ಜಿ ಎಸ್ ಬಿ 1 ಕೋಟಿ, ಜ್ಯೋತಿಗಣೇಶ್‌ 50 ಲಕ್ಷ ಜಿಲ್ಲಾಡಳಿತಕ್ಕೆ ಸಲ್ಲಿಕೆ

ರಕ್ತ ತಪಾಸಣೆ ಲ್ಯಾಬ್‌ ನಿರ್ಮಾಣಕ್ಕೆ ಅನುದಾನ

467

Get real time updates directly on you device, subscribe now.

ತುಮಕೂರು: ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಎಲ್ಲಾ ಮಾದರಿಯ ರಕ್ತ ತಪಾಸಣಾ ಲ್ಯಾಬೊರೇಟರಿ ನಿರ್ಮಾಣ ಮಾಡಲು ಲೋಕಸಭಾ ಸದಸ್ಯ ಜಿ.ಎಸ್‌.ಬಸವರಾಜು ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಮತ್ತು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಅನುದಾನವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.
ಲೋಕಸಭಾ ಸದಸ್ಯಜಿ.ಎಸ್‌.ಬಸವರಾಜು ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್ ಅವರೊಂದಿಗೆ ಚರ್ಚಿಸಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ರಕ್ತ ತಪಾಸಣಾ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಬಳಸಿಕೊಳ್ಳುವಂತೆ ಪತ್ರದ ಮುಖೇನ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ತುಮಕೂರು ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿದ್ದು, ಕೋವಿಡ್‌ ಸೇರಿದಂತೆ ಯಾವುದೇ ಕಾಯಿಲೆ ತಪಾಸಣೆ ಮಾಡಿಸಿಕೊಳ್ಳಬೇಕೆಂದರೂ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಸಿಕ್ಕಾಗ ಮಾತ್ರ ರೋಗಿ ಗುಣಮುಖನಾಗಿ ಮನೆಗೆ ವಾಪಸ್‌ ಹೋಗುತ್ತಾನೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಒಂದು ಸುಸಜ್ಜಿತ ಪ್ರಯೋಗಾಲಯ ನಿರ್ಮಾಣ ಮಾಡಿ ಜಿಲ್ಲೆಯ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮುಖೇನ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಜಿಲ್ಲಾಸ್ಪತ್ರೆ ಆವರಣದಲ್ಲಿ ಎಲ್ಲಾ ರೀತಿಯ ರಕ್ತ ತಪಾಸಣಾ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಜಿಲ್ಲೆಯ ಜನ ಕೋವಿಡ್‌ ಸೇರಿದಂತೆ ಯಾವುದೇ ಕಾಯಿಲೆಗಳ ತಪಾಸಣೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ರಕ್ತ ತಪಾಸಣೆ ಮಾಡಲು ಯಾವುದೇ ಅನುಕೂಲತೆಗಳಿಲ್ಲ, ಜಿಲ್ಲಾಸ್ಪತ್ರೆಯಲ್ಲಿ ರೋಗಿಯ ರಕ್ತ ಮಾದರಿ ಸಂಗ್ರಹಿಸಿ ಅದನ್ನು ಬೇರೆ ಕಡೆ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಅದರ ವರದಿ ಬರಲು ಸುಮಾರು 8 ರಿಂದ 24 ಗಂಟೆ ಸಮಯ ಬೇಕಾಗುತ್ತದೆ. ಇದರಿಂದ ರೋಗಿಗೆ ಚಿಕಿತ್ಸೆ ನೀಡಲು ವಿಳಂಬವಾಗುತ್ತದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ರಕ್ತ ತಪಾಸಣಾ ಪ್ರಯೋಗಾಲಯ ಆರಂಭಿಸಲು ನಾವು ಮತ್ತು ಸಂಸದರು ಒತ್ತಾಯ ಮಾಡಿ ಡಿಸಿಯವರ ಜೊತೆ ಚರ್ಚೆ ನಡೆಸಿದ್ದು, ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಕೊಂಡಿದ್ದಾರೆ. ಈ ನೂತನ ಪ್ರಯೋಗಾಲಯ ನಿರ್ಮಾಣಕ್ಕೆ ಸಂಸದರು ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1.50 ಕೋಟಿ ರೂ. ನೀಡಿದ್ದು, ಪ್ರಯೋಗಾಲಯ ಆರಂಭವಾದರೆ ಎಲ್ಲಾ ತರಹದ ರಕ್ತ ತಪಾಸಣೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಟಿಸ್ಕ್ಯಾನ್‌ ಮಾದರಿಯಲ್ಲಿಯೇ ಪಿಪಿಪಿ ಮಾದರಿಯಲ್ಲಿ ಸರ್ಕಾರದಿಂದ ಟೆಂಡರ್‌ ಪ್ರಕ್ರಿಯೆ ಶುರು ಮಾಡಲಾಗುತ್ತದೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಕಂಪನಿಗಳು ಹೊರತುಪಡಿಸಿ ದೊಡ್ಡ ದೊಡ್ಡ ಕಂಪನಿಗಳಾದ ಥೈರೋಕೇರ್‌, ಮೆಟ್ರೋ, ಅಪೋಲೋದಂತಹ ಕಂಪನಿಗಳು ಭಾಗವಹಿಸಬಹುದು. ಸರ್ಕಾರಿ ಆಸ್ಪತ್ರೆಯಿಂದ ಪ್ರಯೋಗಾಲಯ ತಜ್ಞರನ್ನು ನೇಮಿಸಿದ ಬಳಿಕ ರೋಗಿಯ ತಪಾಸಣೆ ನಡೆಸಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಸರ್ಕಾರ ಆ ಮೊತ್ತವನ್ನು ಮರು ಪಾವತಿಸುತ್ತದೆ ಎಂದು ಹೇಳಿದರು.
ಈ ಪ್ರಯೋಗಾಲಯ ನಿರ್ಮಾಣವಾದರೆ ಜಿಲ್ಲೆಯ ಜನತೆಗೆ ಬಹಳ ಉಪಯೋಗವಾಗಲಿದ್ದು, ಆದಷ್ಟು ಬೇಗ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯಜಿ.ಎಸ್‌.ಬಸವರಾಜು ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಳ್ಳಲು ಪತ್ರದ ಮುಖೇನ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಅವರಿಗೆ ಹಸ್ತಾಂತರಿಸಿದ ವೇಳೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!