ತುರುವೇಕೆರೆ: ಕೊರೊನಾ ಲಕ್ಷಣ ಕಂಡು ಬಂದರೆ ಹೋಂ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯವುದನ್ನು ಬಿಟ್ಟು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಾಗುವ ಮೂಲಕ ಕೊರೊನಾದಿಂದ ಮುಕ್ತರಾಗುವಂತೆ ತಾಲೂಕಿನ ನಾಗರಿಕರಿಗೆ ಶಾಸಕ ಮಸಾಲ ಜಯರಾಮ್ ಸಲಹೆ ನೀಡಿದರು.
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಹೊರ ವಲಯದ ತಮ್ಮ ಗೃಹಕಚೇರಿಯಲ್ಲಿ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ನಂತರ ಮಾತನಾಡಿ, ತಾಲೂಕಿನ ಮುರಾರ್ಜಿ ವಸತಿ ಶಾಲೆ ಹಾಗೂ ಬಿಸಿಎಂ ವಸತಿ ಶಾಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಕೋವಿಡ್ ಕೇರ್ ಗೆ ದಾಖಲಾಗಿದ್ದ 5980 ಮಂದಿ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ತಾಲೂಕಿನಲ್ಲಿ 11 ಹಾಟ್ ಸ್ಪಾಟ್ಗಳು, 4 ರೆಡ್ ಜೋನ್ ಗಳನ್ನು ಗುರುತಿಸಲಾಗಿತ್ತು, ಈ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ತ್ವರಿತ ಚಿಕಿತ್ಸೆಯಿಂದ ಕೊರೊನಾದಿಂದ ಗುಣಮುಖರಾಗುತ್ತಿದ್ದಾರೆ. ಕೋವಿಡ್ ಸೋಂಕು ಹರಡುವಿಕೆಯ ಪ್ರಮಾಣ ಗಣನೀಯವಾಗಿ ತಗ್ಗುತ್ತಿದ್ದು, ಈನಿಟ್ಟಿನಲ್ಲಿ ಸಾರ್ವಜನಿಕರು ಕೋವಿಡ್ ನಿಯಮಪಾಲಿಸಿ ತಾಲೂಕನ್ನು ಕೊರೊನಾದಿಂದ ಮುಕ್ತಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಕೊರೊನಾ 3ನೇ ಅಲೆ ಅತ್ಯಂತ ಭೀಕರವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ 3 ನೇ ಅಲೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಲು ಪೂರಕ ವ್ಯವಸ್ಥೆ ಸಜ್ಜುಗೊಳಿಸಲಾಗುತ್ತಿದೆ. ಆಸ್ಪತ್ರೆಯ ಆವರಣದಲ್ಲಿ ಹೈಡಲ್ ಬರ್ಗ್ ಸಿಮೆಂಟ್ ಕಂಪೆನಿಯವರು ಆಕ್ಸಿಜನ್ ಪ್ಲಾಂಟ್ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹಣ ನೀಡಲಾಗಿದೆ. ರವಿಶಂಕರ್ ಗುರೂಜಿ ಪ್ರತಿಷ್ಠಾನದಿಂದ ತಾಲೂಕಿಗೆ 5 ಆಕ್ಸಿಜನ್ ಕಾನ್ಸಂಟೇಟರ್ ಲಭ್ಯವಾಗಲಿದೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕ ಕಾಲದಲ್ಲಿ 150 ಬೆಡ್ ಗಳಿಗೆ ಆಮ್ಲಜನಕ ಸಂಪರ್ಕ ದೊರಕಲಿದೆ, 3ನೇ ಅಲೆ ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಹೆಚ್ಚು ಎಂದು ಹೇಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ತಜ್ಞರ ಹಾಗೂ ವೈದ್ಯರ ಸಹಯೋಗದಲ್ಲಿ ಪೋಷಕರಿಗೆ 3ನೇ ಅಲೆಯಿಂದ ಪಾರಾಗುವ ಕುರಿತು ಮಾಹಿತಿ ನೀಡಬೇಕೆಂಬ ಚಿಂತನೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಯೀಮುನ್ನಿಸ್ಸಾ, ಡಿವೈಎಸ್‌ಪಿ ರಮೇಶ್, ಡಾ.ಸುಪ್ರಿಯಾ, ಡಾ.ಶ್ರೀಧರ್, ಸಿಪಿಐ ನವೀನ್, ಪಿಎಸ್‌ಐ ಪ್ರೀತಂ, ಕೋವಿಡ್ ನೋಡಲ್ ಅಧಿಕಾರಿ ರಂಗಧಾಮಯ್ಯ, ಆರೋಗ್ಯ ಇಲಾಖೆಯ ಬೋರೇಗೌಡ ಇತರರು ಇದ್ದರು.
ಕೇರ್ ಸೆಂಟರ್ ಗೆ ದಾಖಲಾಗಿ ಕೊರೊನಾ ಮುಕ್ತರಾಗಿ: ಮಸಾಲೆ
Get real time updates directly on you device, subscribe now.
Comments are closed.