ಕೊರೊನಾ ನಿರ್ವಹಣೆಯಲ್ಲಿ ಮಧುಗಿರಿ ಆಡಳಿತ ಸಫಲ- ಸಚಿವರ ಮೆಚ್ಚುಗೆ

ಜಿಲ್ಲೆಯಲ್ಲಿ ಕೊರೊನಾ ಕಡಿಮೆಯಾಗ್ತಿದೆ: ಮಾಧುಸ್ವಾಮಿ

522

Get real time updates directly on you device, subscribe now.

ಮಧುಗಿರಿ: ಕೊರೊನಾ ತಡೆಗಟ್ಟಲು ಮಧುಗಿರಿ ತಾಲೂಕು ಆಡಳಿತ ಉತ್ತಮ ನಿರ್ವಹಣೆ ತೋರಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಂತೋಷದಾಯಕ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೊರೊನಾ ವೈರಸ್‌ ತಡೆಗಟ್ಟುವುದರ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಈಗ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ. 9 ರಷ್ಟಿದ್ದು, ಶೇ.5 ಕ್ಕೆ ಇಳಿಕೆಯಾದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ ಎಂದು ಭಾವಿಸಲಾಗುತ್ತದೆ. ಅಲ್ಲಿಯವರೆಗೂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು, ತಾಲೂಕಿನಲ್ಲಿ ಹಾಟ್ ಸ್ಪಾಟ್‌ ಪ್ರದೇಶಗಳಲ್ಲಿ ಇನ್ನೂ ಸೋಂಕಿತರು ಇದ್ದರೆ ಅವರೆಲ್ಲರನ್ನೂ ಮತ್ತೆ ಪರೀಕ್ಷಿಸಿ ಅಕ್ಕ ಪಕ್ಕದ ಮನೆಗಳವರನ್ನು ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಪ್ರತೀ ದಿನ ಕನಿಷ್ಠ 600 ಪರೀಕ್ಷೆ ನಡೆಸಬೇಕು, ಮಧುಗಿರಿಯಂತೆ ಜಿಲ್ಲೆಯಲ್ಲೂ ಸೋಂಕಿತರ ಪ್ರಮಾಣ ಕಡಿಮೆಯಾದರೆ ತಾಲೂಕಿನ ಶಾಸಕರೊಂದಿಗೆ ಸಭೆ ನಡೆಸಿ ಲಾಕ್ ಡೌನ್‌ ಸಡಿಲಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ 500 ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಮಂಜೂರು ಮಾಡಲಾಗಿದೆ, ಕೊರೊನಾ 2 ಅಲೆಯಿಂದಾಗಿ ಸಾಕಷ್ಟು ರೋಗಿಗಳಿಗೆ ಸಕಾಲಕ್ಕೆ ಆಮ್ಲಜನಕ ದೊರಕದೆ ಇರುವುದನ್ನು ಮನಗಂಡ ಸರ್ಕಾರ ಈ ಘಟಕ ಮಂಜೂರು ಮಾಡಿದೆ. ಕೊರೊನಾ 3ನೇ ಅಲೆ ಬರುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಪಿಎಚ್‌ಸಿ ಕೇಂದ್ರಗಳಲ್ಲೂ ಆಮ್ಲಜನಕದ ಪೈಪ್‌ಲೈನ್‌ ಅಳವಡಿಸಿ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಹೊಸದಾಗಿ ಬಂದಿರುವ ಸಂಚಾರಿ ಲ್ಯಾಬ್‌ ಮುಂದಿನ ದಿನಗಳಲ್ಲಿ ಮಧುಗಿರಿಗೆ ಆಗಮಿಸಲಿದ್ದು, ರೋಗದ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಿಸಿ ಕೂಡಲೆ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗ ಸೋಂಕಿತರ ಪರೀಕ್ಷೆಗೆ ಯಾವುದೇ ಸಮಸ್ಯೆಯಿಲ್ಲ, ತುಮಕೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತೀ ದಿನ 2,500, ತಿಪಟೂರಿನಲ್ಲಿ 1,500 ಮತ್ತು ಶಿರಾ ತಾಲೂಕಿನಲ್ಲಿ ಇನ್ನೆರಡು ದಿನಗಳಲ್ಲಿ ಲ್ಯಾಬ್‌ ಆರಂಭವಾಗಲಿದ್ದು, ಅಲ್ಲಿಯೂ 1500 ಪರೀಕ್ಷೆ ಮಾಡಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ದಿನ 7000 ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, 24 ಗಂಟೆಯಲ್ಲಿ ವರದಿ ಬರುವಂತೆ ಮಾಡಲು ಕ್ರಮ ಕೈಗೊಂಡು ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗುವಂತೆ ಕ್ರಮ ವಹಿಸಲಾಗುವುದು ಎಂದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್‌ ಯಂತ್ರಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ದಾನಿಗಳು ಮುಂದೆ ಬಂದು ಯಂತ್ರಗಳನ್ನು ನೀಡಿದರೆ ಮಧುಗಿರಿ ಆಸ್ಪತ್ರೆಗೂ ಕೂಡ ಸಿಟಿ ಸ್ಕ್ಯಾನ್‌ ಯಂತ್ರ ಅಳವಡಿಸಲಾಗುವುದು ಎಂದರು.
ಮಧುಗಿರಿ ಶಿರಾ ರಾಷ್ಟ್ರೀಯ ಹೆದ್ದಾರಿ 234 ನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹಣ ಮಂಜೂರು ಮಾಡಿರುವುದಾಗಿ ತಿಳಿಸಿದರು.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಚಿದಾನಂದ ಗೌಡ ಅವರು ತಲಾ ಒಂದೊಂದು ಸುಸಜ್ಜಿತ ಆ್ಯಂಬುಲೆನ್ಸ್ ವಾಹನಗಳನ್ನು ನೀಡುವುದಾಗಿ ತಿಳಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮಧುಗಿರಿಗೆ ನೀರು ಹರಿಯಲು ಜೆಸಿಎಂ ಕಾರಣ
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಧುಗಿರಿ ತಾಲೂಕಿಗೆ ಕಳೆದ ಬಾರಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸಿದ್ದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಉದಾರತೆಯೇ ಕಾರಣವಾಗಿದ್ದು, ಈ ವರ್ಷವೂ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಇದೇ ವೇಳೆ ಮಧುಗಿರಿ ಉಪವಿಭಾಗಕ್ಕೆ ಒಂದು ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಸಚಿವರಲ್ಲಿ ಶಾಸಕ ಎಂ.ವಿ.ವೀರಭಧ್ರಯ್ಯ ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!