ಸಾಲ ವಸೂಲಿಗೆ ಬಲವಂತ ಮಾಡಿದ್ರೆ ಕಂಬಕ್ಕೆ ಕಟ್ತೇವೆ: ಆನಂದ್‌ ಪಟೇಲ್

1,130

Get real time updates directly on you device, subscribe now.

ಕುಣಿಗಲ್‌: ಗ್ರಾಮಾಂತರ ಪ್ರದೇಶದಲ್ಲಿ ಮೈಕ್ರೋಫೈನಾನ್ಸ್ ಸೇರಿದಂತೆ ಇತರೆ ಬ್ಯಾಂಕಿಂಗ್‌ ಸಂಸ್ಥೆಗಳು ರೈತರಿಂದ ಬಲವಂತ ಸಾಲ ವಸೂಲು ಮಾಡುವುದ ನಿಲ್ಲಿಸಲಿ, ಇಲ್ಲವಾದಲ್ಲಿ ಸಾಲ ವಸೂಲಿ ಮಾಡಲು ಬಂದವರ ಗ್ರಾಮಗಳಲ್ಲೆ ಕಂಬಕ್ಕೆ ಕಟ್ಟುವ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಎಚ್ಚರಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾತನಾಡಿದ ಅವರು, ಕೊವಿಡ್‌ ಮೊದಲ ಅಲೆಯಿಂದಲೆ ರೈತರು ಇನ್ನೂ ಚೇತರಿಸಿಕೊಂಡಿಲ್ಲ, ಆದರೂ ಕೃಷಿಯಿಂದ ವಿಮುಖವಾಗದೆ ಸಾಲಸೋಲ ಮಾಡಿ ಬೆಳೆ ಇಟ್ಟಿದ್ದಾರೆ. ಇನ್ನೇನು ಫಸಲು ಕೈಗೆ ಬರುವಷ್ಟರಲ್ಲಿ ಕೊವಿಡ್‌ ಎರಡನೆ ಅಲೆಯ ಲಾಕ್ ಡೌನ್‌ ಘೋಷಣೆಯಾಗಿದೆ. ಇದರಿಂದ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲಸೋಲ ಮಾಡಿ ಬೆಳೆದ ಬೆಳೆಯನ್ನು ನಂಬಿಕೊಂಡು ರೈತ ಬೀದಿಗೆ ಬೀಳುವಂತಾಗಿದೆ. ಈ ಮಧ್ಯೆ ಹೈನುಗಾರಿಕೆಯಿಂದ ನಡೆಯುತ್ತಿದ್ದ ಬದುಕಿಗೆ ಒಕ್ಕೂಟಗಳ ರಜೆ ಘೋಷಣೆಯ ಕರಿನೆರಳು ಕಾಣತೊಡಗುತ್ತಿದೆ. ಇಂತಹ ಸಮಯದಲ್ಲಿ ದೇವರ ಹೆಸರಿನಲ್ಲಿ ಸೇರಿದಂತೆ ಇತರೆ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಮಾಂತರ ಪ್ರದೇಶದ ರೈತ ಮಹಿಳೆಯರು ಸೇರಿದಂತೆ ಜನರಿಂದ ಬಲವಂತ ಸಾಲ ವಸೂಲಿಗೆ ಮುಂದಾಗಿವೆ. ಸಾಲ ನೀಡದೆ ಇದ್ದಲ್ಲಿ ಅವರನ್ನು ಮಾನಸಿಕ ಹಿಂಸೆಗೆ ಗುರುಪಡಿಸುವ ಕಾರ್ಯಗಳಾಗುತ್ತಿವೆ.
ಜೀವನ ನಡೆಸುವುದೇ ಸವಾಲಿನ ಕೆಲಸವಾಗಿರುವಾಗ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವಾಗ ರೈತರು ಯಾವರೀತಿ ಸಾಲ ಕಟ್ಟುತ್ತಾರೆಂಬ ಕನಿಷ್ಟ ಪ್ರಜ್ಞೆ ಮೈಕ್ರೋಫೈನಾನ್ಸ್ ಸಂಸ್ಥೆ ನಡೆಸುವವರಿಗೆ ಇಲ್ಲವಾಗಿರುವುದು ದುರಂತ. ಸರ್ಕಾರ ಮೂರು ತಿಂಗಳು ಸಾಲ ವಸೂಲಿ ಮಾಡಬಾರದೆಂಬ ಹೇಳಿಕೆ ನೀಡಿ ಸುಮ್ಮನಾಗಿದೆ. ಆದರೆ ಮೈಕ್ರೋಫೈನಾನ್ಸ್ ಸಂಸ್ಥೆಯವರು ದಿನಾಲೂ ಬಂದು ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿದ್ದಾರೆ. ಇವರ ಜೊತೆಯಲ್ಲಿ ಟ್ರಾಕ್ಟರ್‌ ಸಾಲ ನೀಡಿದ ಬ್ಯಾಂಕಿಂಗ್‌ ಸಂಸ್ಥೆಗಳು ಸಹ ರೈತರಿಗೆ ಕಿರುಕುಳ ನೀಡುತ್ತಿವೆ. ಸರ್ಕಾರ ಕೂಡಲೆ ಎಚ್ಚೆತ್ತು ಮುಂದಿನ ಮೂರು ತಿಂಗಳವರೆಗೂ ಯಾವುದೇ ಸಾಲ ವಸೂಲಿಗೆ ಕ್ರಮ ಕೈಗೊಳ್ಳದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದಲ್ಲಿ, ಸಾಲವಸೂಲಿ ನೆಪದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ರೈತರಿಗೆ, ರೈತ ಮಹಿಳೆಯರಿಗೆ ಕಿರುಕುಳ ನೀಡಲು ಮುಂದಾಗುವವರಿಗೆ ರೈತ ಸಂಘದ ವತಿಯಿಂದ ಗ್ರಾಮದಲ್ಲಿ ಕಂಬಕ್ಕೆ ಕಟ್ಟುವ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!