ಸಿಎಂ ಬದಲಾವಣೆ ಮಾತೇ ಇಲ್ಲ: ಮಾಧುಸ್ವಾಮಿ

138

Get real time updates directly on you device, subscribe now.

ಗುಬ್ಬಿ:ಯಾರೋ ಎಲ್ಲಿಯೋ ಕುಳಿತು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದರೆ ಗಂಭೀರವಾಗಿ ಪರಿಗಣಿಸಲು ಸಾಧ್ಯವಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.
ತಾಲೂಕಿನ ನಿಟ್ಟೂರಿನ ಶ್ರೀ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಉದ್ಘಾಟಿಸಿ ಮಾತನಾಡಿ, ಬದಲಾವಣೆ ಮಾಡುವ ಯಾವುದೇ ವಿಚಾರವಿಲ್ಲ, ನಮ್ಮ ಸಿಎಂ ಯಡಿಯೂರಪ್ಪ ಅವರೆ, ಇದರಲ್ಲಿ ಬೇರೆ ಮಾತಿಲ್ಲ ಎಂದರು.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತಿದ್ದು, ಕೆಂಪು ವಲಯದಿಂದ ಹಳದಿ ವಲಯಕ್ಕೆ ಜಿಲ್ಲೆ ಬಂದಿದ್ದು, ಜಿಲ್ಲೆಯಲ್ಲಿ ಈಗಾಗಲೇ 19 ಕೋವಿಡ್‌ ಸೆಂಟರ್‌ ಮಾಡಿದ್ದು ಕೊರೊನಾ ಪಾಸಿಟಿವ್‌ ಬಂದ ಕೂಡಲೆ ಕೋವಿಡ್‌ ಕೇರ್‌ ಸೆಂಟರ್ ಗೆ ದಾಖಲು ಮಾಡುತ್ತಿರುವುದರಿಂದ ಸಮುದಾಯಕ್ಕೆ ಪಾಸಿಟಿವ್‌ ಹರಡುತ್ತಿರುವುದು ಕಡಿಮೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಅಧಿಕಾರಿಗಳು ಲಾಕ್ ಡೌನ್ ನ್ನು ಬಹಳ ಶಿಸ್ತಿನಿಂದ ಮಾಡುತ್ತಿರುವುದರಿಂದ ಬಹಳಷ್ಟು ಹತೋಟಿಗೆ ಬರುತ್ತಿದ್ದು, ಇನ್ನೂ 15 ದಿನಗಳಲ್ಲಿ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿದ್ದು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ಮನೆಗೆ ಬೆಂಕಿ ಬಿದ್ದಾಗ ಯಾರಾದರೂ ಮದುವೆ ಮಾಡುತ್ತಾರ, ಮುಖ್ಯಮಂತ್ರಿ ವಿಚಾರ ಬದಲಾವಣೆಯ ಯಾವ ಮಾತು ಇಲ್ಲ, ಇದೆಲ್ಲ ಮಾಧ್ಯಮದ ಸೃಷ್ಟಿ ಅಷ್ಟೇ, ಕೊರೊನ ಸಂಕಷ್ಟದಲ್ಲಿರುವಾಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹತೋಟಿಗೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ, ಆರೋಗ್ಯದ ವಿಚಾರದಲ್ಲಿ ಹಲವು ಯೋಜನೆ ಮಾಡಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದೆ, ಇಂತಹ ಸಮಯದಲ್ಲಿ ಜನರ ಆರೋಗ್ಯ ಮುಖ್ಯವೆ ಹೊರತು ಬೇರೆ ಯಾವುದು ಅಲ್ಲ, ಜಿಲ್ಲೆಯಲ್ಲಿ ಸಾಕಷ್ಟು ಕೋವಿಡ್‌ ಸೆಂಟರ್ ಗಳು ಆಸ್ಪತ್ರೆಗಳು ಸೂಕ್ತ ಚಿಕಿತ್ಸೆ ನೀಡುತ್ತಿರುವವುದರಿಂದ ಕೊರೊನಾ ಸಮಸ್ಯೆ ಸುಧಾರಣೆಯಾಗುತ್ತಿದೆ, ಆದರೂ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು.
ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮಾತನಾಡಿ ತಾಲೂಕಿನ ಎಲ್ಲಾ ಭಾಗದಲ್ಲಿಯು ಟಾಸ್ಕ್ ಫೋರ್ಸ್‌ ರಚನೆ ಮಾಡಿ ಆ ಮೂಲಕ ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ ಸೋಂಕು ತಡೆಗಟ್ಟಲು ಪ್ರಯತ್ನ ಮಾಡಲಾಗುತ್ತಿದೆ ಮತ್ತು ಕೋವಿಡ್‌ ಸೆಂಟರ್‌ ಗುಬ್ಬಿ ತಾಲೂಕಿನಲ್ಲಿ ಸದ್ಯಕ್ಕೆ 4 ಇರುವುದರಿಂದ ಬೆಡ್‌ ಸಮಸ್ಯೆ, ಚಿಕಿತ್ಸೆಯ ಸಮಸ್ಯೆ ಕಂಡು ಬರುತ್ತಿಲ್ಲ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ ಡಾ.ನವ್ಯಬಾಬು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್‌.ಸಿ.ಪ್ರಕಾಶ್‌, ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಮುಖಂಡರಾದ ಜಿ.ಎನ್‌.ಬೆಟ್ಟಸ್ವಾಮಿ, ಚಂದ್ರಶೇಖರ್‌ ಬಾಬು, ಎಸ್‌.ಡಿ.ದಿಲೀಪ್‌ ಕುಮಾರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ, ಡಿಎಚ್‌ಓ ನಾಗೇಂದ್ರಪ್ಪ, ತಹಶೀಲ್ದಾರ್‌ ಡಾ.ಪ್ರದೀಪ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ, ಡಿವೈಎಸ್‌ಪಿ ಕುಮಾರಪ್ಪ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!