ಬಡ ಕುಟುಂಬಗಳಿಗೆ ಸರ್ಕಾರ ಹತ್ತು ಸಾವಿರ ನೀಡಲಿ: ಡಿಕೆಎಸ್

355

Get real time updates directly on you device, subscribe now.

ಕುಣಿಗಲ್‌: ಕೋವಿಡ್‌ ಮೊದಲ, ಎರಡನೆ ಅಲೆಯಿಂದ ಮಧ್ಯಮ, ಕಡುಬಡವ ಕುಟುಂಬಗಳು ತೀವ್ರ ಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೆ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳ ನೆರವು ನೀಡಬೇಕೆಂದು ಸಂಸದ ಡಿ.ಕೆ.ಸುರೇಶ್‌ ಆಗ್ರಹಿಸಿದರು.
ಮಂಗಳವಾರ ತಾಲೂಕಿನ ಯಲಿಯೂರು ಗ್ರಾಮ ಪಂಚಾಯಿತಿಯ ಬುಕ್ಕಸಾಗರ ಗ್ರಾಮದಲ್ಲಿ ಡಿಕೆಎಸ್‌ಚಾರಿಟಬಲ್‌ ಟ್ರಸ್ಟ್ ವತಿಯಿಂದ ತಾಲೂಕಿನ ಬಡ ಕುಟುಂಬಗಳಿಗೆ 75 ಸಾವಿರ ಫುಡ್ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಹಳ್ಳಿ ಹಳ್ಳಿಗಳಲ್ಲಿ ಕೋವಿಡ್‌ ಸೋಂಕು ಇನ್ನು ಇದೆ. ಸೋಂಕು ತಪಾಸಣೆ ಕಡಿಮೆಗೊಳಿಸಿ ಸೋಂಕಿತರ ಸಂಖ್ಯೆ ಕಡಿಮೆ ತೋರಿಸಲು ಮುಂದಾಗಿದೆ, ಸರ್ಕಾರ ಏನಾದರೂ ಮಾಡಿಕೊಳ್ಳಲಿ ಕೊವಿಡ್ ನಿಂದ ಬಾದಿತವಾದ ಕುಟುಂಬಗಳಿಗೆ ಎರಡು, ಮೂರು ಸಾವಿರ ನೆರವು ಸಾಲದು ಕೂಡಲೆ ಹತ್ತು ಸಾವಿರ ನೀಡಬೇಕು. ತಜ್ಞರು ನೀಡಿದ ವರದಿ ಸರಿಯಾಗಿ ಪಾಲನೆ ಮಾಡದೆ ಜನರು ಸಾವು ನೋವು ಅನುಭವಿಸುವ ಸ್ಥಿತಿ ನಿರ್ಮಾಣ ಮಾಡುವ ಮೂಲಕ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಒಂದೆಡೆ ಮಕ್ಕಳಿಗೆ ಶಿಕ್ಷಣ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೊವಿಡ್‌ ನಿರ್ವಹಣೆಯಲ್ಲಿ ವೈಫಲ್ಯ ಕಂಡಿದ್ದರೂ ಜನೆತೆಗೆ ಬೇರೆ ಬೇರೆ ವಿಷಯ ಮುಂದಿಟ್ಟು ಅಭಿವೃದ್ದಿ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಕೊವಿಡ್‌ ಕಷ್ಟ ಸಮಯದಲ್ಲೂ ಕ್ಷುಲ್ಲಕ ನೆಪಕ್ಕೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿರುವ ಸರ್ಕಾರ ಬಡವರ ವಿರೋಧಿ ಎಂದು ಸಾಬೀತಾಗುತ್ತಿದೆ ಎಂದರು.
ಶಾಸಕ ಡಾ.ರಂಗನಾಥ್‌ ಮಾತನಾಡಿ, ತಾಲೂಕಿನಾದ್ಯಂತ ಇರುವ ಬಡ ಕುಟುಂಬಗಳಿಗೆ 75 ಸಾವಿರ ಕಿಟ್‌ ನೀಡಲು ಡಿಕೆಎಸ್‌ ಟ್ರಸ್ಟ್ ನಿಂದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಿಟ್ ವಿತರಣೆ ಮಾಡಲಾಗುವುದು, ಈಗಾಗಲೆ ಸೋಂಕಿತರ ಮನೆಗಳಿಗೆ ಅತ್ಯಾಧುನಿಕ ಮೆಡಿಕಲ್‌ ಕಿಟ್‌ ನೀಡಲಾಗಿದೆ ಇದರ ಜೊತೆಯಲ್ಲಿ ಪೌಷ್ಟಿಕಾಂಶ ಮಾತ್ರೆ ವಿತರಣೆ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಸದಸ್ಯ ಸುಮಾ, ಉಪವಿಭಾಗಾಧಿಕಾರಿ ಅಜಯ್‌, ತಹಶೀಲ್ದಾರ್‌ ಮಹಾಬಲೇಶ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ, ಪುರಸಭೆ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಗಂಗಶಾನಯ್ಯ, ಶಾಂತರಾಜು, ರಂಗಸ್ವಾಮಿ, ಚಂದ್ರಶೇಖರ, ಬೇಗೂರು ನಾರಾಯಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!