ಮಧುಗಿರಿ: ತಾಲ್ಲೂಕಿನ ಹಾಟ್ ಸ್ಪಾಟ್ ಗ್ರಾಮಗಳಿಗೆ ಮತ್ತು ಕೋವಿಡ್ ಕೇರ್ ಕೇಂದ್ರಕ್ಕೆ ಜಿಪಂ ಸಿಇಒ ಡಾ.ಕೆ.ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನಲ್ಲಿನ ಹಾಟ್ ಸ್ಪಾಟ್ ಗ್ರಾಮಗಳಾದ ಬಡವನಹಳ್ಳಿ, ಚಂದ್ರಗಿರಿ, ಸಿದ್ದಾಪುರ, ಮಿಡಿಗೇಶಿ, ಐ.ಡಿ.ಹಳ್ಳಿ ಗ್ರಾಮ ಸೇರಿದಂತೆ ಬಡವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿದರು.
ಚಂದ್ರಗಿರಿ ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಸಭೆಯಲ್ಲಿ ಮಾತನಾಡಿ ಕೋವಿಡ್- 19 ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಮಿತಿಯ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವುದರ ಮೂಲಕ ಕೋವಿಡ್- 19 ಸಂಪೂರ್ಣವಾಗಿ ನಿಯಂತ್ರಣ ಮಾಡಲು ಸಹಕರಿಸಬೇಕು ಎಂದರು.
ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಯಮಿತವಾಗಿ ಸೋಪಿನಿಂದ ತಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಸೂಚಿಸಿದರು. ನಂತರ ಮಿಡಿಗೇಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್ ಹಾಟ್ ಸ್ಪಾಟ್ ಗ್ರಾಮಗಳಿಗೆ ದಿನ ನಿತ್ಯ ಭೇಟಿ ನೀಡುತ್ತಿದ್ದು, ಸಂಬಂಧಿಸಿದ ಗ್ರಾಪಂ ಪಿಡಿಓ ಹಾಗೂ ಅಧಿಕಾರಿಗಳಿಗೆ ಗ್ರಾಮದಲ್ಲಿ ಕೋವಿಡ್- 19 ಪ್ರಕರಣ ಹೆಚ್ಚಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗುತ್ತಿದೆ ಹಾಗೂ ಕೋವಿಡ್ ಸೋಂಕಿತ ಗ್ರಾಮಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಎಡಿ ಮಧುಸೂದನ್, ಎಒ ಮಂಜುನಾಥ್, ಬಡವನಹಳ್ಳಿ ಸಿಪಿಐ ಹನುಮಂತರಾಯಪ್ಪ, ಪಿಡಿಒಗಳಾದ ಜುಂಜೇಗೌಡ, ಶಿಲ್ಪ, ಸಂತೋಷ್ ಸಿಂಗ್ ಇತರರು ಇದ್ದರು.
ಹಾಟ್ ಸ್ಪಾಟ್ ಗ್ರಾಮಗಳಿಗೆ ಜಿಪಂ ಸಿಇಓ ಭೇಟಿ
Get real time updates directly on you device, subscribe now.
Comments are closed.