ಮರ ಕಡಿಯುವುದಾದರೆ ಗಿಡ ನೆಡುವುದು ಯಾವ ಪುರುಷಾರ್ಥಕ್ಕೆ?

ಸಸಿ ನೆಟ್ಟು ಸುಮ್ನಾದ್ರೆ ಪ್ರಯೋಜನ ಇಲ್ಲಾ ರೀ...

184

Get real time updates directly on you device, subscribe now.

ಕುಣಿಗಲ್‌: ಜೂನ್‌ 5 ವಿಶ್ವ ಪರಿಸರ ದಿನಾಚರಣೆ ಎಲ್ಲೆಡೆ ಬಹುತೇಕ ಸಸಿ ನೆಡುವ ಮೂಲಕ ಆಚರಣೆ ಮಾಡಲಾಗುತ್ತದೆ, ಆದರೆ ಸಸಿ ನೆಟ್ಟು ಪೋಷಿಸಿ ಮರವಾದಾಗ ಕಡಿದು ಹಾಕುವುದೆ ಬಹುತೇಕ ಉದ್ದೇಶವಾಗುವ ಕಾರಣ ಸಸಿ ನೆಡುವ ಜಾಗವನ್ನು ಸ್ಪಷ್ಟವಾಗಿ ಗುರುತಿಸಿ ನೆಟ್ಟ ಸಸಿಗಳ ಪೋಷಣೆ ಮಾಡುವ ಮೂಲಕ ಉತ್ತಮ ಪರಿಸರ ಕಾಪಾಡುವ ಬದ್ಧತೆ ಹೊಂದಬೇಕಿದೆ ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.
ಬಹುತೇಕವಾಗಿ ಪರಿಸರ ದಿನಾಚರಣೆಯಂದು ರಸ್ತೆ ಬದಿಯಲ್ಲಿ, ಶಾಲಾ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಒಂದು ದಿನದ ಕಾರ್ಯಕ್ರಮ ಮುಗಿಸುತ್ತಾರೆ, ಆದರೆ ನೆಟ್ಟ ಸಸಿಯನ್ನು ಮರವಾಗಿಸಲು ಹೆದ್ದಾರಿ ಬದಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸಿದರೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಿವಿಧ ಹಂತದ ಸಿಬ್ಬಂದಿ ಶ್ರಮಿಸುತ್ತಾರೆ. ಹೆದ್ದಾರಿ, ರಸ್ತೆ ಬದಿಯಲ್ಲಿ ನೆಟ್ಟು ಬೆಳೆಸಲಾಗುವ ಸಸಿ ಮರವಾಗಲು ಅರಣ್ಯ ಇಲಾಖೆ ಅನುದಾನ ವೆಚ್ಚ ಮಾಡಿದರೆ, ವಿದ್ಯುತ್‌ ಸರಬರಾಜಿಗೆ ಅಡ್ಡಿ ಎಂದು ಇಂಧನ ಇಲಾಖೆ ಮುಲಾಜಿಲ್ಲದೆ ಕಡಿದು ಹಾಕುವ ಮೂಲಕ ಪರಿಸರ ಪ್ರಜ್ಞೆ ವ್ಯಕ್ತಪಡಿಸುತ್ತದೆ.
ಶಾಲಾ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಬೆಳೆಸಲಾದ ಮರಗಳನ್ನು ಕಟ್ಟಡ ನಿರ್ಮಾಣ ನೆಪದಲ್ಲಿ, ಕ್ರೀಡಾಂಗಣ ಅಭಿವೃದ್ಧಿ ನೆಪದಲ್ಲಿ ಕೊಡಲಿ ಹಾಕಲಾಗುತ್ತದೆ, ಈ ಬಾರಿಯ ಕೊರೊನ ಎರಡನೆ ಅಲೆಯಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿದ್ದು ಕಾನ್ಸೆಂಟ್ರೇಟರ್ ಗಳು, ಆಮ್ಲಜನಕ ಉತ್ಪಾದನೆ ಘಟಕಗಳ ಸ್ಥಾಪನೆ ಎಗ್ಗಿಲ್ಲದೆ ಆಗಿದೆ, ಆದರೆ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ವೃದ್ಧಿಯಾಗಲು ನೈಸರ್ಗಿಕವಾಗಿ ಗಿಡ, ಮರಗಳು ಹೆಚ್ಚಾಗಲೆಬೇಕು, ಆದರೆ ಇದು ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಇರುವುದು ವಿಶೇಷವಾಗಿ ನಗರ ಪ್ರದೇಶದಲ್ಲಿ ಹಸಿರು ವೃದ್ಧಿಯಾಗದೆ ಇರುವುದು ಹಲವು ಸಮಸ್ಯೆಗೆ ಕಾರಣವಾಗುತ್ತಿದೆ, ಕುಣಿಗಲ್‌ ಪಟ್ಟಣದಲ್ಲೆ ಕಳೆದ ಎರಡುವರ್ಷಗಳಲ್ಲಿ ಹೆದ್ದಾರಿ ಸೇರಿದಂತೆ ಕಾಲೇಜಿನಲ್ಲಿ 700ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಹಾಕಲಾಗಿದೆ. ಇದಕ್ಕೆ ಪೂರಕವಾಗಿ ಹಸಿರುಬೆಳೆಸುವ ಕ್ರಮವಾಗಿಲ್ಲ.
ಪರಿಸರ ಪ್ರಿಯರೂ, ಪುರಸಭೆ ಮಾಜಿ ಸದಸ್ಯ ಕೆ.ರಮೇಶ್‌, ಪರಿಸರ ದಿನಾಚರಣೆಯಂದು ಸರ್ಕಾರದ ಅನುದಾನದಲ್ಲಿ ಅರಣ್ಯ ಇಲಾಖೆ ಬೆಳೆಸಿದ ಸಸಿಗಳು ಎಲ್ಲೆಂದರಲ್ಲಿ ನೆಟ್ಟು ಕೈತೊಳೆದು ಕೊಳ್ಳುವ ಕೆಲಸವಾಗಬಾರದು, ಸರ್ಕಾರದ ಗೋಮಾಳ, ಹುಲ್ಲುಬನಿ ಇತರೆ ಜಾಗಗಳಲ್ಲಿ, ಕಾಲುವೆ, ಕೆರೆಗಳ ಪಕ್ಕ ಇರುವ ಬಫರ್‌ಝೋನ್‌ಗಳಲ್ಲಿ ಸಸಿನೆಟ್ಟು ತೋಪುಗಳನ್ನಾಗಿ ಬೆಳೆಸಿದಾಗ ಸರ್ಕಾರಿಜಮೀನು ಸೇರಿದಂತೆ ಕೆರೆಕಟ್ಟೆ, ಕಾಲುವೆಗಳ ಅತಿಕ್ರಮಣವೂ ತಡೆದಂತೆ ಅಗುತ್ತದೆ ಹಾಗೂ ಪರಿಸರ ರಕ್ಷಣೆ ಕೆಲಸವೂ ಅಗುವ ಮೂಲಕ ಅರ್ಥಪೂರ್ಣ ಪರಿಸರ ದಿನಾಚರಣೆ ಆಗುತ್ತದೆ ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕಿದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!