ದಾನಿಗಳಿಂದ 300 ಆಮ್ಲಜನಕ ಸಾಂದ್ರಕ ಕೊಡುಗೆ:ಸಚಿವ ಜೆ.ಸಿ.ಮಾಧುಸ್ವಾಮಿ

ಕೋವಿಡ್‌ ನಿರ್ವಹಣೆಗೆ ಆಕ್ಸಿಜನ್‌ ಸಾಂದ್ರಕ ಸಹಕಾರಿ

379

Get real time updates directly on you device, subscribe now.

ತುಮಕೂರು: ಕೋವಿಡ್‌-19 ರ ನಿರ್ವಹಣೆ ದೃಷ್ಟಿಯಿಂದ ಕ್ವಾರಿ, ಕ್ರಷರ್‌, ರೈಸ್‌ ಮಿಲ್‌ ಮಾಲೀಕರು ಸುಮಾರು 300 ಆಮ್ಲಜನಕ ಸಾಂದ್ರಕಗಳ ನೆರವು ನೀಡಿದ್ದು, ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಾದಂತಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತುಮಕೂರು ಮರ್ಚೆಂಟ್‌ ಕ್ರೆಡಿಟ್‌ ಕೋ-ಆಪರೇಟಿವ್‌, ಜಿಲ್ಲಾ ಜಲ್ಲಿ ಕ್ರಷರ್‌ ಅಸೋಸಿಯೇಷನ್‌, ಜಿಲ್ಲಾ ರೈಸ್‌ ಮಿಲ್‌ ಅಸೋಸಿಯೇಷನ್‌ ಹಾಗೂ ಮತ್ತಿತರ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳ ವತಿಯಿಂದ ನೀಡಿದ್ದ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿ, ಆಮ್ಲಜನಕ ಸಾಂದ್ರಕಗಳ ನೆರವಿನಿಂದಾಗಿ ಕೋವಿಡ್‌ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ಮಟ್ಟದ ಸಹಕಾರ ದಾನಿಗಳಿಂದ ಬರುತ್ತಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದ ಸಚಿವರು ಜಿಲ್ಲೆಯ ಪರವಾಗಿ, ಸರ್ಕಾರದ ಪರವಾಗಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.
ದುಡಿದ ಹಣದಿಂದ ಸಾರ್ವಜನಿಕ ವಲಯಕ್ಕೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ, ತುರುವೇಕೆರೆ ತಾಲ್ಲೂಕಿನಲ್ಲಿ ಹೈಡಾಲ್‌ ಬರ್ಗ್‌ ಸಿಮೆಂಟ್‌ ಕಾರ್ಖಾನೆಯು 500 ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಉತ್ಪದನಾ ಘಟಕ ಸ್ಥಾಪನೆಗೆ ಮುಂದಾಗಿದೆ, ಅದೇ ರೀತಿ ಗುಬ್ಬಿಯಲ್ಲಿ ರೋಟರಿ ಸಂಸ್ಥೆಯಿಂದ ಆಮ್ಲಜನಕ ಉತ್ಪಾದನಾ ಘಟಕ ಲಭ್ಯವಾಗುತ್ತಿದೆ, ವಿಪ್ರೋದವರು ಒಂದು ಘಟಕ ನೀಡಲಿದ್ದಾರೆ, ಇದಲ್ಲದೆ ಜಪಾನಿನ ಟಿಮ್ಯಾಕ್‌ ಕಂಪೆನಿಯವರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 2 ಕೆಎಲ್‌ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ, ನಿರೀಕ್ಷೆಗೂ ಮೀರಿ ದಾನಿಗಳಿಂದ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಮತ್ತು ದಾನಿಗಳ ನೆರವಿನಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ, ಇದರಿಂದ ಆಮ್ಲಜನಕ ಉತ್ಪಾದನೆಯಲ್ಲಿ ಜಿಲ್ಲಾಡಳಿತ ಸ್ವಯಂ ಶಕ್ತಿ ಹೊಂದಲಿದೆ ಎಂದರು.
ಆಮ್ಲಜನಕದ ಉತ್ಪಾದನೆಯಿಂದಾಗಿ ಕೋವಿಡ್‌ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ, ಕೋವಿಡ್‌ ಮೂರನೇ ಅಲೆ ಬಂದರು ನಿರ್ವಹಣೆ ಮಾಡುವ ಶಕ್ತಿ ಜಿಲ್ಲಾಡಳಿತಕ್ಕೆ ಇದೆ, ಈ ನಿಟ್ಟಿನಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಮ್ಲಜನಕ ಸಾಂದ್ರಕಗಳು ಲಭ್ಯವಿರುವಂತೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಟಿಎಂಸಿಸಿ ಬ್ಯಾಂಕ್ ನ ಜಯಕುಮಾರ್‌ ಅವರೂ ಕೋವಿಡ್‌ ಸಮಸ್ಯೆ ಎದುರಿಸಲು ನೆರವಿನ ಹಸ್ತ ನೀಡಿದ್ದಾರೆ, ಅವರು ತುಮಕೂರಿನ ಸ್ಮಶಾನ ಭೂಮಿಯಲ್ಲಿ ಕೋವಿಡ್‌ ಸೋಂಕಿನಿಂದ ಮೃತ ಹೊಂದಿದವರನ್ನು ಸುಡುವ ಕಾರ್ಯಕ್ಕೆ ಆರು ಒಲೆಗಳ ನೆರವು ನೀಡಿದ್ದಾರೆ. ರುದ್ರ ಭೂಮಿಯ ವ್ಯವಸ್ಥೆಯ ನಿರ್ವಹಣೆಯನ್ನು ಅವರೆ ವಹಿಸಿಕೊಂಡಿದ್ದಾರೆ. ಇದರಿಂದ ಮೃತರಾದ ಸೋಂಕಿತರ ಸಂಸ್ಕಾರಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಸಂಸದ ಜಿ.ಎಸ್‌. ಬಸವರಾಜು ಮಾತನಾಡಿ, ಕೋವಿಡ್‌ ನಿರ್ವಹಣೆ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ನೆರವಾಗಿ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರೆ ರೀತಿಯಲ್ಲಿ ಸಹಕಾರವಾದವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಟಿಎಂಸಿಸಿ ಬ್ಯಾಂಕ್ ನ ಜಯಕುಮಾರ್‌ ಹಾಗೂ ಕ್ವಾರಿ, ಕ್ರಷರ್‌ ಮಾಲೀಕರ ತಂಡ ಸುಮಾರು ಎರಡು ಕೋಟಿ ರೂ. ವೆಚ್ಚದ ಆಮ್ಲಜನಕ ಸಾಂದ್ರಕಗಳನ್ನು ನೀಡಿದೆ, ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲು ಈ ಸಾಂದ್ರಕಗಳು ಸಹಕಾರಿಯಾಗಲಿದೆ ಎಂದರು.
ಆಮ್ಲಜನಕ ಸಾಂದ್ರಕ ಹಾಗೂ ಆಮ್ಲಜನಕ ಘಟಕ ಸ್ಥಾಪನೆಗಳಿಂದಾಗಿ ಸಾಮಾನ್ಯ ಜನರಲ್ಲಿ ಮೂಡಿರುವ ಆತಂಕ ದೂರವಾಗಿದೆ, ಸಹಾಯ ಮಾಡಿರುವ ಎಲ್ಲಾ ಕ್ವಾರಿ, ಕ್ರಷರ್‌, ರೈಸ್‌ ಮಿಲ್‌, ಇತರೆ ಕಂಪನಿ ಮಾಲೀಕರಿಗೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಟಿಎಂಸಿಸಿ ಬ್ಯಾಂಕ್ ನ ಮುಖ್ಯಸ್ಥ ಜಯಕುಮಾರ್‌ ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕರೆಗೆ ಓಗೊಟ್ಟು ಕ್ವಾರಿ, ಕ್ರಷರ್‌, ರೈಸ್‌ ಮಿಲ್‌, ಕೋ.ಆಪರಟಿವ್‌ ಬ್ಯಾಂಕ್‌ ಮಾಲೀಕರು ಸೇರಿ ಸಾರ್ವಜನಿಕರಿಗೆ ಸಹಾಯಕವಾಗಲೆಂದು ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ. ಕೋವಿಡ್‌ ಸಂಕಷ್ಟ ಪರಿಸ್ಥಿತಿಯಲ್ಲಿ ಅಳಿಲು ಸೇವೆ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್‌, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಸಿಇಓ ಡಾ.ಕೆ.ವಿದ್ಯಾಕುಮಾರಿ, ಎಸ್ಪಿ ಡಾ.ಕೆ.ವಂಶಿಕೃಷ್ಣ, ಡಿ ಹೆಚ್ ಓ ನಾಗೇಂದ್ರಪ್ಪ ಸೇರಿದಂತೆ ಕ್ರಷರ್‌, ಕ್ವಾರಿ, ರೈಸ್‌ಮಿಲ್‌, ಇತರೆ ಕೈಗಾರಿಕೆಗಳ ಹಾಗೂ ಸಂಘಸಂಸ್ಥೆಗಳ ಮಾಲೀಕರು ಹಾಜರಿದ್ದರು.

ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಕ್ರಮ
ಕೋವಿಡ್‌ ಸಂದರ್ಭದಲ್ಲಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ನಗರದ ಕುಡಿಯುವ ನೀರು ಪೂರೈಕೆ ಸಂಬಂಧ ಸಂಸದ ಜಿ.ಎಸ್‌.ಬಸವರಾಜ್‌ ಹಾಗೂ ಶಾಸಕ ಜ್ಯೋತಿ ಗಣೇಶ್‌ ಒತ್ತಾಸೆ ಮೇರೆಗೆ ನಗರದ ಕುಡಿಯುವ ನೀರಿಗೆ ಮೂಲಧಾರವಾಗಿರುವ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಕ್ರಮ ವಹಿಸಲಾಗಿದೆ, ಅದರಂತೆಯೇ ಜಿಲ್ಲೆಯ ಕುಡಿಯುವ ನೀರಿನ ಅಭಾವ ಇರುವ ಪ್ರದೇಶದ ಕೆರೆಗಳಿಗೆ ನೀರು ಹರಿಸಲು ಕ್ರಮ ಜರುಗಿಸಲಾಗಿದೆ. ಬುಗುಡನಹಳ್ಳಿ ಕೆರೆಗೆ 0.4 ಟಿಎಂಸಿ ಹಾಗೂ ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತಿಪಟೂರು ತಾಲಕುಗಳ ಕೆರೆಗಳಿಗೆ 0.4ಟಿಎಂಸಿ ಸೇರಿದಂತೆ ಒಟ್ಟು 0.8 ಟಿಎಂಸಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ನಗರದ ನಾಗರಿಕರು ಆತಂಕ ಪಡುವುದು ಬೇಡ.
ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

Get real time updates directly on you device, subscribe now.

Comments are closed.

error: Content is protected !!