೀಡಿದಲ್ಲಿ ತಾಲೂಕಿನಲ್ಲಿ ಕೊವಿಡ್ ಸೋಂಕಿತರನ್ನು ಶೂನ್ಯಕ್ಕೆ ಇಳಿಸಬಹುದಾಗಿದೆ. ಸಂಜೆ ಐದುಗಂಟೆ ನಂತರ ಪಿಡಿಒಗಳು ಫೋನ್ ಎತ್ತುವುದಿಲ್ಲ, ಹೀಗಾದರೆ ಪಿಡಿಒಗಳು ಕಷ್ಟದ ಸಮಯದಲ್ಲಿ ಜನರ ಸೇವೆ ಹೇಗೆ ಮಾಡುತ್ತಾರೆ, ಹೇಗೆ ವಿಶ್ವಾಸಗಳಿಸುತ್ತಾರೆ, ನಿಮಗೆ ಯಾವುದೊ ಜನ್ಮದ ಪುಣ್ಯ ಕೆಲಸ ಸಿಕ್ಕಿದೆ ಜನಸೇವೆ ಮಾಡಿ ಒಳ್ಳೆಯ ಹೆಸರುಗಳಿಸಿ ಎಂದರು.
ಖಾಸಗಿ ವೈದ್ಯರು ಕೊವಿಡ್ ತಪಾಸಣೆ ಮಾಡಿದಲ್ಲಿ ಕೂಡಲೆ ಮಾಹಿತಿ ನೀಡುವಂತೆ, ಅಕ್ರಮವಾಗಿ ವೈದ್ಯ ವೃತ್ತಿಯಲ್ಲಿ ತೊಡಗಿರುವವರಿಗೆ ನೋಟಿಸ್ ನೀಡಿ ಕ್ರಮ ವಹಿಸುವಂತೆ, ಮೆಡಿಕಲ್ ಶಾಪ್ ನಲ್ಲಿ ವೈದ್ಯರ ಸೂಚನೆ ಇಲ್ಲದೆ ಜ್ವರದ ಮಾತ್ರೆಗಳು ನೀಡದಂತೆ ಕಠಿಣ ಕ್ರಮ ಜರುಗಿಸಬೇಕು, 36 ಗ್ರಾಪಂ ಪೈಕಿ 18 ಗ್ರಾಪಂಗೆ ತಹಶೀಲ್ದಾರ್, 18 ಗ್ರಾಪಂಗೆ ಇಒ ಅವರನ್ನು ಉಸ್ತುವಾರಿ ವಹಿಸಿ ದಿನದ 24 ಗಂಟೆ ನಿಗಾವಹಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಬೇಕು ತುರ್ತಾಗಿ ಸೋಂಕು ಹೆಚ್ಚಿರುವ ಹುಲಿಯೂರು ದುರ್ಗದ ಹಳೇಪೇಟೆ, ಹಂಗರಹಳ್ಳಿ ಮತ್ತು ಜೋಡಿ ಹೊಸಹಳ್ಳಿ ಗ್ರಾಮಗಳಲ್ಲಿ ಸೋಂಕು ತಪಾಸಣೆ ಕ್ಯಾಂಪ್ ಹಮ್ಮಿಕೊಂಡು ಸೋಂಕಿತರ ಪತ್ತೆಗೆ ಕ್ರಮ ವಹಿಸಬೇಕೆಂದರು.
ತಾಪಂ ಆಡಳಿತಾಧಿಕಾರಿ ರಮೇಶ್ ಮಾತನಾಡಿ, ತಹಶೀಲ್ದಾರ್, ಇಒ ಸೋಂಕು ಹೆಚ್ಚಿರುವ ಗ್ರಾಮಗಳಲ್ಲಿ ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ತುಂಬಿ ಕೊವಿಡ್ ಸೆಂಟರ್ ಗೆ ಕಳಿಸಲು ಶ್ರಮ ವಹಿಸಿದ್ದೇವೆ, 36 ಗ್ರಾಪಂಗಳಿಗೆ ಮೂರು ಗ್ರಾಪಂಗೆ ಒಬ್ಬರಂತೆ 12 ನೋಡಲ್ ಅಧಿಕಾರಿಗಳನ್ನ ಮಾಡಲಾಗಿದೆ, ದಿನವಹಿ ಸೋಂಕಿತರು, ತಪಾಸಣೆ ಸೇರಿದಂತೆ ಅಗತ್ಯ ಕ್ರಮಗಳ ಬಗ್ಗೆ ನಿಗಾವಹಿಸಿ ವರದಿ ನೀಡಲು, ಕಾಲಕಾಲಕ್ಕೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಸೂಚನೆ ನೀಡಲಾಗಿದೆ, ಸೋಂಕಿತರ ಮನವೊಲಿಸಿ ಕೊವಿಡ್ ಕೇರ್ ಸೆಂಟರ್ಗೆ ಕಳಿಸಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ನಿಗಾ ವಹಿಸಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷ ನಾಗೇಂದ್ರ, ತಹಶೀಲ್ದಾರ್ ಮಹಾಬಲೇಶ್, ಇಒ ಜೋಸೆಫ್, ಡಿವೈಎಸ್ಪಿ ರಮೇಶ್, ಸಿಪಿಐಗಳಾದ ಡಿ.ಎಲ್.ರಾಜು, ಗುರುಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್, ಆರೋಗ್ಯಾಧಿಕಾರಿ ಜಗದೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!