ಕೊರೊನಾಗೆ ವೈದ್ಯ ಬಲಿ

4,895

Get real time updates directly on you device, subscribe now.

ತುಮಕೂರು: ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಚಿಕಿತ್ಸೆ ಫಲಿಸದೆ ಮಹಾಮಾರಿಗೆ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲ್ಲೂಕಿನ ಊರ್ಡಿಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎನ್‌.ಮಂಜುನಾಥ್‌ (48) ಸೋಂಕಿನಿಂದ ಸಾವನ್ನಪ್ಪಿರುವ ದುರ್ದೈವಿ.
ಕಳೆದ 12 ದಿನಗಳ ಹಿಂದೆ ವೈದ್ಯ ಡಾ.ಮಂಜುನಾಥ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು, ಅಂದು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಡಾ.ಮಂಜುನಾಥ್‌ ಅವರು ಕಳೆದ 15 ವರ್ಷದ ಹಿಂದೆ ಸರ್ಕಾರಿ ವೈದ್ಯರಾಗಿ ನೇಮಕಗೊಂಡಿದ್ದು, ಕಳೆದ 5 ವರ್ಷಗಳಿಂದ ಊರ್ಡಿಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕೊರೊನಾದಿಂದ ಸಾವನ್ನಪ್ಪಿರುವ ವೈದ್ಯ ಡಾ.ಮಂಜುನಾಥ್‌ ಅವರ ನಿಧನಕ್ಕೆ ಸರ್ಕಾರಿ ವೈದ್ಯರ ಸಂಘದ ಪದಾಧಿಕಾರಿಗಳು, ಡಿಹೆಚ್‌ಓ, ಜಿಲ್ಲಾ ಶಸ್ತ್ರಚಿಕಿತ್ಸಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ಡಿಹೆಚ್‌ಓ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು, ಆರ್‌ಎಂಓ ಡಾ.ವೀಣಾ, ಜಿಲ್ಲಾ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ರಾಜಶೇಖರ್‌ ಭೇಟಿ ನೀಡಿ ವೈದ್ಯರ ನಿಧನಕ್ಕೆ ಕಂಬನಿ ಮಿಡಿದರು.
ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಸಮೀಪದ ಹೊಸಹಳ್ಳಿಯಲ್ಲಿ ಕೋವಿಡ್‌ ನಿಯಮಾವಳಿ ಪ್ರಕಾರ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!