ಕೋವಿಡ್‌ ಕೇರ್‌ ಸೆಂಟರ್‌ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

400

Get real time updates directly on you device, subscribe now.

ಕುಣಿಗಲ್‌: ತಾಲೂಕು ಆಡಳಿತ ಸ್ಥಾಪಿಸಿರುವ ಎಡೆಯೂರು ಸಮೀಪದಲ್ಲಿನ ಮಲ್ಲನಾಯ್ಕನಹಳ್ಳಿಯಲ್ಲಿನ ಕೊವಿಡ್‌ ಕೇರ್‌ ಸೆಂಟರ್‌ನ ಅವ್ಯವಸ್ಥೆ ಖಂಡಿಸಿ ಮಹಿಳೆಯರು ಊಟ ಮಾಡದೆ ಪ್ರತಿಭಟಿಸಿರುವ ಘಟನೆ ನಡೆದಿದೆ.
ಮಲ್ಲನಾಯ್ಕನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ನೂರು ಬೆಡ್‌ ವ್ಯವಸ್ಥೆಯ ಕೊವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. ಸದರಿ ಸೆಂಟರ್ ನಲ್ಲಿ ಪುರುಷರು, ಮಹಿಳಾ ಸೋಂಕಿತರಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ವಿಭಾಗದಲ್ಲಿ ನಲವತ್ತಕ್ಕೂ ಹೆಚ್ಚು ಸೋಂಕಿತರಿದ್ದು, ಕೇಂದ್ರದಲ್ಲಿ ಸರಿಯಾದ ಸ್ವಚ್ಛತೆ ನಿರ್ವಹಣೆ ಮಾಡುತ್ತಿಲ್ಲ. ಶೌಚಾಲಯದಲ್ಲಿ ನೀರು ಪೂರೈಕೆ ಆಗುತ್ತಿಲ್ಲ. ಪೂರೈಕೆ ಮಾಡುವ ಆಹಾರದ ಗುಣಮಟ್ಟ ಕಳಪೆಯಾಗಿದೆ. ಮೊಟ್ಟೆ ಕೆಲವರಿಗೆ ಕೊಟ್ಟರೆ ಕೆಲವರಿಗೆ ಕೊಡುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ, ತೀವ್ರ ಅಸ್ವಸ್ಥರಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ, ಆರೋಗ್ಯ ವೃದ್ಧಿಸಿಕೊಳ್ಳಲು ಕೊವಿಡ್‌ ಸೆಂಟರ್ ಗೆ ಬಂದಿದ್ದು ಇಲ್ಲಿನ ವ್ಯವಸ್ಥೆ ನೋಡಿದರೆ ಇರುವ ಆರೋಗ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸೋಂಕಿತರು ಆರೋಪಿಸಿದ್ದಾರೆ.
ಸೋಂಕಿತರ ಸಮಸ್ಯೆ ಆಲಿಸಲು ಯಾರೂ ಬರುವುದಿಲ್ಲ, ಇಲ್ಲಿನ ಅವ್ಯವಸ್ಥೆ ನೋಡಿದರೆ ಸೋಂಕು ನಿಯಂತ್ರಣವಾಗುವುದಕ್ಕಿಂತ ವೃದ್ಧಿಯಾಗುವಂತಾಗುತ್ತದೆ. ಸೆಂಟರ್ ನಲ್ಲಿ ಸರಿಯಾದ ವ್ಯವಸ್ಥೆ ಮಾಡಿ ಇಲ್ಲವಾದಲ್ಲಿ ನಮಗೆ ಮನೆ ಕಳಿಸಿಬಿಡಿ ಎಂದು ಕೊವಿಡ್‌ ಕೇರ್‌ ಸೆಂಟರ್ ನಲ್ಲಿ ಆರೈಕೆಯಲ್ಲಿರುವ ಮಹಿಳೆಯರು ಒತ್ತಾಯಿಸಿದ್ದು, ಅವ್ಯವಸ್ಥೆ ಹಾಗೂ ಅಸಮರ್ಪಕ ಊಟದ ವ್ಯವಸ್ಥೆ ಖಂಡಿಸಿ ಬುಧವಾರ ಮಧ್ಯಾಹ್ನ ಊಟ ಮಾಡಲು ನಿರಾಕರಿಸಿ ಸಮರ್ಪಕ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!