ಸಿಎಂ ಯಡಿಯೂರಪ್ಪ ರಾಜಿನಾಮೆಗೆ ಮಾಜಿ ಡಿಸಿಎಂ ಆಗ್ರಹ

ಕೊರೊನಾ ತಡೆಯುವಲ್ಲಿ ರಾಜ್ಯ ನಿರ್ಲಕ್ಷ: ಪರಂ

533

Get real time updates directly on you device, subscribe now.

ಕೊರಟಗೆರೆ: ಬಡ ಜನರಿಗೆ ಕೊರೊನಾ ಲಸಿಕೆ ಪೂರೈಕೆ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ, ಕೊರೊನಾ ರೋಗದ ಎರಡನೇ ಅಲೆ ತಡೆಯುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ ವಹಿಸಿದೆ, ಸಿಎಂ ಯಡಿಯೂರಪ್ಪ ತಕ್ಷಣ ರಾಜಿನಾಮೆ ನೀಡಬೇಕಾದ ಅನಿವಾರ್ಯತೆ ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯಿಂದ ಆಮ್ಲಜನಕ ಸಹಿತ ಎರಡು ತುರ್ತುವಾಹನ, 10 ಜನ ವೈದ್ಯರ ತಂಡ, ಫ್ರೆಂಡ್ಸ್ ಗ್ರೂಪ್‌ಗೆ ವೈದ್ಯಕೀಯ ಪರಿಕರ, ಬಡ ಜನತೆಗೆ ಆಹಾರದ ಕಿಟ್‌, ಉಚಿತ ದಾಸೋಹ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಜೊತೆ ಸಚಿವರ ಹೊಂದಾಣಿಕೆ ಇಲ್ಲ, ಶಾಸಕರ ಸಮಸ್ಯೆಗೆ ಸಚಿವರಿಂದ ಸ್ಪಂದನೆಯೇ ಸಿಗುತ್ತಿಲ್ಲ, ಕೇಂದ್ರದಿಂದ ಕೊರೊನಾ ಲಸಿಕೆಯನ್ನು ಕರ್ನಾಟಕ ರಾಜ್ಯಕ್ಕೆ ಹೇಗೆ ತರ್ತಾರೆ, ಬಡಜನರ ಬದುಕಿನ ಜೊತೆ ಪ್ರತಿನಿತ್ಯ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ವಿಜ್ಞಾನಿಗಳ ಸಲಹೆಯಂತೆ ಮಕ್ಕಳ ಮೇಲೆ ಪರಿಣಾಮ ಬಿರುವಂತಹ ಕೊರೊನಾ 3ನೇ ಅಲೆ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಸಿದ್ಧತೆ ನಡೆಸಬೇಕಿದೆ ಎಂದು ಆಗ್ರಹ ಮಾಡಿದರು.
ನನ್ನ ಕ್ಷೇತ್ರದ ಬಡ ಜನರ ಆರೋಗ್ಯ ರಕ್ಷಣೆ ನನ್ನಜವಾಬ್ದಾರಿ, ಈಗಾಗಲೇ ಕೊರಟಗೆರೆ ಪಟ್ಟಣ ಮತ್ತು ತೋವಿನಕೆರೆ ಭಾಗದಲ್ಲಿ ಕೊರೊನಾ ಕೇರ್ ಸೆಂಟರ್‌ ಪ್ರಾರಂಭವಾಗಿವೆ. ತುರ್ತು ವಾಹನ ಮತ್ತು ಆಮ್ಲಜನಕ ಸಮಸ್ಯೆ ನಿವಾರಣೆ ಆಗಿದೆ, ನಗರ ಮತ್ತು ಪಟ್ಟಣದ ಜನರ ಆಗಮನದಿಂದ ಗ್ರಾಮೀಣದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ, ವೈದ್ಯಕೀಯ ತಂಡ ಗ್ರಾಮೀಣ ಜನತೆಯ ಮೇಲೆ ಹೆಚ್ಚಿನ ನಿಗಾ ವಹಿಸಬೇಕಿದೆ, ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯು ಕೊರಟಗೆರೆ ಕ್ಷೇತ್ರದ ಬಡಜನರಿಗೆ ದಿನದ 24 ಗಂಟೆ ಮೀಸಲಾಗಿದೆ ಎಂದು ಹೇಳಿದರು.
ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯಿಂದ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 10 ವೈದ್ಯರ ತಂಡದ ಜೊತೆ ಎರಡು ಆಮ್ಲಜನಕ ಸಹಿತ ತುರ್ತು ವಾಹನ, ಡಾ.ಜಿ.ಪರಮೇಶ್ವರ್‌ ಅಭಿಮಾನಿ ಬಳಗದಿಂದ ಬಡಜನರಿಗೆ ಉಚಿತ ದಾಸೋಹ, ಫ್ರೆಂಡ್ಸ್ ಗ್ರೂಪ್‌ ಮತ್ತು ಕೈಲಾಸ ರಥದ ಸದಸ್ಯರಿಗೆ ಪಿಪಿಇ ಕಿಟ್‌, ಸ್ಯಾನಿಟೈಸರ್‌, ಮಾಸ್ಕ್, ಪಟ್ಟಣದ 13ನೇ ವಾರ್ಡ್ ನ ಬಡ ಜನತೆಗೆ ಶಾಸಕ ಪರಮೇಶ್ವರ್‌ ಮತ್ತು ಪಪಂ ಸದಸ್ಯ ಓಬಳರಾಜು ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಗೋವಿಂದರಾಜು, ತಾಪಂ ಆಡಳಿತಾಧಿಕಾರಿ ಅಶೋಕ್‌, ಇಓ ಶಿವಪ್ರಕಾಶ್‌, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್‌, ಮುಖ್ಯ ವೈದ್ಯಾಧಿಕಾರಿ ಡಾ.ಪ್ರಕಾಶ್‌, ಪಪಂ ಸದಸ್ಯರಾದ ಓಬಳರಾಜು, ನಾಗರಾಜು, ಬ್ಲಾಕ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಕೊರಟಗೆರೆ ಅಧ್ಯಕ್ಷ ಅರಕೆರೆ ಶಂಕರ್‌, ಅಶ್ವತ್ಥನಾರಾಯಣ್‌, ಯುವಾಧ್ಯಕ್ಷ ವಿನಯ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!