ಮಧುಗಿರಿ: ಈ ಜಗತ್ತನ್ನು ಕಾಡುತ್ತಿರುವ ಕಣ್ಣಿಗೆ ಕಾಣದ ವೈರಾಣು ಕೊರೊನಾ ಮಹಾಮಾರಿ ಬಹುಬೇಗ ದೂರವಾಗಿ ಜನರ ಬದುಕು ಹಸನಾಗಲಿ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸಿಪಿಸಿ ಸಮುದಾಯ ಭವನದಲ್ಲಿ ತಾಲೂಕು ಕುಂಚಿಟಿಗರ ಸಂಘ ಮತ್ತು ಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಸ್ ಚಾಲಕರಿಗೆ, ನಿರ್ವಾಹಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲನೇ ಅಲೆಯಲ್ಲಿ ಸರ್ಕಾರ ಎಚ್ಚರವಾಗಿತ್ತು, ಕೊರೊನಾ ಸುಮ್ಮನಿತ್ತು, ಎರಡನೇ ಅಲೆಯಲ್ಲಿ ಸರ್ಕಾರ ಎಚ್ಚರ ತಪ್ಪಿದ್ದಕ್ಕೆ ಕೊರೊನಾ ಆರ್ಭಟ ಮುಂದುವರಿಸಿತು, ಈ ಕೊರೊನಾ ಮಹಾಮಾರಿಯಿಂದ ಎಲ್ಲರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು ದುಡಿಯುವ ವರ್ಗಕ್ಕೆ ಭಾರಿ ಹೊಡೆತ ಬಿದ್ದಿದೆ, ಬಸ್ ಚಾಲಕರು, ನಿರ್ವಾಹಕರ ಜೊತೆಗೆ ಮಾಲೀಕರು ಸಹ ದುಡಿಮೆಯಿಲ್ಲದೆ ಕೈಕಟ್ಟಿ ಕೂರುವಂತಾಗಿದೆ. ತಿಂಗಳ ಸಾಲದ ಕಂತುಗಳನ್ನು ಕಟ್ಟಲಾಗುತ್ತಿಲ್ಲ, ಇಂತಹ ಕಷ್ಟಕಾಲದಲ್ಲಿ ಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಆಹಾರ ಕಿಟ್ ವಿತರಣೆ ಸೇವೆ ಅಭಿನಂದನೀಯ ಎಂದರು.
ಜನರು ಮಾಸ್ಕ್, ಸ್ಯಾನಿಟೈಸರ್ ಬಳಸುವ ಜೊತೆಗೆ ಮಾನಸಿಕ ಧೈರ್ಯದಿಂದ ಕೊರೊನಾ ಎದುರಿಸಬೇಕು, ಲಸಿಕೆ ವಿಚಾರದಲ್ಲಿ ತುಂಬಾ ಗೊಂದಲಗಳಿದ್ದು, ಗ್ರಾಮೀಣ ಭಾಗದ ಜನರಿಗೆ ಲಸಿಕೆ ಪಡೆಯುವಂತೆ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು, ಶ್ರೀಮಂತ ವರ್ಗದವರು ಇಂತಹ ಕಷ್ಟದ ಸಮಯದಲ್ಲಿ ಬಡಜನರಿಗೆ ದಾನ ಮಾಡಬೇಕು ಎಂದರು.
ಅಸಂಘಟಿತ ವಲಯಕ್ಕೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರದ ಹಣ ತರುವಷ್ಟರಲ್ಲಿ ಅಷ್ಟೇ ಹಣ ಖಾಲಿಯಾಗುತ್ತದೆ, ಸರ್ಕಾರ ಜನರ ಬದುಕಿನ ಜೊತೆ ಆಟವಾಡಬಾರದು ಎಂದರು.
ಇಂತಹ ಸನ್ನಿವೇಶದಲ್ಲಿ ಅನೇಕ ಕಡೆ ಮುಸ್ಲಿಂ ಸಮುದಾಯದವರು ಹಿಂದೂ ಸಮುದಾಯದವರ ಅಂತ್ಯಕ್ರಿಯೆ ಮಾಡುತ್ತಿದ್ದು ಅವರ ನಿಸ್ವಾರ್ಥ ಸೇವೆಗೆ ಅಭಿನಂದನೆ ಎಂದರು.
ಶಾಸಕ ಎಂ.ವಿ.ವೀರಭಧ್ರಯ್ಯ ಮಾತನಾಡಿ, ಕೊರೊನಾ ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಪರೀಕ್ಷೆ ಮಾಡಿಸಿಕೊಳ್ಳಬೇಕು, ಎರಡನೇ ಅಲೆಯಲ್ಲಿ ಅನೇಕ ಸಾವು ನೋವುಗಳಾಗಿದ್ದು, ಮೂರನೆ ಅಲೆಯು ಇನ್ನೂ ಭೀಕರವಾಗಿದ್ದು ಮಕ್ಕಳ ಮೇಲೆ ಪರಿಣಾಮ ಬೀರಬಹುದೆಂಬ ಮಾತುಗಳು ಕೇಳಿಬರುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು, ಲಸಿಕೆಯ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ವದಂತಿಗೆ ಜನರು ಕಿವಿಗೊಡದೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಎಲ್ಲವನ್ನೂ ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ, ಕೊರೊನಾ ತಡೆಗಟ್ಟಲು ಜನರು ಸಹ ಜಾಗೃತರಾಗಬೇಕು, ಕುಂಚಿಟಿಗರ ಸಂಘ ಮತ್ತು ಲಕ್ಷ್ಮೀಚಾರಿಟಬಲ್ ಟ್ರಸ್ಟ್ ಸೇವೆ ಶ್ಲಾಘನೀಯ ಎಂದರು.
ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವೇ ಕೊರೊನಾಗೆ ಸದ್ಯದ ಮದ್ದು, ಕೊರೊನಾಗೆ ಇನ್ನೂ ಶಾಶ್ವತ ಲಸಿಕೆ ಇಲ್ಲ, ಕೋವಿಡ್ ತಡೆಯುವ ಉದ್ದೇಶದಿಂದ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ, ತಾಲೂಕು ಕುಂಚಿಟಿಗ ವಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ರಾಜಶೇಖರ್, ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು, ನಾರಾಯಣ್, ಕುಂಚಿಟಿಗ ಸಂಘದ ಕಾರ್ಯದರ್ಶಿ ಜಗಣ್ಣ, ಜಿ.ಜಯರಾಮಯ್ಯ, ಉಮಣ್ಣ, ರಾಮಚಂದ್ರಪ್ಪ, ಮಲ್ಲಿಕಾರ್ಜುನಯ್ಯ, ಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳಾದ ಕೀರ್ತಿ ರಾಜಣ್ಣ, ರಾಗಿಣಿ ಮತ್ತಿತರರು ಹಾಜರಿದ್ದರು.
Get real time updates directly on you device, subscribe now.
Prev Post
Comments are closed.