ತಿಪಟೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಶುರುವಾಗಿದ್ದು, ಈಗಾಗಲೇ ರಾಜ್ಯ ಪ್ರವೇಶಿಸಿರುವ ನೈರುತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿಗೂ ಕಾಲಿಟ್ಟಿದೆ, ಹೀಗಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವರುಣನ ಆಶೀರ್ವಾದ ದೊರೆತಿದೆ.
ಮುಂಗಾರು ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿ, ಕೃಷಿ ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೆಸರು, ಉದ್ದು, ಎಳ್ಳು ಕಾಳು ಬೆಳೆದು ತನ್ನ ನಿತ್ಯ ಜೀವನ ಸಾಗಿಸಲು ಅಣಿಯಾದರೆ ರೈತನಿಗೆ ನವಿಲುಗಳು ನಿದ್ದೆಗೆಡಿಸುತ್ತಿವೆ.
ಹೌದು.. ಇತ್ತೀಚಿನ ವರ್ಷಗಳಲ್ಲಿ ನವಿಲುಗಳಿಂದ ಸಂಭವಿಸುವ ಬೆಳೆಹಾನಿ ಪ್ರಕರಣ ಹೆಚ್ಚಾಗುತ್ತಿದ್ದು, ಪರಿಹಾರ ಕಾಣದೆ ರೈತರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ, ತುಮಕೂರು, ಶಿರಾ, ಪಾವಗಡ ಸೇರಿದಂತೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ನವಿಲು ಸಂತತಿ ಹೆಚ್ಚುತ್ತಿದೆ, ಹಾಗೇ ತಿಪಟೂರಿನಲ್ಲಿ ನವಿಲುಗಳು ರೈತನ ಬೆಳೆಗೆ ಅಡ್ಡಿ ಉಂಟು ಮಾಡುತ್ತಿವೆ.
ತಾಲೂಕಿನ ಕಿಬ್ಬನಹಳ್ಳಿ, ನೊಣವಿನಕೆರೆ ಹಾಗೂ ಹೊನ್ನಾವಳ್ಳಿ ಹೋಬಳಿಗಳಲ್ಲಿ ರೈತರ ಜಮೀನು ಆಸುಪಾಸಿನಲ್ಲಿ ಸಣ್ಣ ಕಾಡುಗಳಿದ್ದು, ಇಲ್ಲಿ ನವಿಲುಗಳ ಸಂಖ್ಯೆ ಅಧಿಕವಿದೆ. ನವಿಲುಗಳು ರೈತರ ತೋಟದ ಸಾಲುಗಳು ಹಾಗೂ ಕೃಷಿ ಜಮೀನಿಗೆ ಲಗ್ಗೆ ಇಡುತ್ತಿವೆ. ಅಲ್ಲದೆ ಬೆಳೆ ಹಾಳು ಮಾಡುತ್ತಿವೆ, ಅರಣ್ಯ ಇಲಾಖೆಯಿಂದ ನವಿಲು ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಹಾಗೂ ಪರಿಹಾರವನ್ನೂ ಕಂಡುಕೊಂಡಿಲ್ಲ, ಹೀಗಾಗಿ ನವಿಲುಗಳ ಹಾವಳಿಗೆ ಕಡಿವಾಣ ಇಲ್ಲದಂತಾಗಿದೆ, ಕೂಡಲೇ ಅರಣ್ಯ ಇಲಾಖೆ ನವಿಲುಗಳಿಂದ ಸಂಭವಿಸುವ ಬೆಳೆಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ.
ಹೊಲದತ್ತ ನಗರದ ಜನತೆ..
ಬೆಂಗಳೂರಿನಲ್ಲಿ ನೆಲೆಸಿದ್ದ ಗ್ರಾಮೀಣ ಪ್ರದೇಶದ ಜನರು ಕೊರೊನಾ ಲಾಕ್ ಡೌನ್ ನಿಂದ ತಮ್ಮ ಊರುಗಳಿಗೆ ಬಂದಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದು ಕಂಡು ಬರುತ್ತಿದೆ.
ಕೃಷಿ ಇಲಾಖೆ ವತಿಯಿಂದ 4 ಎಕರೆ ಜಮೀನಿಗೆ ಮುಂಗಾರು ಬೆಳೆ ಹೆಸರು ಕಾಳನ್ನು ಬಿತ್ತಿದ್ದು ಹತ್ತಾರು ನವಿಲು ಬಿತ್ತಿದ ಬೀಜ ತಿಂದು ಹಾಕಿವೆ. ಅರಣ್ಯ ಇಲಾಖೆಗೆ ಈ ಬಗ್ಗೆ ಪ್ರಶ್ನಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ತಾತ್ಸಾರದ ಉತ್ತರ ನೀಡುತ್ತಾರೆ.
ನ್ಯಾಕೇನಹಳ್ಳಿ ಸುರೇಶ್, ರೈತ
ತಾಲೂಕಿನಲ್ಲಿ ಉತ್ತಮ ಮಳೆ ಆಗಿದೆ, ಫಸಲು ಬರುವ ಸಮಯದಲ್ಲಿ ಮಳೆ ಬರಬೇಕಿದೆ, ಇಲ್ಲಿಯವರೆಗೆ ಜನವರಿಯಿಂದ ಮೇ ಅಂತ್ಯದವರೆಗೆ 233 ಮಿ.ಮೀ. ಮಳೆಯಾಗಿದ್ದು ವಾಡಿಕೆಗಿಂತ 174 ಮಿ.ಮೀ. ಜಾಸ್ತಿಯಾಗಿದೆ. ತಾಲೂಕಿನಲ್ಲಿ 3800 ಹೆಕ್ಟೇರ್ ಬಿತ್ತನೆ ಆಗಿದೆ. ಮುಂಗಾರು ಉತ್ತಮ ಮಳೆ ಅವಶ್ಯಕತೆ ಇದೆ, ನಮ್ಮ ಇಲಾಖೆಯಲ್ಲಿ 5 ಕ್ವಿಂಟಾಲ್ ಉದ್ದು, 16.5 ಹಲಸಂದೆ, 3.5 ತೊಗರಿ ವಿತರಿಸಲಾಗಿದ್ದು, ಉತ್ತಮ ಬಿತ್ತನೆಯು ಆಗಿದೆ.
ಕೆಂಗೇಗೌಡ, ಕೃಷಿ ಇಲಾಖೆ, ತಿಪಟೂರು.
ತಾಲೂಕಿನ ರೈತರು ನವಿಲುಗಳ ಹಾನಿಗೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಹಾವಳಿ ತಡೆಗಟ್ಟಲು ನಮ್ಮ ಇಲಾಖೆಗೆ ರೈತರು ಅರ್ಜಿ ಸಲ್ಲಿಸಿದರೆ ಮೇಲಾಧಿಕಾರಿಗಳ ಗಮನಕ್ಕೆ ತರಬಹುದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರಾಕೇಶ್, ಅರಣ್ಯ ವಲಯ ಅಧಿಕಾರಿ, ತಿಪಟೂರು.
ತಾಲೂಕಿನಲ್ಲಿ ನವಿಲುಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಸರ್ಕಾರ ಅರಣ್ಯ ಇಲಾಖೆಗೆ ಆದೇಶ ನೀಡಿ ಅರಣ್ಯ ಪ್ರದೇಶದ ಒಂದು ಜಾಗವನ್ನು ಗುರುತಿಸಿ ಅಲ್ಲಿ ನವಿಲುಧಾಮ ಮಾಡಬಹುದು, ಇದರಿಂದ ನವಿಲುಗಳನ್ನು ಸಂರಕ್ಷಣೆ ಮಾಡಿದಂತೆಯೂ ಆಗುತ್ತದೆ, ಜೊತೆಗೆ ಪ್ರವಾಸಿ ತಾಣವಾಗಿ ಮಾರ್ಪಡುತ್ತದೆ.
ಸಿದ್ದೇಶ್, ಪ್ರಾಣಿ ಪಕ್ಷಿ ಪ್ರೇಮಿ, ತಿಪಟೂರು.
Comments are closed.