ಕಾರ್ಮಿಕರಿಗೆ ವಂಚನೆಯಾಗದಂತೆ ಪರಿಹಾರ ನೀಡಿ: ಡೀಸಿ

605

Get real time updates directly on you device, subscribe now.

ತುಮಕೂರು: ಕೋವಿಡ್‌ ಎರಡನೇ ಅಲೆ ಇಡೀ ರಾಜ್ಯವನ್ನೆ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಅಸಂಘಟಿತ ವಲಯದ ಅನೇಕ ಕಾರ್ಮಿಕರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್‌ ಅನ್ನು ವಂಚನೆಯಾಗದಂತೆ ಸಕಾಲಕ್ಕೆ ಅರ್ಹರಿಗೆ ವಿತರಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.
ತಮ್ಮ ಕಚೇರಿಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ, ಕಾರ್ಮಿಕ ಮುಖಂಡರು, ಅಸಂಘಟಿತ ಕಾರ್ಮಿಕ ಮುಖಂಡರೊಂದಿಗೆ ಜೂಮ್‌ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿರುವ 11 ಅಸಂಘಟಿತ ಕಾರ್ಮಿಕ ವಲಯದ ಫಲಾನುಭವಿಗಳಿಗೆ ಕಡ್ಡಾಯವಾಗಿ ಈ ಕೋವಿಡ್‌ ಪರಿಹಾರ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಪರಿಹಾರ ಸೌಲಭ್ಯ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು, ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಇದುವರೆಗೂ ನೋಂದಣಿಯಾಗದೆ ಇರುವ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವಂತೆ ಕ್ರಮ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉದ್ಯೋಗ ಪ್ರಮಾಣ ಪತ್ರ ನೀಡುವಲ್ಲಿ ಇಲಾಖೆಗಳು ಸಹಕರಿಸುತ್ತಿಲ್ಲ, ಈ ಗೊಂದಲ ಪರಿಹಾರ ಮಾಡಬೇಕು ಎಂಬ ಕಾರ್ಮಿಕ ಮುಖಂಡರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ಹಿಂದೆ ಕೋವಿಡ್‌ ಪರಿಹಾರ ಪಡೆಯುವಾಗ ಸಂಬಂಧಿಸಿದ ಇಲಾಖೆಗಳು ನೀಡಿದ್ದ ಉದ್ಯೋಗ ಪ್ರಮಾಣ ಪತ್ರವನ್ನು ಈ ಬಾರಿಯೂ ನೀಡಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು, ಫಲಾನುಭವಿಗಳು, ಕಾರ್ಮಿಕ ಮುಖಂಡರು ಸಹಾಯ ಕೋರಿ ಬಂದಾಗ ಕೂಡಲೇ ಸ್ಪಂದಿಸಿ ಉದ್ಯೋಗ ಪ್ರಮಾಣ ನೀಡುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಿದರು.
ಕಾರ್ಮಿಕರಿಗೆ ನಾಗರಿಕ ಸೇವಾ ಕೇಂದ್ರಗಳಲ್ಲಿ ಪ್ರಮಾಣ ಪತ್ರಗಳನ್ನು ನೀಡುವಾಗ ದುಪ್ಪಟ್ಟು ಹಣ ಪಡೆಯದೆ ನಿಗದಿತ ಸೇವಾ ಶುಲ್ಕ ಮಾತ್ರ ಪಡೆಯಬೇಕು, ದುಪ್ಪಟ್ಟು ಹಣ ಪಡೆಯುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಸಂಘಟಿತ ವಲಯದ ಕಾರ್ಮಿಕರು ಯಾವುದೇ ಆಮಿಷಕ್ಕೆ ಒಳಗಾಗದೇ ದಲ್ಲಾಳಿಗಳ ನೆರವು ಪಡೆಯಬಾರದು, ಸರ್ಕಾರದ ನಿರ್ದೇಶನದಂತೆ ಸೇವಾ ಸಿಂಧು ಪೋರ್ಟಲ್ ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಲ್ಲೂಕು ಮಟ್ಟದ ಕಾರ್ಮಿಕ ನೀರಿಕ್ಷಕರು ಆಯಾ ತಾಲ್ಲೂಕಿನ ನಾಗರಿಕ ಸೇವಾ ಕೇಂದ್ರಗಳ ಮೇಲೆ ನಿಗಾ ವಹಿಸುವುದಲ್ಲದೆ ಇಲಾಖೆಯ ಸೌಲಭ್ಯಗಳ ಕುರಿತು ಕಾರ್ಮಿಕರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಅಸಂಘಟಿತ 11 ವಲಯಗಳ ಕಾರ್ಮಿಕರು ಸರ್ಕಾರದ ಈ ಪರಿಹಾರಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್‌ ಎಂ. ಆಲದಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ 93,692 ಕಟ್ಟಡ ಕಾರ್ಮಿಕರು ಹಾಗೂ 11 ಅಸಂಘಟಿತ ವಲಯದ ಸುಮಾರು 8,770 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಸರ್ಕಾರದ ಆದೇಶದನ್ವಯ ಜೂನ್‌ 7 ರಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಸಂಘಟಿತ 11 ವಲಯದ ಕಾರ್ಮಿಕರು ಸೇವಾಸಿಂಧು ಆಪ್ ನಲ್ಲಿ ಜುಲೈ 31ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ಅಲ್ಪಸಂಖ್ಯಾತ ಕಲ್ಯಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬಿರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸೇರಿದಂತೆ ಎಪಿಎಂಸಿ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಮುಖಂಡರು ಇದ್ದರು.

Get real time updates directly on you device, subscribe now.

Comments are closed.

error: Content is protected !!