ಕುಣಿಗಲ್: ತಾಲೂಕಿನಾದ್ಯಂತ ಮುಂಗಾರು ಮಳೆ ಅಬ್ಬರ ಬುಧವಾರ ರಾತ್ರಿ ಜೋರಾಗಿದ್ದು, ಮಿಂಚು ಗುಡುಗಿನ ಅಬ್ಬರದಿಂದ ಪ್ರಾರಂಭವಾದ ಮಳೆ ಗುರುವಾರ ಬೆಳಗಿನ ಜಾವದವರೆಗೂ ಸುರಿದು ಅನ್ನದಾತನ ಮೊಗದಲ್ಲಿ ಸಂತಸ ಮೂಡಿಸಿದ್ದು, ಕೃಷಿ ಚಟುವಟಿಕೆ ಲಾಕ್ ಡೌನ್ ನಡುವೆ ಭರ್ಜರಿಯಾಗಿ ಆರಂಭಕ್ಕೆ ಕಾರಣವಾಯಿತು.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೂ ಪಟ್ಟಣದಲ್ಲಿ 40.02 ಮಿ.ಮೀ, ಸಂತೆಪೇಟೆ 43.02, ಹುಲಿಯೂರು ದುರ್ಗದಲ್ಲಿ 60.06, ನಿಡಸಾಲೆಯಲ್ಲಿ 63.04, ಕೆ.ಹೊನ್ನಮಾಚನಹಳ್ಳಿಯಲ್ಲಿ 24.02, ಅಮೃತೂರಿನಲ್ಲಿ 36.03, ಮಾರ್ಕೋನಹಳ್ಳಿಯಲ್ಲಿ 80.02 ಮಿ.ಮೀ ಮಳೆಯಾಗಿದೆ. ರಾತ್ರಿ ಉತ್ತಮ ಮಳೆಯಾದ ಕಾರಣ ಗುರುವಾರ ಬೆಳಗ್ಗೆ ಪಟ್ಟಣದ ರಸಗೊಬ್ಬರ, ಭಿತ್ತನೆ ಬೀಜ ಮಾರಾಟ ಮಳಿಗೆಗಳಿಗೆ ರೈತರು ಗೊಬ್ಬರ ಇತರೆ ಖರೀದಿಗೆ ಮುಗಿಬಿದ್ದರು. ಈ ಮಧ್ಯೆ ಬಹುತೇಕ ಮಳಿಗೆಗಳಲ್ಲಿ ಸರ್ಕಾರದ ಸೂಚನೆಯಂತೆ ದರಪಟ್ಟಿ ಹಾಕದೆ ಇರುವುದು ರೈತರ ಶೋಷಣೆಯಾಗಿದ್ದು ಹಿಡಿಶಾಪ ಹಾಕಿಕೊಂಡೆ ಖರೀದಿ ಮಾಡಿದರು.
ಯಂತ್ರಾಧಾರಿತ ಕೃಷಿ- ರೈತನಿಗೆ ಡೀಸೆಲ್ ಬೆಲೆ ಏರಿಕೆ ಬರೆ
ಕಳೆದ ಕೆಲ ವರ್ಷಗಳಿಂದ ಕೃಷಿಗೆ ಕೂಲಿ ಆಳುಗಳ ಕೊರತೆ ಹೆಚ್ಚಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಮಾನವ ಶಕ್ತಿಯ ಅವಲಂಬನೆಗಿಂತ ಯಂತ್ರಗಳ ಅವಲಂಬನೆ ಹೆಚ್ಚಾಗಿದೆ. ಕೃಷಿಗೆ ಭೂಮಿ ಹದ ಮಾಡುವುದರಿಂದ ಹಿಡಿದು ಬೆಳೆ ಕಟಾವು ಮಾಡಿ ಹಸನು ಮಾಡುವವರೆಗೂ ಯಂತ್ರಗಳ ಅವಲಂಬನೆ ಹೆಚ್ಚಿದೆ. ಉಳುಮೆ ಮಾಡಲು ಗಂಟೆಗೆ 800 ರೂ., ಬಿತ್ತನೆ ಮಾಡಲು (ಬಹುತೇಕವಾಗಿ ಎರಚಿ ನಂತರ ಸಾಲು ಮಾಡುತ್ತಾರೆ) ಸಾಲು ನಾಟಿಗೆ 120 ರಿಂದ 1500 ವರೆಗೂ, ಕಟಾವಿಗೆ ಗಂಟೆಗೆ 800 ರೂ. ಅಥವಾ ಇಡಿ ಎಕರೆಗೆ ಇಷ್ಟು ಎಂದು ನಿಗದಿ ಮಾಡುತ್ತಾರೆ. ಔಷಧಿ ಸಿಂಪಡಣೆ ಸೇರಿದಂತೆ ಇತರೆ ಕಾರ್ಯಗಳಲ್ಲು ಯಂತ್ರದ ಬಳಕೆ ಇದೆ. ಎಲ್ಲಾ ಯಂತ್ರಗಳು ಹೆಚ್ಚಾಗಿ ಡೀಸೆಲ್ ಇಂಧನ ಆಧಾರಿತವಾಗಿರುವುದರಿಂದ ಡೀಸಲ್ ಬೆಲೆ ಏರಿಕೆ ಸಹಜವಾಗಿ ಈ ಮುಂಗಾರಿಗೆ ಗಂಟೆ ಆಧಾರಿತ ಬಾಡಿಗೆ ದರ ಹೆಚ್ಚಳವಾಗುವ ಸಾಧ್ಯತೆ ಇದ್ದು, ಸಹಜವಾಗಿ ಕೃಷಿ ಉತ್ಪಾದನೆ ವಲಯದ ರೈತರಿಗೆ ಮತ್ತಷ್ಟು ಹೊರೆಯಾಗಲಿದೆ.
ರೈತ ದಿನೇಶ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಡೀಸೆಲ್ ಬೆಲೆ ಏರಿಕೆ ಧೋರಣೆ ಖಂಡಿಸಿ, ಸರ್ಕಾರಗಳು ಕೃಷಿ ಉದ್ದೇಶಕ್ಕೆ ಬಳಕೆಯಾಗುವ ಡೀಸೆಲ್‌ದರ ಕಡಿಮೆಮಾಡಬೇಕು, ಇಲ್ಲವಾದಲ್ಲಿ ಕೃಷಿಇ ಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಡೀಸೆಲ್ ಪೂರೈಕೆ ವ್ಯವಸ್ಥೆಗೆ ಕ್ರಮ ಕೈಗೊಂಡು ರೈತರಿಗೆ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ.
Comments are closed.