ಏಳು ವರ್ಷದಲ್ಲಿ ಮೋದಿ ಸರ್ಕಾರ ಮಾಡಿದ ಸಾಧನೆ ಶೂನ್ಯ: ಡಾ.ಪರಮೇಶ್ವರ್

ದೇಶದ ಆರ್ಥಿಕ ಪರಿಸ್ಥಿತಿ ಪಾತಾಳ ಕಂಡಿದೆ

554

Get real time updates directly on you device, subscribe now.

ತುಮಕೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 7 ವರ್ಷದ ಸಾಧನೆ ಶೂನ್ಯವಾಗಿದ್ದು, ದೇಶದ ಆರ್ಥಿಕತೆ ಉತ್ತಮ ಪಡಿಸುವಲ್ಲಿ, ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವೈಫಲ್ಯವಾಗಿದೆ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್‌ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ದೇಶದ ಜನ ಹೊಸ ಚಿಂತನೆ, ಹೊಸ ಯೋಜನೆ, ಹೊಸ ಆವಿಷ್ಕಾರಗಳ ನಿರೀಕ್ಷೆಯಲ್ಲಿದ್ದರು, ಆದರೆ ಬಹುಬೇಗ ಆ ನಿರೀಕ್ಷೆಗಳು ಹುಸಿಯಾಗ ತೊಡಗಿದವು ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಜಿಡಿಪಿ ಶೇ. 8.1 ರಷ್ಟಿತ್ತು. ಕ್ರಮೇಣ ಇದು ಕುಸಿಯುತ್ತಾ ಬಂದಿತು, ಈಗ ಈ ಜಿಡಿಪಿ ಮೈನಸ್ ಗೆ ಹೋಗುವಂತಹ ಕುಸಿತ ಕಾಣುತ್ತಿದ್ದೇವೆ. ಇದು ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದರು.
ಒಂದು ದೇಶದ ಜಿಡಿಪಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆ ದೇಶದ ಆರ್ಥಿಕತೆ ನಿಯಂತ್ರಣದಲ್ಲಿರುತ್ತದೆ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರುತ್ತದೆ ಎಂಬುದನ್ನು ಚೀನಾ ದೇಶ ನೋಡಿ ತಿಳಿದುಕೊಳ್ಳಬಹುದು. ಆದರೆ ನಮ್ಮ ದೇಶದಲ್ಲಿ ಕೋವಿಡ್‌ ಬಂದ ನಂತರ ಕಳೆದ ಒಂದೂವರೆ ವರ್ಷದಿಂದ ಜಿಡಿಪಿ ಮತ್ತ ಅಭಿವೃದ್ಧಿ ಬಹಳಷ್ಟು ಪಾತಾಳಕ್ಕೆ ಕುಸಿದಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಪ್ರಧಾನಿ ಮೋದಿ, ವಿತ್ತ ಸಚಿವರು ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ತಯಾರಿಲ್ಲ ಎಂದರು.
ಜಿಡಿಪಿ ಬೆಳವಣಿಗೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಅಳತೆ ಮಾಡುತ್ತೇವೆ, ಹಿಂದೆ ಯಾವ ರೀತಿ ಪರಿಸ್ಥಿತಿ ಇತ್ತು, ಈಗ ಯಾವ ರೀತಿ ಪರಿಸ್ಥಿತಿ ಇದೆ ಎಂಬುದನ್ನು ಊಹಿಸಬಹುದಾಗಿದೆ. ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಕಾಲದಲ್ಲಿ ಪ್ರಥಮ ಬಾರಿಗೆ ದೇಶದಲ್ಲಿ ಜಿಡಿಪಿ ಶೇ.10.68 ಕ್ಕೆ ತಲುಪಿತ್ತು. ಯಾವುದೇ ರಾಷ್ಟ್ರದಲ್ಲಿ ಎರಡು ಡಿಜಿಟ್‌ ಮೇಲೆ ಜಿಡಿಪಿ ಹೋಗಿದ್ದರೆ ಆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕಂಟ್ರೋಲ್‌ನಲ್ಲಿದ್ದು, ಅಭಿವೃದ್ಧಿಯ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದರು.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಶೇ. 8.1 ರಷ್ಟು ಇದ್ದ ಜಿಡಿಪಿ 2019- 20ರ ನಂತರ ಶೇ.4.1ಕ್ಕೆ ಕುಸಿಯಿತು. ಇನ್ನು ಕೋವಿಡ್‌ 1ನೇ ಅಲೆ ಆರಂಭವಾದ ಬಳಿಕ ಜಿಡಿಪಿ ಶೇ.-24ಕ್ಕೆ ಬಂತು, ಈಗ 2ನೇ ಅಲೆ ವೇಳೆ ದೇಶದ ಜಿಡಿಪಿ ಪ್ರಮಾಣ ಶೇ.-7.5 ಇಳಿಯುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. ಇದರೊಂದಿಗೆ ದೇಶದ ಅಭಿವೃದ್ಧಿಯೂ ಕುಂಠಿತಗೊಂಡಿದೆ ಎಂದು ಹೇಳಿದರು.
ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದ 7 ವರ್ಷದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಕಳೆದ 40 ವರ್ಷದಲ್ಲಿ ಇಷ್ಟು ಪಾತಾಳಕ್ಕೆ ಹೋಗಿರಲಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು, 7 ವರ್ಷದಲ್ಲಿ 14 ಕೋಟಿ ಯುವಕರಿಗೆ ಉದ್ಯೋಗ ಕೊಡಬಹುದಾಗಿತ್ತು, ಆದರೆ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ನೀಡುವಲ್ಲಿ ಈ ಸರ್ಕಾರ ಸಂಪೂರ್ಣ ಫಲವಾಗಿದೆ ಎಂದು ದೂರಿದರು.
ಕೃಷಿ ಕ್ಷೇತ್ರವನ್ನು ಉತ್ತಮ ಪಡಿಸುತ್ತೇವೆ, ರೈತರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ, ಅವರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ ಕೇಂದ್ರ ಸರ್ಕಾರ ಈಗ ರೈತ ರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕೃಷಿ ವಲಯವನ್ನು ಹತ್ತಿಕ್ಕಿ ಕಾರ್ಪೋರೇಟ್‌ ವಲಯಕ್ಕೆ ಅನುವು ಮಾಡಿಕೊಡುವ ಲಕ್ಷಣ ಕಂಡು ಬರುತ್ತಿವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಮಾತಿಗೆ ಮನ್ನಣೆ ನೀಡಬೇಕು, ಜನರಿಗೆ ಉಪಯೋಗವಾಗುವ ಕಾನೂನುಗಳನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ, ಆದರೆ ಈ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ 3 ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ಈ ಕಾಯ್ದೆಗಳನ್ನು ವಾಪಸ್‌ ಪಡೆಯುತ್ತೇವೆ ಎಂದು ಹೇಳಲು ಬಿಜೆಪಿ ಪಕ್ಷದವರಿಗೆ ವ್ಯವಧಾನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದೊಡ್ಡ ಸಾಧನೆ ಮಾಡಿದೆ ಎಂದು ಹೇಳುತ್ತಿರುವ ಕೇಂದ್ರದ ಬಿಜೆಪಿ ಸಚಿವರು ಪೆಟ್ರೋಲ್‌, ಡೀಸೆಲ್‌ ಬೆಲೆ 2014 ರಲ್ಲಿ ಎಷ್ಟಿತ್ತು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಷ್ಟಿದೆ ಎಂಬುದನ್ನು ಬರಂಗಪಡಿಸಲಿ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜಿಲ್ಲೆಯಲ್ಲಿ 911 ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡುತ್ತಿದೆ. ಶಿರಾದಲ್ಲಿ ಸರ್ಕಾರದ ಪ್ರಕಾರ 61 ಮಂದಿ ಸಾವನ್ನಪ್ಪಿದ್ದಾರೆ. ನನ್ನ ಮಾಹಿತಿ ಪ್ರಕಾರ 154 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್‌ ಮತ್ತು ನಾನ್‌ ಕೋವಿಡ್‌ ಎಂದು ವರ್ಗೀಕರಿಸಿ ನೀಡುತ್ತಿರುವುದು ಸಾವಿನ ಅಂಕಿ ಅಂಶ ಮುಚ್ಚಿ ಹಾಕುವ ಯತ್ನ ಎಂದು ಆರೋಪಿಸಿದರು.
ರ್ಯಾಟ್‌, ಸಿಟಿ ಸ್ಕ್ಯಾನಿಂಗ್‌ನಲ್ಲಿ ಕೋವಿಡ್‌ ದೃಢಪಟ್ಟು ಸಾವನ್ನಪ್ಪಿದವರನ್ನು ಕೋವಿಡ್ ನಿಂದ ಸಾವನ್ನಪ್ಪಿದವರ ಪಟ್ಟಿಯಿಂದ ಕೈಬಿಡಲಾಗಿದೆ. ವ್ಯವಸ್ಥಿತವಾಗಿ ಸಾವಿನ ಅಂಕಿ ಅಂಶ ಮುಚ್ಚಿ ಹಾಕಲಾಗುತ್ತಿದೆ. ಕೋವಿಡ್‌ ನಿರ್ವಹಣೆ ಬಗ್ಗೆ ಉಚ್ಛ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ವಿಚಾರಣೆ ಮಾಡುತ್ತಿವೆ. ಸಾವನ್ನಪ್ಪಿದವರ ಸಂಖ್ಯೆ ಮುಚ್ಚಿಡಲು ಸರ್ಕಾರವೇ ಕಾರಣ ಎಂದು ದೂರಿದ ಅವರು, ಯಡಿಯೂರಪ್ಪ ಅವರು ಒಬ್ಬೊಬ್ಬರಿಗೂ ಒಂದು ವರ್ಗ ನೀಡಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮಾತನಾಡಿ, ನೋಟ್‌ ಬ್ಯಾನ್‌ ವೇಳೆ 500, 1000 ಮುಖ ಬೆಲೆ ನೋಟು ಜಮೆಯಾಗಿದ್ದು ಎಷ್ಟು ಎಂದು ಇದುವರೆಗೂ ಹೇಳಿಲ್ಲ, ಕಪ್ಪುಹಣ, ಖೋಟಾ ನೋಟು ನೆಪದಲ್ಲಿ ನೋಟ್‌ ಬ್ಯಾನ್‌ ಆದ ಮೇಲೆ ಜಮೆಯಾಗಿದ್ದು ಎಷ್ಟು ಎನ್ನುವುದು ಗೊತ್ತಿಲ್ಲ. ಭಾರತದ ಆರ್ಥಿಕತೆ ಮೇಲೆ ಮಾಡಿದ ಮೊದಲ ದಾಳಿ ಇದು, ನಮ್ಮ ಪಾಲಿನ 12,400 ಕೋಟಿ ನೀಡುತ್ತಿಲ್ಲ, ಕೇಳಿದರೆ ಸಾಲ ಪಡೆಯಲು ಹೇಳುತ್ತಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ರಫಿಕ್‌ ಅಹಮದ್‌ ಮಾತನಾಡಿ, ಕೋವಿಡ್‌ ಸಾಂಕ್ರಮಿಕ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.5 ರಷ್ಟು ಹೆಚ್ಚಳ ಮಾಡಿದ್ದು, ಜನರು ಸಂಕಷ್ಟದಲ್ಲಿದ್ದು ಪಾಲಿಕೆ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕರಾದ ಎಸ್‌.ಷಫಿಅಹಮದ್‌, ಕೆ.ಷಡಕ್ಷರಿ, ಮುಖಂಡ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!