ಶಿರಾ ತಾಲ್ಲೂಕಲ್ಲಿ ಕೊರೊನಾ ಕಡಿಮೆಯಾಗಿದೆ: ರಾಜೇಶ್‌ಗೌಡ

127

Get real time updates directly on you device, subscribe now.

ಶಿರಾ: ಕಳೆದೊಂದು ವಾರದಿಂದ ಶಿರಾ ತಾಲೂಕಿನಲ್ಲಿ ಕೋವಿಡ್‌ ಪ್ರಕರಣ ಕಡಿಮೆಯಾಗುತ್ತಿವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹರ್ಷ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹೊರತುಪಡಿಸಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ಕ್ಷೇತ್ರವಾಗಿದ್ದ ಶಿರಾದಲ್ಲಿ ಸಾಕಷ್ಟು ಸಾವು ನೋವು ಕೂಡ ಕಂಡುಬಂದವು, ಇದೇ ಸಂದರ್ಭವನ್ನು ಬಳಸಿಕೊಂಡು ಮಾಜಿ ಸಚಿವರು ಶಿರಾದಲ್ಲಿ ಚಿಕಿತ್ಸೆ ಸರಿ ಇಲ್ಲ ಎನ್ನುವಂತೆ ಮಾತನಾಡಿದ್ದು ಎಲ್ಲರಿಗೂ ತಿಳಿದದ್ದೇ, ಸೋಂಕು ನಿರೀಕ್ಷೆಗೂ ಮೀರಿ ವ್ಯಾಪಿಸಿದ ಕಾರಣ ಪ್ರಕರಣ ಹೆಚ್ಚಾದವು, ಇಂತಹ ಸಂದರ್ಭದಲ್ಲಿ ಹಿರಿಯ ರಾಜಕಾರಣಿಯಾಗಿ ಅನುಭವಿಯಾಗಿ ನಮಗೆ ಮಾರ್ಗದರ್ಶನ ಮಾಡಿದ್ದರೆ ನಾವು ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೆವೆ. ಕೆಲವರಂತೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು ಪರಿಸ್ಥಿತಿ ವಿಷಮಗೊಂಡ ನಂತರ ಆಸ್ಪತ್ರೆಗೆ ದಾಖಲಾಗುತ್ತಿದ್ದರು, ಈ ಕಾರಣದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದರು.
ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್ ಗಳಲ್ಲಿ ಇರಿಸಿ ಚಿಕಿತ್ಸೆ ನೀಡಿದ್ದು ಒಂದೆರಡು ಪ್ರಕರಣಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ಬಹುತೇಕ ಪ್ರಕರಣಗಳನ್ನು ಕೇರ್‌ ಸೆಂಟರ್ ಗಳಲ್ಲಿ ಗುಣಪಡಿಸಲಾಗಿದೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ, 50 ಹಾಸಿಗೆ ಗಳಿಗೆ ಆಮ್ಲಜನಕ ಪೈಪ್ಲೈನ್‌ ಇದ್ದದ್ದನ್ನು ಈಗ 80ಕ್ಕೆ ಹೆಚ್ಚಿಸಲಾಗಿದೆ ಎಂದರು.
ಕೋವಿಡ್‌ ಆಸ್ಪತ್ರೆಯಲ್ಲಿ ಶಿರಾ ತಾಲೂಕಿನವರೇ ಅಲ್ಲದೆ ಸುತ್ತಲಿನ ಹಿರಿಯೂರು, ಮಡಕಶಿರಾ, ಮಧುಗಿರಿಯಿಂದ ಬಂದ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇವೆ, ಸದ್ಯ ಶಿರಾ ಆಸ್ಪತ್ರೆಯಲ್ಲಿ 52 ಆಕ್ಸಿಜನ್‌ ಕಾನ್ಸಂಟ್ರೇಟರ್ ಗಳು ಇವೆ, ಜಿಲ್ಲೆಯಲ್ಲೇ ಕೋವಿಡ್ ಗೆ ನಮ್ಮಲ್ಲಿ ಉತ್ತಮ ವ್ಯವಸ್ಥೆಯಿದೆ, ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಮಾತನಾಡಿ, ದೇಶದಲ್ಲಿ ಸೋಂಕು ಹೆಚ್ಚಲು ಕಾಂಗ್ರೆಸ್‌ ಕಾರಣ ಎಂದು ನೇರವಾಗಿ ಆರೋಪಿಸಿದರು.
ಕೋವಿಡ್‌ ತಡೆಗಾಗಿ ಅಭಿವೃದ್ಧಿ ಪಡಿಸಲಾದ ವ್ಯಾಕ್ಸಿನ್ ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜನರು ವ್ಯಾಕ್ಸಿನ್‌ ಪಡೆಯಲು ಹಿಂದೇಟು ಹಾಕುವಂತೆ ಮಾಡುವ ಮೂಲಕ ಕಾಂಗ್ರೆಸ್‌ ಮುಖಂಡರು ಸೋಂಕು ವ್ಯಾಪಿಸಲು ಕಾರಣರಾಗಿದ್ದಾರೆ ಎಂದರು.
ಸರ್ಕಾರ ವ್ಯಾಕ್ಸಿನೇಷನ್‌ ಪಡೆಯುವಂತೆ ಮನವಿ ಮಾಡಿತ್ತು, ಆದರೆ ಕಾಂಗ್ರೆಸ್‌ ಪಕ್ಷದ ಅಪಪ್ರಚಾರದಿಂದ ಜನರು ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಷನ್‌ ಪಡೆಯದೆ ಸೋಂಕು ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಕೋವಿಡ್‌ ಪರಿಸ್ಥಿತಿಗೆ ಕಾಂಗ್ರೆಸ್‌ ಪಕ್ಷವೇ ನೇರ ಕಾರಣ ಎಂದು ಆರೋಪಿಸಿದರು.
ಎಂ ಎಲ್ ಸಿ ಚಿದಾನಂದಗೌಡ ಮಾತನಾಡಿ ಕೋವಿಡ್‌ ಸಂಕಷ್ಟದಲ್ಲಿ ರಾಜ್ಯದ ಆದಾಯವೇ ಕುಸಿದಿದ್ದರೂ ಶಾಸಕರ ಮನವಿ ಮೇರೆಗೆ ಖಾಸಗಿ ಶಿಕ್ಷಕರ ನೆರವಿಗಾಗಿ 5000 ಪರಿಹಾರ ಘೋಷಣೆ ಮಾಡಿದ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಸ್ವಾಗತ ಕೋರಿದರು. ಇದರಿಂದ ರಾಜ್ಯದ ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡಲಿರುವ ಸುಮಾರು ಮೂರು ಲಕ್ಷ ಖಾಸಗಿ ಶಿಕ್ಷಕರಿಗೆ ಅನುಕೂಲವಾಗಲಿದೆ, ಕೇಂದ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಇರದೇ ಹೋಗಿದ್ದರೆ ಪ್ರಸ್ತುತ ಪರಿಸ್ಥಿತಿ ಊಹಿಸಿಕೊಳ್ಳುವುದು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದರು.

ದಿನಸಿ ಕಿಟ್‌ ವಿತರಣೆ:
ಇದೇ ಸಂದರ್ಭದಲ್ಲಿ ನಾರು ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಪತ್ರಕರ್ತರಿಗೆ ದಿನಸಿ ಕಿಟ್‌ ಗಳನ್ನು ವಿತರಿಸಿದರು. ರೇಷ್ಮೆ ಉದ್ಯಮಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ, ಬಿಜೆಪಿ ನಗರಾಧ್ಯಕ್ಷ ವಿಜಯರಾಜ್‌, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಕೃಷ್ಣಮೂರ್ತಿ, ಬಸವರಾಜು, ನರಸಿಂಹರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!