ನ್ಯಾಯಕ್ಕಾಗಿ ಒತ್ತಾಯಿಸಿ ಧರಣಿ ಕುಳಿತ ವೃದ್ಧೆ

ಜಾಗದ ವಿಚಾರದಲ್ಲಿ ಅನ್ಯಾಯ

379

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಕೊಡವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡವತ್ತಿ ಗ್ರಾಮದಲ್ಲಿ ವಾಸವಾಗಿರುವ 85 ವರ್ಷದ ವೃದ್ಧೆ ತಮಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಕುಣಿಗಲ್‌ ತಾಲೂಕು ಪಂಚಾಯಿತಿ ಮುಂದೆ ಏಕಾಂಗಿ ಧರಣಿ ನಡೆಸಿ ತಮಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಕಣ್ಣೀರು ಸುರಿಸಿದರು.
ಬುಧವಾರ ತಾಲೂಕು ಪಂಚಾಯ್ತಿ ಕಾರ್ಯಾಲಯ ಕಾರ್ಯಾರಂಭದ ವೇಳೆಗೆ ಆಗಮಿಸಿದ ವೃದ್ಧೆ ಮಾಯಮ್ಮ, ತಾಪಂ ಕಾರ್ಯಾಲಯದ ಮುಖ್ಯದ್ವಾರದಲ್ಲಿ ಧರಣಿ ಕುಳಿತು ಗ್ರಾಪಂ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿದರು. ಈ ಬಗ್ಗೆ ವಿವರಣೆ ನೀಡಿದ ವೃದ್ಧೆ ಮಾಯಮ್ಮ, ತಮಗೆ ಕೊಡವತ್ತಿ ಗ್ರಾಪಂನಲ್ಲಿ ಖಾತೆ ನಂಬರ್‌110/154ರಲ್ಲಿ 60*60 ನಿವೇಶನ ಇದ್ದು, ಯಾವುದೇ ದಾಖಲೆಗಳಿಲ್ಲದೆ ಗ್ರಾಪಂನ ಬಿಲ್ ಕಲೆಕ್ಟರ್‌ ಇತರರು ತಮ್ಮ ನಿವೇಶನದ ಅಳತೆಯನ್ನು ಕಡಿಮೆ ಮಾಡಿ ನಮೂದು ಮಾಡಿದ್ದಲ್ಲದೆ, ಸದರಿ ನಿವೇಶನದ ಪೂರ್ವ ಭಾಗದಲ್ಲಿ ಬರುವ ಕದಲಪ್ಪ ಎಂಬುವರಿಗೆ ಸೇರಿದ ನಿವೇಶನ ಇದೆ. ಸದರಿಯವರು ತಮ್ಮ ನಿವೇಶನ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಇದನ್ನು ಸರಿಪಡಿಸಿಕೊಡುವಂತೆ ನವೆಂಬರ್‌ 2020ರಲ್ಲಿ ಅರ್ಜಿ ನೀಡಿದ ಪರಿಣಾಮ, ಅಂದಿನ ಹುಲಿಯೂರು ದುರ್ಗ ಪಿಎಸೈ, ತಾಪಂ ಇಒ ಆಗಮಿಸಿ ಪರಿಶೀಲಿಸಿ ಜಾಗದ ಸೂಕ್ತ ಸರ್ವೇ ಮಾಡಿಸಿ ಗಡಿಕಲ್ಲು ಹಾಕಿಸಿದ್ದರೂ ಪಕ್ಕದ ನಿವೇಶನದವರು ಒತ್ತುವರಿ ಮಾಡಿ ಕಟ್ಟಡ ಕಟ್ಟುತ್ತಿದ್ದಾರೆ. ಈ ಬಗ್ಗೆ ಪಿಡಿಒ ಜಾಗ ಸರ್ವೇ ಆಗುವವರೆಗೂ ಕಟ್ಟಡ ಕಟ್ಟದಂತೆ ಸೂಚನೆ ನೀಡಿದ್ದರೂ ಕಟ್ಟಡ ನಿರ್ಮಾಣ ಮಾಡುತ್ತಿದ್ದು ತಮಗೆ ತಮ್ಮ ಜಾಗ ಬಿಡಿಸಿಕೊಡುವಂತೆ ಹಾಗೂ ಗ್ರಾಪಂ ದಾಖಲೆಗಳಲ್ಲಿ ಖಾತೆ ತಿದ್ದುಪಡಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವೃದ್ಧೆಯ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಇಒ ಜೋಸೆಫ್‌, ಸದರಿ ವಿಷಯ ಕಳೆದ ಒಂದುವರೆ ವರ್ಷದಿಂದ ನಡೆಯುತ್ತಿದೆ. ಪ್ರತಿಸ್ಪರ್ಧಿಗಳು ತಮಗೆ ನ್ಯಾಯಬದ್ಧವಾಗಿ ಜಾಗ ಮಜೂರಾಗಿದೆ. ಮನೆ ಕಟ್ಟಲು ಇವರು ತೊಂದರೆ ನೀಡುತ್ತಿದ್ದಾರೆ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ಕೊಡಿಸದೆ ಇದ್ದಲ್ಲಿ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜ್ಯಪಾಲರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಿಷಯ ಗಂಭೀರವಾಗಿರುವುದರಿಂದ ಮಾಯಮ್ಮನವರ ಜಮೀನು ಕಂದಾಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅವರು ಸರ್ವೇ ಮಾಡಿಸಿ ಗಡಿ ನಿಗದಿ ಮಾಡಿಕೊಂಡು ಮುಂದಿನ ಕ್ರಮಕ್ಕೆ ನ್ಯಾಯಾಲಯದ ಮೊರೆ ಹೋಗಲಿ ಎಂದು ಸೂಚಿಸಿಲಾಗಿದೆ ಎಂದಿದ್ದಾರೆ. ಆದರೆ ವೃದ್ಧೆ ಮಾಯಮ್ಮ ತಮಗೆ 85 ವರ್ಷವಾಗಿದೆ, ಈ ವಯಸಿನಲ್ಲಿ ನ್ಯಾಯಾಲಯ ಮೆಟ್ಟಿಲೇರಲಾಗುವುದೆ, ಅಧಿಕಾರಿಗಳು ನ್ಯಾಯ ಒದಗಿಸಲಿ ಎಂದು ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!