ಹಿರಿಯ ಪತ್ರಕರ್ತ, ನಟ ಸುರೇಶ್ಚಂದ್ರ ನಿಧನ

215

Get real time updates directly on you device, subscribe now.

ಮಧುಗಿರಿ: ಹಿರಿಯ ಪತ್ರಕರ್ತ, ನಟ ಸುರೇಶ್ಚಂದ್ರ (69) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮೃತರ ಅಂತ್ಯಕ್ರಿಯೆ ತುಮಕೂರು ಜಿಲ್ಲೆಯ ಮಧುಗಿರಿಯ ಲಿಂಗೇನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ದೀರ್ಘಕಾಲ ಸಿನಿಮಾ, ರಾಜಕೀಯ ಕ್ಷೇತ್ರದ ಪತ್ರಕರ್ತರಾಗಿ ಸಂಜೆವಾಣಿ ಪತ್ರಿಕೆಯಲ್ಲಿ ಅವರು ದುಡಿದಿದ್ದರು, ಸರಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸಿನಿಮಾ, ರಂಗಭೂಮಿ, ಸಂಗೀತದ ಅಭಿರುಚಿ ಹೊಂದಿದ್ದ ಅವರು ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿದ್ದರು, ಭಾರತೀಯ ವಿದ್ಯಾಭವನದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಮಾಡಿದ್ದರು. ಪ್ರಜಾವಾಣಿಯಲ್ಲಿ ಮೂರು ತಿಂಗಳು ಇಂಟರ್ನ್‌ಶಿಪ್‌ ಮೂಲಕ ಪತ್ರಿಕೋದ್ಯಮಕ್ಕೆ ಮೊದಲ ಹೆಜ್ಜೆ ಇಟ್ಟಿದ್ದ ಸುರೇಶ್ಚಂದ್ರ ಅವರು ಸಂಜೆವಾಣಿಗೆ ಸೇರಿ ಅಲ್ಲಿಯೇ ಮುಂದುವರಿದು ಸಂಪಾದಕರಾಗಿ ನಿವೃತ್ತರಾಗಿದ್ದರು.
ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದ ಅವರು ಎಸ್‌.ನಾರಾಯಣ್‌ ನಿರ್ದೇಶನದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಚೆಲುವಿನ ಚಿತ್ತಾರದಲ್ಲಿ ನಾಯಕಿಯ ಅಪ್ಪನ ಪಾತ್ರದ ಮುಖಾಂತರ ಖ್ಯಾತಿ ಪಡೆದಿದ್ದರು. ಅವರು ನಟಿಸಿದ ನಂದ ಲವ್ಸ್ ನಂದಿತ, ಜಂಗ್ಲಿ, ಉಗ್ರಂ ಸಿನಿಮಾಗಳು ಹಿಟ್‌ ಆಗಿದ್ದವು.
80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದ ಸುರೇಶ್ಚಂದ್ರ ಅವರು ಶಂಕರ್ ನಾಗ್‌, ವಿಷ್ಣುವರ್ಧನ್, ಅಂಬರೀಶ್‌, ದೇವರಾಜ್‌ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು, ಸಿನಿಮಾದಲ್ಲಿ ಪೋಷಕ ನಟರಾಗಿ ತೆರೆ ಮೇಲೆ ಕಾಣಿಸಿಕೊಂಡ ಸುರೇಶ್ಚಂದ್ರ ಅವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ.

Get real time updates directly on you device, subscribe now.

Comments are closed.

error: Content is protected !!