ಪೌರ ಕಾರ್ಮಿಕರು, ಆಶಾಗಳಿಗೆ ಆಹಾರ ಕಿಟ್‌ ವಿತರಣೆ

162

Get real time updates directly on you device, subscribe now.

ತುಮಕೂರು: ನಗರದ ಎಂ.ಜಿ. ಕ್ರೀಡಾಂಗಣ ರಸ್ತೆಯಲ್ಲಿರುವ ಶ್ರೀಶಾರದಾದೇವಿ ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 19ನೇ ವಾರ್ಡ್ ನಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಘನತ್ಯಾಜ್ಯ ವಿಲೇವಾರಿ ಮಾಡುವ ಆಟೋ ಚಾಲಕರು, ವಾಟರ್ ಮನ್ ಗಳಿಗೆ ದಿನಸಿ ಕಿಟ್‌ ಹಾಗೂ ಬ್ರೆಡ್‌, ಬಿಸ್ಕೆಟ್‌, ಮೊಟ್ಟೆ ಸೇರಿದಂತೆ ಪೌಷ್ಠಿಕಾಂಶವುಳ್ಳ ಪದಾರ್ಥಗಳ ಕಿಟ್‌ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಕೊರೊನಾ ಮಹಾಮಾರಿಯನ್ನೂ ಲೆಕ್ಕಿಸದೆ ಪ್ರತಿನಿತ್ಯ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರು, ಕಸ ವಿಲೇವಾರಿ ಮಾಡುವ ಆಟೋ ಚಾಲಕರು, ಕೊರೊನಾ ಸೋಂಕಿತರ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಪ್ರತಿ ಮನೆ ಮನೆಗೂ ನೀರು ಬಿಡುವ ವಾಟರ್ ಮನ್ ಗಳಿಗೆ ಶಾರದಾದೇವಿ ನಗರ ಕ್ಷೇಮಾಭಿವೃದ್ಧಿ ಸಂಘದವರು ದಿನಸಿ ಕಿಟ್‌ ಹಾಗೂ ಪೌಷ್ಠಿಕ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಿ ಅವರ ನೆರವಿಗೆ ಧಾವಿಸಿರುವುದು ಶ್ಲಾಘನೀಯ ಎಂದರು.
ಕಳೆದ ಮೂರು ತಿಂಗಳಿಂದ ಕೊರೊನಾ ಮಹಾಮಾರಿ ಜನರನ್ನು ಭಯಭೀತರನ್ನಾಗಿಸಿ ಆತಂಕ ಸೃಷ್ಟಿ ಮಾಡಿದೆ. ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಲಾಕ್ ಡೌನ್‌ ಘೋಷಣೆ ಮಾಡಿದೆ. ಲಾಕ್ ಡೌನ್‌ ವೇಳೆಯಲ್ಲಿ ಪೌರಕಾರ್ಮಿಕರು, ಕಸ ವಿಲೇವಾರಿ ಮಾಡುವ ಆಟೋ ಚಾಲಕರು ತಮ್ಮ ಕುಟುಂಬವನ್ನೂ ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ನಗರವನ್ನು ಸುಂದರವನ್ನಾಗಿಸುತ್ತಿದ್ದಾರೆ. ಅದೇ ರೀತಿ ವಾಟರ್ ಮನ್ ಗಳು ಪ್ರತಿ ಮನೆ ಮನೆಗೆ ನೀರು ಬಿಡುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಆಶಾ ಕಾರ್ಯಕರ್ತೆಯರು ಸಹ ಸೋಂಕಿತರ ಆರೋಗ್ಯ ಕಾಪಾಡುವಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗೆ ಪ್ರತಿಯೊಬ್ಬರೂ ಕೊರೊನ ಮಹಾಮಾರಿ ನಿಯಂತ್ರಣಕ್ಕೆ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
19ನೇ ವಾರ್ಡ್ ನ ಮಹಾನಗರ ಪಾಲಿಕೆ ಸದಸ್ಯೆ ರೂಪಶ್ರೀ ಶೆಟ್ಟಳ್ಳಯ್ಯ ಮಾತನಾಡಿ, ಶಾರದಾದೇವಿನಗರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಪ್ರತಿಯೊಂದು ಸಾಮಾಜಿಕ ಕೆಲಸಗಳನ್ನೂ ನಮ್ಮ ಗಮನಕ್ಕೆ ತಂದು ನಡೆಸುತ್ತಿದ್ದಾರೆ. ನಾವೂ ಸಹ ಅವರೊಟ್ಟಿಗೆ ಕೆಲಸ ನಿರ್ವಹಿಸಿ ಅವರಿಗೆ ಸಹಕಾರ ನೀಡುತ್ತಿದ್ದೇವೆ ಎಂದರು.
ಕೊರೊನಾ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು, ನಿಮ್ಮ ಹಿಂದೆ ಒಂದು ಕುಟುಂಬವಿದೆ ಎಂಬುದನ್ನು ಮರೆಯಬಾರದು, ಮೊದಲು ಸ್ವಚ್ಛತೆ ಕಾಪಾಡಿಕೊಂಡು ಕೆಲಸ ನಿರ್ವಹಿಸುವಾಗಿ ಮಾಸ್ಕ್ ಮತ್ತು ಹ್ಯಾಂಡ್‌ ಗ್ಲೌಸ್‌ ಧರಿಸಿ ಕೆಲಸ ನಿರ್ವಹಿಸಬೇಕು, ನೀವು ಮನೆಗೆ ವಾಪಸ್‌ ತೆರಳುವಾಗ ಮನೆಯ ಹೊರಗೆ ಸ್ಯಾನಿಟೈಸರ್‌ ಬಳಸಿ ಕೈಗಳನ್ನು ತೊಳೆದುಕೊಂಡು ಮನೆಯೊಳಗೆ ಪ್ರವೇಶಿಸಬೇಕು ಎಂದು ಸಲಹೆ ನೀಡಿದರು.
ನೀವು 19ನೇ ವಾರ್ಡ್ ಅನ್ನು ಸುಂದರ ಸ್ವಚ್ಛಗೊಳಿಸಿ ಸಂಕ್ರಾಮಿಕ ರೋಗ ಹರಡದಂತೆ ಕೆಲಸ ನಿರ್ವಹಿಸುತ್ತಿದ್ದೀರಿ, ಇದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾರದಾದೇವಿನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪೊ.ಕೆ.ಚಂದ್ರಣ್ಣ, ಸಂಘದ ಅಧ್ಯಕ್ಷ ಲೋಕೇಶ್ವರಯ್ಯ, ಕಾರ್ಯದರ್ಶಿ ಜಿ.ಸಿ.ಎಸ್‌.ಆರಾಧ್ಯ, ಖಜಾಂಚಿ ಮಲ್ಲೇಶಯ್ಯ, ಸಾಗರನಹಳ್ಳಿ ಪ್ರಭು ಸೇರಿದಂತೆ ಸಂಘದ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!