ಬಡ ಕುಟುಂಬಗಳಿಗೆ ಆಹಾರ ಕಿಟ್‌ ನೀಡಲು ಓಕೆ ಎಂದ ಪಾಲಿಕೆ ಸದಸ್ಯರು

ಅಭಿವೃದ್ಧಿ ಕಾರ್ಯ ಆಗ್ಬೇಕು, ಕೋವಿಡ್‌ ಓಡಿಸ್ಬೇಕು

120

Get real time updates directly on you device, subscribe now.

ತುಮಕೂರು: ಕೋವಿಡ್‌ ನಿಯಂತ್ರಣದ ಜವಾಬ್ದಾರಿಯ ಜೊತೆಗೆ ನಗರದ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಬೇಕು, ಪಾಲಿಕೆಯ ಎಲ್ಲಾ ವಾರ್ಡ್ ಗಳಿಗೂ ಸಮಾನವಾಗಿ ಅಭಿವೃದ್ಧಿ ಅನುದಾನ ನೀಡಬೇಕು, ಕೋವಿಡ್‌ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಿ ಆಹಾರ ಕಿಟ್‌ ವಿತರಣೆ ಮಾಡಬೇಕು ಎಂದು ಪಾಲಿಕೆ ಸದಸ್ಯರು ಒಮ್ಮತದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊರೊನಾ ಆತಂಕದ ನಡುವೆಯೂ ಸಾಮಾಜಿಕ ಅಂತರ ಕಾಪಾಡುಕೊಳ್ಳುವಿಕೆಯ ಹಿತದೃಷ್ಟಿಯಿಂದ ಗೂಗಲ್‌ ಮೀಟ್‌ ಆ್ಯಪ್‌ ಮೂಲಕ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪಾಲಿಕೆ ಸದಸ್ಯರು ಮೊದಲಾದ್ಯತೆ ಕೋವಿಡ್‌ ನಿರ್ಮೂಲನೆಗೆ ಹೆಚ್ಚು ಒತ್ತು ಕೊಡಬೇಕು. ಜೊತೆಯಲ್ಲಿಯೇ ಅಭಿವೃದ್ಧಿಯ ಕಡೆಗೂ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ನಗರದಲ್ಲಿ ಕೋವಿಡ್‌ ನಿರ್ವಹಣೆ ಮತ್ತಷ್ಟು ಸಮರ್ಪಕವಾಗಿ ನಡೆಯಬೇಕು, ಕನಿಷ್ಠ ಮೂರು ವಾರ್ಡ್‌ಗಳಿಗೆ ಒಂದರಂತೆ ಕೊರೊನಾ ಆರೈಕೆ ಕೇಂದ್ರ ಆರಂಭಿಸಿ ಸೋಂಕಿತರಿಗೆ ಆರೈಕೆ ಕೇಂದ್ರಲ್ಲಿಯೇ ಚಿಕಿತ್ಸೆ ನೀಡಬೇಕು. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಯೂ ಸಮರ್ಪಕವಾಗಿ ನಡೆಯಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚಿಸಿದರು.
ಸಭೆಯಲ್ಲಿ 17ನೇ ವಾರ್ಡ್ ನ ಸದಸ್ಯ ಮಂಜುನಾಥ್‌ ಮಾತನಾಡಿ, ನಗರದ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಟ್‌ ಟೆಸ್ಟ್ ಮಾಡಲು ಕ್ರಮವಹಿಸಬೇಕು ಎಂದಾಗ, ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಟ್ ಟೆಸ್ಟ್ ನಡೆಸಲು ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾಲ್ಕನೇ ವಾರ್ಡ್‌ನ ಸದಸ್ಯ ನರಸಿಂಹರಾಜು ಮಾತನಾಡಿ, ನನ್ನ ವಾರ್ಡ್‌ನಲ್ಲಿ 24 ಮಣ್ಣಿನ ರಸ್ತೆಗಳವೆ. ಉಳಿದಂತೆ ಇರುವ 21 ಡಾಂಬರ್‌ ಹಾಗೂ 3 ಸಿಮೆಂಟ್‌ ರಸ್ತೆಗಳು ಶಿಥಿಲಗೊಂಡಿವೆ, ಚರಂಡಿಗಳು ಸಮರ್ಪಕವಾಗಿಲ್ಲ, ಯುಜಿಡಿ ಕಥೆ ಕೇಳುವಂತಿಲ್ಲ, ಕೆಲವು ವಾರ್ಡ್‌ ಗಳಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೆ ನನ್ನ ವಾರ್ಡ್‌ ಅಭಿವೃದ್ಧಿ ಕಾರ್ಯಗಳಿಂದ ದೂರ ಉಳಿದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ ಪ್ರತಿಕ್ರಿಯಿಸಿ, ಉಳಿಕೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.
ಕೋವಿಡ್‌ ಹಿನ್ನೆಲೆಯಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಕಂಡುಬರುತ್ತಿದೆ. ಈಗಾಗಲೇ ಹಲವು ಕಡೆ ಬಗ್ಗಡದ ನೀರು ಬರುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.
ಈ ವೇಳೆ ಮೇಯರ್‌ ಬಿ.ಜಿ.ಕೃಷ್ಣಪ್ಪ ಮಾತನಾಡಿ, ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಜಲಸಂಗ್ರಹಾಗಾರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಸಾರ್ವಜನಿಕರು ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು. ಈಗಾಗಲೇ ಗೊರೂರು ಡ್ಯಾಂನಿಂದ ಜಿಲ್ಲೆಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ನೀರು ನಗರದ ಬುಗುಡನಹಳ್ಳಿ ಜಲಸಂಗ್ರಹಗಾರಕ್ಕೆ ಬಂದು ಸೇರಲಿದೆ ಎಂದು ತಿಳಿಸಿದರು.
ಕೋವಿಡ್‌-19 ಸಂಕಷ್ಟದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾದರಿಯಲ್ಲಿ ನಗರದಲ್ಲಿನ ಬಡವರನ್ನು ಗುರುತಿಸಿ ಆಹಾರ ಕಿಟ್‌ ವಿತರಣೆ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ ಏಳನೇ ವಾರ್ಡ್ ನ ಸದಸ್ಯ ಕುಮಾರ್‌ ಸ್ಮಾರ್ಟ್ ಸಿಟಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಸ್ಮಾರ್ಟ್‌ಸಿಟಿ ವ್ಯವಸ್ಥೆ ಅವ್ಯವಸ್ಥೆಯಾಗಿದೆ, ಸ್ಮಾರ್ಟ್‌ ಸಿಟಿ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆ ಅಭಿಪ್ರಾಯವಿಲ್ಲ. ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ, ಹೆಸರಿಗೆ ಮಾತ್ರ ಅಭಿವೃದ್ಧಿ ಹಣೆ ಪಟ್ಟಿ ಕೊಂಡಿದೆ. ಕಾಮಗಾರಿ ಸಮರ್ಪಕವಾಗಿ ನಡೆಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ನಂತರ 22ನೇ ವಾರ್ಡ್‌ನ ಸದಸ್ಯ ಶ್ರೀನಿವಾಸ ಮೂರ್ತಿ ಮಾತನಾಡಿ, ಎಸ್ ಸಿ ಪಿ, ಟಿ ಎಸ್ ಪಿ ಯೋಜನೆ ಅನುದಾನ ಮೀಸಲಾಗಿರುವ ವರ್ಗಕ್ಕೆ ಬಳಕೆಯಾಗುತ್ತಿಲ್ಲ, ನನ್ನ ವಾರ್ಡ್‌ ನಲ್ಲಿ 90 ರಷ್ಟು ಎಸ್‌ಸಿಪಿ, ಟಿಎಸ್‌ಪಿ ಅನುದಾನ ಸದ್ಬಳಕೆ ಮಾಡಿಕೊಳ್ಳುವ ಫಲಾನುಭವಿಗಳಿವೆ, ಆದರೆ ಇಲ್ಲಿ ಕಾಮಗಾರಿ ಮಾಡದೇ ಮತ್ತೆಲ್ಲೋ ಮಾಡುವುದು ಇನ್ನೆಷ್ಟು ಸರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ನಿರ್ವಹಣೆ ಮಾಡುವುದಾಗಿ ಮೇಯರ್‌ ತಿಳಿಸಿದರು.
ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಮಾತನಾಡಿ, ಇಂದಿರಾ ಕ್ಯಾಂಟೀನ್‌ ನಲ್ಲಿ ಮಧ್ಯಾಹ್ನದ ವೇಳೆ ಸಾರ್ವಜನಿಕರ ಮನವಿ ಮೇರೆಗೆ ಅನ್ನ ಸಾಂಬಾರ್‌ ಮತ್ತು ಮುದ್ದೆ ಊಟ ವಿತರಣೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ ಮನೆಗಳನ್ನು ಕಟ್ಟಿಸಿಕೊಡುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಘೋಷಣೆಯಾದ ನಗರದ ಕೊಳಚೆ ಪ್ರದೇಶಗಳಲ್ಲಿ ಇಂತಿಷ್ಟು ವರ್ಷ ವಾಸವಿರುವವರಿಗೆ ಹಕ್ಕು ಪತ್ರ ನೀಡಲು ಸರ್ಕಾರದ ಆದೇಶಿಸಿರುವುದರಿಂದ ನಗರದ 35 ವಾರ್ಡ್‌ನ ಕೊಳಚೆ ಪ್ರದೇಶದ ನಿವಾಸಿಗಳನ್ನು ಗುರುತಿಸಿ ಹಕ್ಕುಪತ್ರ ನೀಡುವ ಕುರಿತು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.
ಈ ವೇಳೆ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಘೋಷಣೆ ಆಗಿರುವ ಕೊಳಚೆ ಪ್ರದೇಶದ ನಿವಾಸಿಗಳಲ್ಲದೆ ಮನೆಗಳಿಲ್ಲದೆ ಇತರೆ ನಿವಾಸಿಗಳೂ ಇದ್ದಾರೆ. ಅವರನ್ನೂ ಗುರುತಿಸಿ ಹಕ್ಕುಪತ್ರ ನೀಡುವ ವ್ಯವಸ್ಥೆಯಾಗಬೇಕು ಎಂದು ಸದಸ್ಯರು ಮನವಿ ಮಾಡಿದರು.
ಸಭೆ ಆರಂಭಕ್ಕೂ ಮುನ್ನ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಏಳನೇ ವಾರ್ಡ್‌ನ ಕಾಂಗ್ರೆಸ್‌ ಪಕ್ಷದ ಕುಮಾರ್‌ ಜೆ. ಆಯ್ಕೆಯಾದರು.
ಈ ವೇಳೆ ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ವಿರೋಧ ಪಕ್ಷದ ನಾಯಕರು ಟೀಕೆಗೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆಗೆ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆಯಿತ್ತರು.
ಇದೇ ವೇಳೆ ಕೊರೊನಾದಿಂದ ಮೃತರಾದ ಪಾಲಿಕೆ ಪೌರಕಾರ್ಮಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!