ಕೊರಟಗೆರೆ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನನ್ನಆತ್ಮೀಯ ಸ್ನೇಹಿತರು, ರಾಜಕೀಯದಲ್ಲಿ ಪಕ್ಷವೇ ಬೇರೆ ಅಭಿವೃದ್ಧಿಯೇ ಬೇರೆ, ಸಿದ್ದರಬೆಟ್ಟ ಶ್ರೀಗಳ ಆಶಯ ಮತ್ತು ಪರಮೇಶ್ವರ್ ಮನವಿಯಂತೆ ಕೊರಟಗೆರೆ ಕ್ಷೇತ್ರಕ್ಕೆ ಬೇಕಾದ 5 ಸಾವಿರ ಮನೆಯನ್ನು ತ್ವರಿತವಾಗಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಕಲ್ಪತರು ನಾಡಿನ ಸಂಜೀವಿನಿ ಶ್ರೀಕ್ಷೇತ್ರ ಸಿದ್ದರಬೆಟ್ಟ ಮಠಕ್ಕೆ ಶನಿವಾರ ಭೇಟಿ ನೀಡಿದ ವಸತಿ ಸಚಿವ ವಿ.ಸೋಮಣ್ಣ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿ, 2023ಕ್ಕೆ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಸೂರು ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸು ನನಸಾಗಲಿದೆ. ಸರಕಾರದ ಸಂಪನ್ಮೂಲಕ್ಕೆ ತಕ್ಕಂತೆ ಜನರಿಗೆ ಪ್ರತಿಫಲ ಸಿಗಲಿದೆ, ಜನತೆಗೆ ನಮ್ಮ ಸರಕಾರ ಸುಳ್ಳಿನ ಭರವಸೆ ನೀಡುವುದಿಲ್ಲ, ಈಗಾಗಲೇ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ವಸತಿ ಇಲಾಖೆಯಿಂದ ನೀಡಿರುವ 10 ಲಕ್ಷ ಮನೆಯನ್ನು ಇನ್ನೇರಡು ವರ್ಷದಲ್ಲಿ ಮುಗಿಸುವ ಭರವಸೆ ನೀಡಿದರು.
ಸಂಜೀವಿನಿ ಕ್ಷೇತ್ರದಲ್ಲಿ ನೆಲೆಸಿರುವ ಸಿದ್ದರಬೆಟ್ಟ ಶ್ರೀಗಳು ಪವಾಡ ಪುರುಷರಾಗಿ ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕೆಲಸ ಮಾಡುತ್ತಿದ್ದಾರೆ, ಮಾನವೀಯ ಮೌಲ್ಯದ ಪ್ರತಿರೂಪವೇ ಸಿದ್ದರಬೆಟ್ಟ ಶ್ರೀಗಳಾಗಿ ಗುರುತಿಸಿ ಕೊಂಡಿದ್ದಾರೆ. ಸಿದ್ದಗಂಗೆ ಕ್ಷೇತ್ರದ ನಡೆದಾಡುವ ಶ್ರೀಗಳ ಹಾದಿಯಲ್ಲಿ ಸಿದ್ದರಬೆಟ್ಟ ಶ್ರೀಗಳ ಪ್ರತಿಯೊಂದು ಕೆಲಸವು ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿದ್ದರಬೆಟ್ಟ ಕ್ಷೇತ್ರದ ಪೀಠಾಧ್ಯಕ್ಷ ವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಶ್ರೀಮಠದ ಭಕ್ತರಾಗಿ ವಸತಿ ಸಚಿವ ವಿ.ಸೋಮಣ್ಣ ಆಗಮಿಸಿದ್ದಾರೆ. ಕೊರಟಗೆರೆ ಕ್ಷೇತ್ರದ ಬಡಜನರಿಗೆ ಅವಶ್ಯಕತೆ ಇರುವ ವಸತಿ ಯೋಜನೆಯ ಬಗ್ಗೆ ಸಚಿವರ ಬಳಿ ಪ್ರಸ್ತಾಪ ಮಾಡಿದ್ದೇನೆ. ಅಂಬೇಡ್ಕರ್ ಮತ್ತು ಬಸವ ಯೋಜನೆ ಪ್ರಾರಂಭಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿದ್ದರಬೆಟ್ಟ ಶ್ರೀಗಳ ದರ್ಶನ ಪಡೆದ ವಸತಿ ಸಚಿವ ವಿ.ಸೋಮಣ್ಣ ಶ್ರೀಮಠದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ತುಂಬಾಡಿಯಿಂದ ಸಿದ್ದರಬೆಟ್ಟ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮರುಚಾಲನೆ ನೀಡುವ ಭರವಸೆ ನೀಡಿದರು. ತಹಶೀಲ್ದಾರ್ ಗೋವಿಂದರಾಜು, ತಾಪಂ ಇಓ ಶಿವಪ್ರಕಾಶ್, ಸಿಪಿಐ ಸಿದ್ದರಾಮೇಶ್ವರ, ಅರಣ್ಯಾಧಿಕಾರಿ ಸುರೇಶ್ ಇತರರು ಇದ್ದರು.
ಕೊರಟಗೆರೆ ಕ್ಷೇತ್ರಕ್ಕೆ 5 ಸಾವಿರ ಮನೆ: ಸೋಮಣ್ಣ ಭರವಸೆ
Get real time updates directly on you device, subscribe now.
Next Post
Comments are closed.