ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ತಯಾರಿಕ ಘಟಕವು ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆ ವತಿಯಿಂದ ಸ್ಥಾಪನೆಯಾಗಲಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸುವ ಬಗ್ಗೆ ಹೈಡಲ್ ಬರ್ಗ್ ಕಂಪೆನಿಯ ಅಧಿಕಾರಿಗಳಿಂದ ಆದೇಶ ಪತ್ರ ಸ್ವೀಕರಿಸಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೇವಲ 8 ವಾರದ ಅವಧಿಯಲ್ಲಿ 500 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕ ಕಾರ್ಯಾರಂಭ ಮಾಡಲಿದೆ, ತುರುವೇಕೆರೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಅಮೂಲ್ಯ ಸಹಕಾರವಿತ್ತ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಅವರನ್ನು ಬಹುವಾಗಿ ಸ್ಮರಿಸುತ್ತೇನೆ, ಘಟಕ ಸ್ಥಾಪಿಸಲು ಹಸಿರು ನಿಶಾನೆ ತೋರಿದ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿಗೆ ತಾಲೂಕಿನ ಜನತೆಯ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ಆಮ್ಲಜನಕ ಘಟಕ ಸ್ಥಾಪನೆಯಾದ ನಂತರ ಏಕಕಾಲದಲ್ಲಿ 40 ಬೆಡ್‌ಗಳಲ್ಲಿರುವ ರೋಗಿಗಳಿಗೆ ಆಮ್ಲಜನಕ ಸರಬರಾಜು ಮಾಡಬಹುದಾಗಿದೆ. ಆಮ್ಲಜನಕ ಘಟಕ ಸ್ಥಾಪನೆಯೂ ಸೇರಿದಂತೆ ಪೂರಕ ವೈದ್ಯಕೀಯ ವ್ಯವಸ್ಥೆಗಳಿಗೆ ಮುಂದಾಗುವ ಮೂಲಕ ಕೋವಿಡ್ 3 ನೇ ಅಲೆ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಅನೇಕ ಸಾಮಾಜಿಕ ಸೇವಾ ಸಂಸ್ಥೆ ಸಂಪರ್ಕಿಸಲಾಗಿದೆ. ಕ್ಷೇತ್ರವನ್ನು ಕೊರೊನಾ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಹೈಡಲ್ ಬರ್ಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಮೂರ್ತಿ, ಹೆಚ್.ಆರ್.ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ, ಡಾ.ನವೀನ್, ಡಾ.ಪವನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯರಾದ ಚಿದಾನಂದ್, ಮುಖಂಡರಾದ ದುಂಡಾರೇಣಕಪ್ಪ, ಯೋಗಾನಂದ್, ಚಂದ್ರಣ್ಣ, ವಿ.ಬಿ.ಸುರೇಶ್, ಸೋಮಶೇಖರ್, ಜಯರಾಮ್ ಆಸ್ಪತ್ರೆ ಸಿಬ್ಬಂದಿ ಬೋರೇಗೌಡ ಇತರರು ಇದ್ದರು.
ತುರುವೇಕೆರೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ: ಮಸಾಲ ಜಯರಾಮ್
Get real time updates directly on you device, subscribe now.
Next Post
Comments are closed.