ಶಿರಾ:ಕೊರೊನಾ ಸುಧಾರಣೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಲಾಕ್ ಡೌನ್ ತೀರ್ಮಾನವನ್ನು ನಾವು ನಿಧಾನವಾಗಿ ತೆಗೆದುಕೊಂಡ ಕಾರಣ ಜೀವ ಮತ್ತು ಜೀವನ ಎರಡೂ ಸಂಕಷ್ಟಕ್ಕೆ ತೊಂದರೆ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಷಾದಿಸಿದರು.
ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ ಶಿರಾದ ಸಿಎಂಜಿ ಫೌಂಡೇಷನ್ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ದಿನಸಿ ಕಿಟ್ ವಿತರಿಸಿ ಮಾತನಾಡಿ, ಮಾತು ಮಾತಿಗೆ ಲಾಕ್ ಡೌನ್ ಮಾಡಬಾರದು, ಜನರ ಜೀವನಕ್ಕೆ ಕಷ್ಟ ಆಗಲಿದೆ ಎನ್ನುವ ಅಭಿಲಾಷೆ ಇಟ್ಟುಕೊಂಡಿದ್ದೆವು. ಆದರೆ ತೀರ್ಮಾನ ಕೈಗೊಳ್ಳುವ ವೇಳೆಗೆ ಪರಿಸ್ಥಿತಿ ವಿಷಮಗೊಂಡಿತ್ತು ಎನ್ನುವ ಅರ್ಥದಲ್ಲಿ ಅವರು ಮಾತನಾಡಿದರು.
ಹದಿನಾಲ್ಕು ಹದಿನೈದು ತಿಂಗಳು ಯಾವುದೇ ಆದಾಯದ ಮೂಲ ಇಲ್ಲದೇ ಹೋದರೂ ಸ್ವಾಭಿಮಾನದ ಶಿಕ್ಷಕರು ತಮ್ಮ ಬವಣೆಯನ್ನು ಯಾರೊಟ್ಟಿಗೂ ಹೇಳಿಕೊಂಡಿರಲಿಲ್ಲ. ನಿಮ್ಮ ಇಚ್ಛಾಶಕ್ತಿಗೆ ಮೆಚ್ಚಿಕೊಳ್ಳಬೇಕಾದದ್ದೇ ಎಂದು ಬಣ್ಣಿಸಿದ ಅವರು, ಸರ್ಕಾರ ನಡೆಸುವುದು ನಮಗೂ ಕಷ್ಟ ಇದೆ. ಎಲ್ಲಾ ವಿಭಾಗಳಿಗೂ ಪರಿಹಾರ ಕೊಡುವುದು ಸರ್ಕಾರಕ್ಕೂ ಕಷ್ಟ ಆಗಲಿದೆ. ಲಾಕ್ ಡೌನ್ ಕಾರಣ ಸರ್ಕಾರದ ಆದಾಯದಲ್ಲೂ ಕೊರತೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಸಹಾ ಸರ್ಕಾರದ ಪರವಾಗಿ ನಾನು ಮಾಡುವುದೇನಿದ್ದರೂ ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಎಂಎಲ್‌ಸಿ ಚಿದಾನಂದ ಎಂ.ಗೌಡ, ಕೋವಿಡ್ ನಡುವೆ ಶಾಲಾ ದಾಖಲಾತಿ ಕುರಿತಂತೆ ಗೊಂದಲಗಳು ಉಂಟಾದವು. ಎಲ್ಲೋ ಕೆಲವು ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಿದರೆ, ಬಜೆಟ್ ಸ್ಕೂಲ್ ಎಂದು ಕರೆಸಿಕೊಳ್ಳುವ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರಿಗೆ ಆದಾಯಕ್ಕೆ ಹೊಡೆತ ಬಿದ್ದಿತು. ಆದ್ದರಿಂದ ಮೊನ್ನೆಯಷ್ಟೆ ನಾವುಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗಾಗಿ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗಳೂ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.
ಶಿಕ್ಷಣ ಮಂತ್ರಿಗಳ ಜೊತೆಯಲ್ಲಿ ನಡೆದ ಎಂಎಲ್‌ಸಿಗಳ ಸಭೆಯಲ್ಲಿ ಕಳೆದ ವರ್ಷ ದಾಖಲಾಗಿ ವಿಚಾರದಲ್ಲಿ ಉಂಟಾದ ಗೊಂದಲ ಪರಿಹರಿಸುವಂತೆ ಕೋರಿದ್ದೇವೆ. ಬಳಕೆಯಾಗದ ಅನುದಾನಗಳನ್ನು ಕ್ರೋಢೀಕರಿಸುವುದರ ಮೂಲಕ ಮತ್ತು ಬೇರೆ ಯಾವುದೇ ಮೂಲದಿಂದ ಹಣಕಾಸು ಹೊಂದಿಸಿ, ಶಿಕ್ಷಕರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.
ಮತ್ತೋರ್ವ ಶಾಸಕ ವೈ.ಎ.ನಾರಾಯಣಸ್ವಾಮಿ, ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲ ವರ್ಗದವರೂ ಸರ್ಕಾರದ ನೆರವನ್ನು ಕೋರುತ್ತಿದ್ದಾರೆ. ಆದರೆ ಸ್ವಾಭಿಮಾನಿ ಶಿಕ್ಷಕರು ಮಾತ್ರ ಸರ್ಕಾರವನ್ನು ಯಾವುದೇ ನೆರವು ಕೊಡುವಂತೆ ಒತ್ತಾಯಿಸಿಲ್ಲ. ಹಾಗೆಂದು ಅವರನ್ನು ಕಡೆಗಣಿಸುವಂತಿಲ್ಲ. ನಿಮ್ಮ ಬವಣೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇವೆ. ಶಿಕ್ಷಣ ಮಂತ್ರಿಗಳ ಜೊತೆಯಲ್ಲೂ ಮಾತನಾಡಿದ್ದೇವೆ. ಈಗ ಸರ್ಕಾರದ ಪ್ರಭಾವಿ ಮಂತ್ರಿಗಳಲ್ಲಿ ಒಬ್ಬರಾದ ಮಾಧುಸ್ವಾಮಿಯವರು ನಮ್ಮ ಜೊತೆಯಲ್ಲಿದ್ದಾರೆ. ಅವರು ಸರ್ಕಾರದ ಮಟ್ಟದಲ್ಲಿ ಶಿಕ್ಷರಿಗಾಗಿ ಯಾವುದಾದರೂ ಪ್ಯಾಕೇಜ್ ಘೋಷಣೆ ಮಾಡಿಸುವಂತೆ ಪ್ರಭಾವ ಬೀರಬೇಕು ಎಂದು ಆಗ್ರಹಿಸಿದರು.
ಲಾಕ್ ಡೌನ್ ತಡವಾದ್ದರಿಂದ ಜನರಿಗೆ ಸಂಕಷ್ಟ: ಮಾಧುಸ್ವಾಮಿ
Get real time updates directly on you device, subscribe now.
Comments are closed.