ಕೊರೊನಾ ತಡೆಯುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ

387

Get real time updates directly on you device, subscribe now.

ಮಧುಗಿರಿ: ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು ಜನರ ಆರೋಗ್ಯದ ಜೊತೆ ಆಟವಾಡುತ್ತಿವೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಆರೋಪಿಸಿದರು.
ಗುರುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ದಿನಸಿ ಕಿಟ್‌ ಹಾಗೂ ರಾಜೇಂದ್ರರವರು ರೈತರಿಂದ ನೇರವಾಗಿ ಖರೀದಿಸಿದ ತರಕಾರಿಗಳನ್ನು ವಿತರಿಸಿ ಮಾತನಾಡಿ, ಕೊರೊನಾ ಮೊದಲ ಅಲೆ ಪ್ರಾರಂಭವಾದಾಗ ನಿಯಂತ್ರಿಸಲು 8 ತಿಂಗಳ ಕಾಲಾವಕಾಶ ಇತ್ತು, ಆದರೆ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಇಂದೂ ಮೂರನೇ ಅಲೆಯ ಆರಂಭವಾಗುತ್ತಿದ್ದರೂ ಕೊರೊನಾ ಹತೋಟಿಗೆ ಬಂದಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಿಜೆಪಿ ಮುಖಂಡರು ರೆಸಾರ್ಟ್ ಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇಂತಹವರಿಂದ ಜನರ ಸಮಸ್ಯೆ ಬಗೆಹರಿಯಲು ಸಾಧ್ಯವೆ, ರಾಜಕೀಯ ಅಧಿಕಾರಕ್ಕಾಗಿ ಕೆಲ ಬಿಜೆಪಿ ಮುಖಂಡರು ದೆಹಲಿಗೆ ಹೋಗಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗಾಗಿ ಒತ್ತಡ ಹೇರುತ್ತಿದ್ದಾರೆ, ಕೊರೊನಾ ಹೆಸರಿನಲ್ಲಿ ಜನರ ತೆರಿಗೆಯ ಕೋಟಿ ಕೋಟಿ ಹಣ ಲೂಟಿ ಮಾಡಿ ಸಂಪಾದನೆಯ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದರು.
ಮಧುಗಿರಿ ತಾಲೂಕಿನಲ್ಲಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮತ್ತು ಅವರ ಪುತ್ರ ಆರ್‌.ರಾಜೇಂದ್ರ ಅವರು ಕೊರೊನಾ ಸಂಕಷ್ಟದಲ್ಲಿ ಬಡ ಜನತೆಯ ಕಷ್ಟಗಳಿಗೆ ಭಾಗಿಯಾಗಿ ಪ್ರತಿನಿತ್ಯ 500 ಜನರಿಗೆ ಉಚಿತ ದಾಸೋಹ ಸೇವೆ ಹಮ್ಮಿಕೊಂಡಿದ್ದು, ಜೊತೆಗೆ ಸಂಕಷ್ಟದಲ್ಲಿರುವ ರೈತರು ಬೆಳೆದ ತರಕಾರಿ ಖರೀದಿಸಿ ಬಡ ಜನತೆಗೆ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, ರಾಜೇಂದ್ರ ಅವರ ಈ ಕಾರ್ಯ ಶ್ಲಾಘನೀಯವಾಗಿದ್ದು, ತರಕಾರಿ ಬೆಳೆದ ರೈತರಿಗೆ ನೆರವಾಗುವುದರೊಂದಿಗೆ ಕಷ್ಟದಲ್ಲಿರುವ ಬಡ ಜನರಿಗೆ ಉಚಿತವಾಗಿ ಊಟ, ತರಕಾರಿ ವಿತರಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದರು.
ರಾಜ್ಯ ಯುವ ಕಾಂಗ್ರೆಸ್‌ ಮಾಜಿ ಉಪಾಧ್ಯಕ್ಷ ಆರ್‌.ರಾಜೇಂದ್ರ ಮಾತನಾಡಿ ತಾಲ್ಲೂಕಿನಲ್ಲಿ ರೈತರು ಬೆಳೆದ ಸುಮಾರು 17 ಟನ್‌ ವಿವಿಧ ತರಕಾರಿಗಳನ್ನು ಕಾಂಗ್ರೆಸ್‌ ಪಕ್ಷದ ವತಿಯಿಂದ ಹಾಗೂ ಕೆ ಎನ್ ಆರ್‌, ಆರ್ ಆರ್‌ ಅಭಿಮಾನಿಗಳ ಬಳಗದ ವತಿಯಿಂದ ಖರೀದಿ ಮಾಡಿ ಬಡ ಕುಟುಂಬಗಳಿಗೆ ವಿತರಿಸಲಾಗಿದೆ. ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಎರಡು ಆ್ಯಂಬುಲೆನ್ಸ್‌ ಉಚಿತವಾಗಿ ನೀಡಲಾಗಿದೆ. ಬಡ ಜನತೆಗಾಗಿ ಮಧ್ಯಾಹ್ನದ ಉಚಿತ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಎಂ.ಎಸ್‌.ರಾಮಯ್ಯ ಸಮುದಾಯ ಭವನದಲ್ಲಿ ಬಡವರಿಗೆ ದಿನಸಿ ಕಿಟ್‌ ವಿತರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾ ಮಂಡಳದ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಲಾಲಾಪೇಟೆ ಮಂಜುನಾಥ್‌, ಮಂಜುನಾಥ್‌ ಆಚಾರ್‌, ಮುಖಂಡರಾದ ಉಮೇಶ್‌, ಎಂ.ಎಸ್‌.ಶಂಕರನಾರಾಯಣ್‌, ರಾಷ್ಟ್ರೀಯ ಕಾಂಗ್ರೆಸ್‌ ಯುವ ಘಟಕದ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಸುರಭಿದ್ವಿವೇದಿ, ಚೈತ್ರಾ, ರಾಜ್ಯ ಘಟಕದ ಕಾರ್ಯದರ್ಶಿ ಅನಿಲ್‌, ಪ್ರಧಾನ ಕಾರ್ಯದರ್ಶಿಗಳಾದ ಆನಂದ್‌, ವಿಜಯ್‌, ಪ್ರದೀಪ್‌, ರಾಜೇಶ್‌, ಖಾಲಿದ್‌, ಇಲಾಹಿ, ಸಾಮಾಜಿಕ ಜಾಲತಾಣದ ಮನು ಜೈನ್‌, ಸಂಜಯ್‌ ಜಯಚಂದ್ರ, ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಮಠ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಮಾಜಿ ಜಿಪಂ, ತಾಪಂ, ಗ್ರಾಪಂ ಸದಸ್ಯರು, ಕಾರ್ಯಕರ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!