ಜನತೆ ಹೇಮಾವತಿ ನೀರಿನ ಕುರಿತು ಆತಂಕಗೊಳ್ಳುವುದು ಬೇಡ: ಜ್ಯೋತಿಗಣೇಶ್

ಬುಗುಡನಹಳ್ಳಿ ಕೆರೆಗೆ ಬಂದ ಹೇಮೆ ನೀರು ಪರೀಕ್ಷೆ

692

Get real time updates directly on you device, subscribe now.

ತುಮಕೂರು: ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ನಾಲೆಯು ಜಿಲ್ಲೆಯ ತಿಪಟೂರಿನ ಮೂಲಕ ಹಾದು ತುಮಕೂರಿನ ಬುಗುಡನಹಳ್ಳಿ ಕೆರೆಗೆ ಹರಿಯುತ್ತಿರುವ ನೀರಿನಲ್ಲಿ ಕೊಳಚೆ ಮಿಶ್ರಿತ ಕಲುಷಿತ ನೀರು ಸೇರಿ ಹರಿಯುತ್ತಿದೆ ಎಂಬ ಹಿನ್ನಲೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಬುಗುಡನಹಳ್ಳಿ ಶುದ್ಧೀಕರಣ ಘಟಕ ಮತ್ತು ಹೇಮಾವತಿ ನೀರು ಹರಿಯುವ ಕಾಲುವೆ ಬಳಿ ಭೇಟಿ ನೀಡಿ ವೀಕ್ಷಿಸಿ, ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು.
ಸೋಮವಾರ ತಿಪಟೂರು ನಾಲೆಯಿಂದ ಕಲುಷಿತ ನೀರು ಹೇಮಾವತಿ ನಾಲೆಯಲ್ಲಿ ಮಿಶ್ರಣಗೊಂಡು ಹರಿಯುತ್ತಿದೆ ಎಂಬ ದೊಡ್ಡ ಆಘಾತ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು, ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ಕಲುಷಿತ ನೀರು ಹೇಮೆ ನೀರಿನ ಜೊತೆ ಬುಗುಡನಹಳ್ಳಿ ಕೆರೆ ಸೇರುತ್ತಿದೆ ಎಂದು ತಿಳಿಸಿದ್ದರು, ಇದರಿಂದ ತುಮಕೂರಿನ ಜನತೆ ಗಾಬರಿಗೊಂಡ ಹಿನ್ನಲೆಯಲ್ಲಿ ಶಾಸಕರು ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳನ್ನು ಕರೆದೊಯ್ದು ಪರಿಶೀಲನೆ ನಡೆಸಿದರು.
ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಪ್ರವೇಶಿಸುವ ಮುನ್ನ ನೀರಿನ ಮಾದರಿ ಸಂಗ್ರಹಿಸಿ, ಕೆರೆ ಒಳಗೆ ನೀರಿನ ಮಾದರಿ ಸಂಗ್ರಹ, ಜಾಕ್ವೆಲ್‌ ಬಳಿ ನೀರಿನ ಮಾದರಿ ಸಂಗ್ರಹ, ವಾಟರ್‌ ಟ್ರೀಟ್ ಮೆಂಟ್‌ ಆದ ಮೇಲೆ ನೀರಿನ ಮಾದರಿ ಸಂಗ್ರಹ, ನಗರದಲ್ಲಿರುವ ನಾಲ್ಕೈದು ಗ್ರೌಂಡ್‌ ಲೆವೆಲ್‌ ಸ್ಟೋರೇಜ್‌ ರಿಜರ್ವಾಯರ್ ಗಳಲ್ಲೂ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಎಂದು ಸ್ಥಳದಲ್ಲಿದ್ದ ನಿವೃತ್ತ ಕನ್ಸಲ್ಟೆಂಟ್‌ ಅಧಿಕಾರಿ ಪೊ.ಸದಾಶಿವಯ್ಯ ಹಾಗೂ ಮಾಲಿನ್ಯ ಮಂಡಳಿ ಅಧಿಕಾರಿಗಳು, ಇಂಜಿನಿಯರ್ ಗಳಿಗೆ ಸೂಚಿಸಿದರು.
ಹೀಗೆ ಸಂಗ್ರಹಿಸಿದ ನೀರಿನ ಮಾದರಿ ಪರೀಕ್ಷಿಸಲು ಐದಾರು ದಿನ ಬೇಕಾಗುತ್ತದೆ. ಇನ್ನೂ ಕೆಲವು ಪರೀಕ್ಷೆ ವರದಿ ತಕ್ಷಣ ಸಿಗುತ್ತದೆ. ಆದುದರಿಂದ ಇನ್ನೆರಡು ಮೂರು ದಿನಗಳಲ್ಲಿ ನೀರಿನ ವರದಿ ಅಧಿಕಾರಿಗಳು ನೀಡಲಿದ್ದು, ತುಮಕೂರು ನಗರದ ಜನತೆ ಗಾಬರಿಯಾಗಬೇಡಿ ಎಂದು ಜನತೆಯಲ್ಲಿ ಶಾಸಕರು ಮನವಿ ಮಾಡಿದರು.
ವರ್ಷದಲ್ಲಿ ಮೂರು ಬಾರಿ ಹರಿಯುತ್ತೆ ಹೇಮೆ
ಪ್ರಸಕ್ತ ವರ್ಷದಲ್ಲಿ ಹೇಮಾವತಿ ನೀರಿನ ತೊಂದರೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು, ಆದರೆ ನಮ್ಮ ಅದೃಷ್ಟವೋ ಏನೋ ಕಳೆದ ಮೂರು ವರ್ಷಗಳಿಂದಲೂ ಬುಗುಡನಹಳ್ಳಿ ಕೆರೆಗೆ ವರ್ಷದಲ್ಲಿ ಮೂರು ಮೂರು ಬಾರಿ ನೀರು ಹರಿಯುತ್ತಿದೆ, ಈ ವರ್ಷವೂ ಕೂಡ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದರಾದ ಜಿ.ಎಸ್‌.ಬಸವರಾಜ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಹೇಮಾವತಿಯ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್‌ ಮತ್ತಿತರೆ ಅಧಿಕಾರಿಗಳ ಸಹಕಾರದಿಂದ ತುಮಕೂರಿನ ಜನತೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ ಎಂದರು.
ಬುಗುಡನಹಳ್ಳಿ ಕೆರೆ ಜೂನ್‌ ಮೊದಲ ವಾರದಲ್ಲಿ ಸುಮಾರು ಮುಕ್ಕಾಲು ಕೆರೆ ತುಂಬಿದೆ, ಜೂನ್ ನಲ್ಲಿ ಇಷ್ಟು ನೀರು ತುಂಬಿರುವುದು ನಾವು ಎಂದೂ ನೋಡಿರಲಿಲ್ಲ, ಈ ಹಿಂದೆ ಜುಲೈನಲ್ಲಿ ಬಿಟ್ಟಿದ್ದರು, ಅದಾದ ನಂತರ ಜನವರಿ, ಫೆಬ್ರವರಿಗೆ ನೀರು ಬಿಡಿಸಿದ್ದೆವು, ಅದು ಬಿಟ್ಟರೆ ಈಗ ಜೂನ್ ನಲ್ಲಿ ಇಷ್ಟೊಂದು ನೀರು ಹರಿದು ಬಂದಿರುವುದು ನಮ್ಮ ತುಮಕೂರಿನ ಜನತೆಯ ಅದೃಷ್ಟವೆಂದೇ ಭಾವಿಸಬಹುದು. ತುಮಕೂರಿನ ಜನತೆಯ ಪರವಾಗಿ ಮುಖ್ಯಮಂತ್ರಿ, ಜಿಲ್ಲಾ ಸಚಿವರು, ಸಂಸದರು, ಅಧಿಕಾರಿಗಳಿಗೆ ತುಮಕೂರಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ತುಮಕೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್‌ ಅಹಮದ್‌, ಸದಸ್ಯರಾದ ಶ್ರೀನಿವಾಸ್‌, ನರಸಿಂಹಮೂರ್ತಿ, ಪ್ರಭಾರ ಆಯುಕ್ತರಾದ ಶುಭ, ಇಂನಿಯರ್‌ಗಳಾದ ಮಹೇಶ್‌, ವಿನಯ್‌, ಪ್ರಕಾಶ್‌, ಪರಿಸರ ಮಾಲಿನ್ಯ ಇಲಾಖೆಯ ಅಶೋಕ್‌, ಹೇಮಾವತಿ ಇಂಜನಿಯರ್‌ ರವಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!