ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ (104) ಹೃದಯಾಘಾತದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನ ಹೊಂದಿದರು.
ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಎಚ್.ಎಸ್.ದೊರೆಸ್ವಾಮಿ ಅವರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರಿಗೆ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ ಸೇರಿದಂತೆ ವಿವಿಧ ವಯೋಸಹಜ ಸಮಸ್ಯೆಗಳು ಇದ್ದವು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ನಿಧನರಾಗಿದ್ದಾರೆ. ಕೆಲದಿನಗಳ ಹಿಂದೆ ಹೃದಯ ಸಮಸ್ಯೆ ಸಂಬಂಧ ಜಯದೇವ ಆಸ್ಪತ್ರೆಗೆ ದಾಖಲಾದ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಜ್ವರ, ನೆಗಡಿ ಹಾಗೂ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಆಗ ಕೊರೋನಾ ಸೋಂಕಿತರಾಗಿರುವುದು ಖಚಿತಪಟ್ಟಿತ್ತು. ದೊರೆಸ್ವಾಮಿ ಅವರು ಮೇ 6 ರಿಂದ 12ರವರೆಗೆ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 7 ದಿನಗಳಲ್ಲಿ ಅವರು ಚೇತರಿಸಿಕೊಂಡು ಜಯನಗರದಲ್ಲಿರುವ ನಿವಾಸಕ್ಕೆ ತೆರಳಿದ್ದರು. ಗುಣಮುಖರಾದ ಒಂದು ದಿನದಲ್ಲಿ, ಅಂದರೆ ಮೇ 14ಕ್ಕೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಏಪ್ರಿಲ್ 10, 1918 ರಂದು ಜನಿಸಿದರು. ಬ್ರಿಟಿಷರ ಕಾಲದಲ್ಲಿ ಕನ್ನಡದ ಜನಪ್ರಿಯ ಪತ್ರಿಕೆ ಎನಿಸಿದ್ದ ಪೌರವಾಣಿ ವರದಿಗಾರರಾಗಿ ಸಾಕಷ್ಟು ಹೆಸರುಗಳಿಸಿದ್ದರು.
ದೊರೆಸ್ವಾಮಿ ಅವರ ಅಣ್ಣ ಸೀತಾರಾಮ್ ಬೆಂಗಳೂರಿನ ಮೇಯರ್ ಆಗಿದ್ದರು. ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಬ್ರಿಟಿಷರ ಆಡಳಿತಕ್ಕೆ ಧಕ್ಕೆ ತರುವ ಉದ್ದೇಶದಿಂದ ದಾಖಲೆಗಳನ್ನು ಸುಟ್ಟುಹಾಕಲೆಂದು ಪೋಸ್ಟ್ಬಾಕ್ಸ್ ಗಳು ಮತ್ತು ರೆಕಾರ್ಡ್ ರೂಮ್ ಗಳಲ್ಲಿ ಟೈಮ್ ಬಾಂಬ್ ಗಳನ್ನು ಸ್ಫೋಟಿಸಿದ್ದರು. ಕಾರ್ಮಿಕ ಚಳುವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.
ದೊರೆಸ್ವಾಮಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಲಲಿತಮ್ಮ ಅವರನ್ನು ಮದುವೆಯಾಗಿದ್ದರು. ಲಲಿತಮ್ಮ ಅವರು 2019ರ ಡಿಸೆಂಬರ್ 17ರಂದು ನಿಧನರಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಇನ್ನಿಲ್ಲ
Get real time updates directly on you device, subscribe now.
Prev Post
Comments are closed.